ಸೋಮವಾರಪೇಟೆ, ನ.7: ಸೂಕ್ತ ಪೊಲೀಸ್ ಬಂದೋಬಸ್ತ್‍ನೊಂದಿಗೆ ಈ ಬಾರಿಯ ಟಿಪ್ಪು ಜಯಂತಿಯನ್ನು ತಾ. 10ರಂದು ಪೂರ್ವಾಹ್ನ 10 ಗಂಟೆಗೆ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಆಚರಿಸಲಾಗುವದು. ಸರ್ಕಾರಿ ಇಲಾಖೆಯ ಎಲ್ಲಾ ಅಧಿಕಾರಿಗಳು ಭಾಗವಹಿಸಬೇಕು ಎಂದು ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಕೃಷ್ಣ ಹೇಳಿದರು.

ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಟಿಪ್ಪು ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ತಾಲೂಕು ಆಡಳಿತದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ನಿಗದಿತ ಸಮಯಕ್ಕೆ ಕಾರ್ಯಕ್ರಮ ಪ್ರಾರಂಭ ವಾಗಲಿದೆ. ಸುಮಾರು 100ರಿಂದ 150 ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಕಾರ್ಯಕ್ರಮ 10 ಗಂಟೆಗೆ ಪ್ರಾರಂಭ ವಾಗಿ 5 ರಿಂದ 10 ನಿಮಿಷದಲ್ಲೂ ಮುಗಿಯಬಹುದು. ಒಂದು ಗಂಟೆ ಸಮಯವನ್ನೂ ತೆಗೆದುಕೊಳ್ಳಬಹುದು ಎಂದು ಅಭಿಪ್ರಾಯಿಸಿದರು.

ಟಿಪ್ಪು ಜಯಂತಿ ದಿನ 144 ಸೆಕ್ಷನ್ ಜಾರಿಯಾಗಬಹುದು. ಮುಂಜಾಗ್ರತಾ ಕ್ರಮವಾಗಿ ಮದ್ಯದಂಗಡಿಗಳನ್ನು ಬಂದ್ ಮಾಡಬಹುದು. ತಾಲೂಕಿನ ಎಲ್ಲಾ ಭಾಗಗಳಲ್ಲೂ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸ್ ಇಲಾಖೆ ಕಾರ್ಯಪ್ರವೃತ್ತವಾಗಲಿದೆ. ಪ್ರತಿ ಹೋಬಳಿಯಲ್ಲೂ ಪರಿಸ್ಥಿತಿ ಯನ್ನು ಅವಲೋಕಿಸಲು ಅಧಿಕಾರಿಗಳ ತಂಡ ನಿಯೋಜಿಸಲಾಗಿದೆ. ಕಾರ್ಯಕ್ರಮದ ಬಗ್ಗೆ ಯಾವದೇ ಆತಂಕ ಬೇಡ ಎಂದು ಸ್ಪಷ್ಟಪಡಿಸಿದರು.

ಟಿಪ್ಪು ಜಯಂತಿ ಕಾರ್ಯಕ್ರಮದ ರೂಪುರೇಷೆಗಳನ್ನು ಸಭೆಯಲ್ಲಿ ಸಿದ್ದಪಡಿಸಲಾಯಿತು. ವೇದಿಕೆ ನಿರ್ಮಾಣ ಸೇರಿದಂತೆ ಇತರ ಕೆಲಸಗಳನ್ನು ವಿವಿಧ ಇಲಾಖೆಗಳಿಗೆ ವಹಿಸಲಾಯಿತು. ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಶಿಷ್ಟಾಚಾರದಂತೆ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಇತರ ಜನಪ್ರತಿನಿಧಿಗಳ ಹೆಸರನ್ನು ಮುದ್ರಿಸಲಾಗಿದ್ದು, ನಾಳೆ ಆಹ್ವಾನ ಪತ್ರಿಕೆಯನ್ನು ಅಂತಿಮಗೊಳಿಸಲು ತೀರ್ಮಾನಿಸಲಾಯಿತು.

500ಕ್ಕೂ ಅಧಿಕ ಪೊಲೀಸರು

ಸಭೆಯ ನಂತರ ಪತ್ರಕರ್ತ ರೊಂದಿಗೆ ಮಾತನಾಡಿದ ಡಿವೈಎಸ್‍ಪಿ ಸಂಪತ್‍ಕುಮಾರ್ ಅವರು, ಟಿಪ್ಪು ಜಯಂತಿ ಸರ್ಕಾರದ ಕಾರ್ಯಕ್ರಮ ವಾಗಿರುವದರಿಂದ ಆಚರಿಸಲೇ ಬೇಕಿದ್ದು, ಶಾಂತಿಯುತವಾಗಿ ನಡೆಸಲು ಪೊಲೀಸ್ ಇಲಾಖೆ ಸರ್ವ ಸನ್ನದ್ಧವಾಗಿದೆ. 500ಕ್ಕೂ ಅಧಿಕ ಪೊಲೀಸರು ಬಂದೋಬಸ್ತ್‍ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಸೋಮವಾರಪೇಟೆ ತಾಲೂಕು ಕೇಂದ್ರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಶಸ್ತ್ರ ಸಜ್ಜಿತ ದಳ, ಕೆಎಸ್‍ಆರ್‍ಪಿ, ಜಿಲ್ಲಾ ಮೀಸಲು ಪಡೆಯ ಸಿಬ್ಬಂದಿಗಳೂ ಸೇರಿದಂತೆ 300ಕ್ಕೂ ಅಧಿಕ ಸಿವಿಲ್ ಪೊಲೀಸರು, ಅಡಿಷನಲ್ ಎಸ್.ಪಿ., ಈರ್ವರು ಡಿವೈಎಸ್‍ಪಿ, 6 ಮಂದಿ ಪೊಲೀಸ್ ವೃತ್ತ ನಿರೀಕ್ಷಕರು, 23 ಮಂದಿ ಠಾಣಾಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ. ಇದರೊಂದಿಗೆ ತಾಲೂಕಿನ ವಿವಿಧ ಭಾಗಗಳಿಗೂ ಪೊಲೀಸರನ್ನು ನಿಯೋಜಿಸ ಲಾಗುವದು ಎಂದರು.

144 ಸೆಕ್ಷನ್ ಜಾರಿಯಾಗಿರುವ ದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗೂಡುವದು ನಿಷೇಧಿಸಲ್ಪಟ್ಟಿ ರುತ್ತದೆ. ಒಂದು ವೇಳೆ ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯಾರಾದರೂ ಮುಂದಾದಲ್ಲಿ/ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಪ್ರಯತ್ನಿಸಿದ್ದಲ್ಲಿ ಯಾವದೇ ಮುಲಾಜಿಲ್ಲದೆ ವಶಕ್ಕೆ ಪಡೆದು ಬಳ್ಳಾರಿ ಜೈಲ್‍ಗೆ ಕಳುಹಿಸಲಾಗುವದು ಎಂದರು.

ಸಭೆಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಪರಶಿವಮೂರ್ತಿ, ಠಾಣಾಧಿಕಾರಿ ಶಿವಣ್ಣ, ಸಮಾಜ ಕಲ್ಯಾಣಾಧಿಕಾರಿ ರಾಮೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ, ಕೃಷಿ ಇಲಾಖಾ ಸಹಾಯಕ ನಿರ್ದೇಶಕ ರಾಜಶೇಖರ್, ಬಿಸಿಎಂ ವಿಸ್ತರಣಾಧಿಕಾರಿ ಶ್ರೀನಿವಾಸ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.