ಕುಶಾಲನಗರ, ಆ.9 : ಒಂದೇ ಮನೆಯ ಇಬ್ಬರು ಮಹಿಳೆಯರು ಸಾವನಪ್ಪಿರುವ ಘಟನೆ ಸಮೀಪದ ಶಿರಂಗಾಲ ಗ್ರಾಮಪಂಚಾಯ್ತಿ ವ್ಯಾಪ್ತಿಯ ನಲ್ಲೂರುಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮನನೊಂದ ನವವಿವಾಹಿತೆ ಸೊಸೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡರೆ, ಘಟನೆಯಿಂದ ನಲುಗಿದ ಅತ್ತೆ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡ ಘಟನೆ ಇದಾಗಿದೆ.

ಕುಶಾಲನಗರ ಸಮೀಪದ ಶಿರಂಗಾಲ ಗ್ರಾಮದ ಗಣೇಶ್ ಎಂಬವರ ಪತ್ನಿ ಶೃತಿ (22) ನೇಣು ಬಿಗಿದು ಸಾವನಪ್ಪಿದರೆ ಶೃತಿಯ ಅತ್ತೆ ಪಾರ್ವತಮ್ಮ (55) ಹೃದಯಾಘಾತದಿಂದ ಮೃತಪಟ್ಟಿರುವದಾಗಿ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದೆ. ಘಟನೆಯ ಹಿನ್ನಲೆಯಲ್ಲಿ ಶಿರಂಗಾಲ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯುವದರೊಂದಿಗೆ ಸ್ವಲ್ಪಕಾಲ ಉದ್ವಿಗ್ನ ಸ್ಥಿತಿಯೂ ಸೃಷ್ಟಿಯಾಗಿತ್ತು.

ಮೂಲತಃ ಹೊಳೆನರಸಿಪುರ ತಾಲೂಕಿನ ಶ್ರವಣೂರು ಗ್ರಾಮದ ನಿಂಗರಾಜೇಗೌಡ ಹಾಗೂ ರಾಧಾ ದಂಪತಿಗಳ ಪುತ್ರಿ ಶೃತಿಯನ್ನು ಶಿರಂಗಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಲ್ಲೂರು ಕೊಪ್ಪಲು ಗ್ರಾಮದ ತಮ್ಮಣ್ಣ ಎಂಬವರ ಪುತ್ರ ಗಣೇಶ್ ಎಂಬಾತನಿಗೆ ಎರಡು ತಿಂಗಳ ಹಿಂದೆಯಷ್ಟೇ ವಿವಾಹ ಮಾಡಿಕೊಡಲಾಗಿತ್ತು. ಗಣೇಶ್ ಶಿರಂಗಾಲ ಗ್ರಾಮಪಂಚಾಯ್ತಿಯಲ್ಲಿ ಬಿಲ್ ಕಲೆಕ್ಟರ್ ಹುದ್ದೆ ನಿರ್ವಹಿಸುತ್ತಿದ್ದಾನೆ. ಪಟ್ಟಣದಲ್ಲಿ ಮನೆ ಮಾಡಿ ವಾಸ ಮಾಡಬೇಕೆಂದು ಶೃತಿ ತನ್ನ ಪತಿಯನ್ನು ಆಗಾಗ್ಗೆ ಒತ್ತಾಯಿಸುತ್ತಿದ್ದಳು ಎನ್ನಲಾಗಿದ್ದು, ಈ ಸಂಬಂಧ ಪತಿಯ ಸಹೋದರ ಲೋಕೇಶ್ ಎಂಬಾತ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಣ್ಣ ಪುಟ್ಟ ಗಲಾಟೆ ಕೂಡ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ.

ಈ ನಡುವೆ ಸೋಮವಾರ ರಾತ್ರಿ ಶೃತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವದಾಗಿ ದೂರು ದಾಖಲಾಗಿದೆ. ಘಟನೆ ನಡೆದ ನಂತರ ಮನೆಯಲ್ಲಿ ಮೃತಳ ಅತ್ತೆ ಪಾರ್ವತಮ್ಮನನ್ನು ಹೊರತುಪಡಿಸಿ ಮೃತಳ ಪತಿ, ಮಾವ ಹಾಗೂ ಪತಿಯ ಸಹೋದರ ತಲೆಮರೆಸಿಕೊಂಡಿದ್ದಾರೆ. ಮಾಹಿತಿ ತಿಳಿದ ಶೃತಿಯ ಪೋಷಕರು, ಕುಟುಂಬಸ್ಥರು ಆಗಮಿಸಿದ ಸಂದರ್ಭ ಸ್ಥಳೀಯರೊಂದಿಗೆ ಮಾತಿನ ಚಕಮಕಿ ನಡೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಅನುಮಾನಾಸ್ಪದ ಸಾವಿನ ಹಿನ್ನಲೆಯಲ್ಲಿ ಪೊಲೀಸರು ಪ್ರಾಥಮಿಕ ತನಿಖೆ ಕೈಗೊಂಡಿದ್ದಾರೆ.

ಅತ್ತೆ ಪಾರ್ವತಮ್ಮ ಪ್ರಕರಣದ ಕುರಿತು ಪೊಲೀರು ಮಹಜರು ನಡೆಸುವ ಸಂದರ್ಭ ಅಗತ್ಯ ಮಾಹಿತಿಗಳನ್ನು ಒದಗಿಸಿದ್ದಾರೆ. ಬೆಳಗ್ಗಿನ ವೇಳೆ ಮನೆಯಲ್ಲಿದ್ದ ಪಾರ್ವತಮ್ಮ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ನಡುವೆ ಪಾರ್ವತಮ್ಮಳನ್ನು ಶೃತಿಯ ಕುಟುಂಬದವರು ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ ಎನ್ನುವ ಆರೋಪಗಳು ಕೇಳಿಬಂದವು. ಪೊಲೀಸರು ಮಧ್ಯ ಪ್ರವೇಶಿಸಿ ಯಾವದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದ್ದಾರೆ. ಸ್ಥಳಕ್ಕೆ ಸೋಮವಾರಪೇಟೆ ತಹಸೀಲ್ದಾರ್ ಶಿವಪ್ಪ ಮತ್ತು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ.