ಸೋಮವಾರಪೇಟೆ,ಆ.30: ತಾಲೂಕು ಪಂಚಾಯಿತಿ ಸಮೀಪ ನಿರ್ಮಿಸಲು ಉದ್ದೇಶಿಸಿರುವ ತಾಲೂಕು ಅಂಬೇಡ್ಕರ್ ಭವನಕ್ಕೆ ರೂ.1.5 ಕೋಟಿ ಹಣ ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಾಲೂಕು ತಹಶೀಲ್ದಾರ್ ಹಾಗೂ ಪ.ಜಾತಿ ಮತ್ತು ಪಂಗಡಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಿ.ಸಿ.ಶಿವಪ್ಪ ತಿಳಿಸಿದರು.ಇಲ್ಲಿನ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಈ ಹಿಂದೆ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ರೂ.1ಕೋಟಿಗೆ ಹಣ ಮಂಜೂರಾತಿಗಾಗಿ ಸಮಾಜ ಕಲ್ಯಾಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ತಾಲೂಕು ಕೇಂದ್ರಗಳಲ್ಲಿ ಭವನ ನಿರ್ಮಾಣಕ್ಕೆ ರೂ.1.5ಕೋಟಿ ಹಣವನ್ನು ರಾಜ್ಯ ಸರ್ಕಾರ ನೀಡುತ್ತಿದ್ದು, ಪರಿಷ್ಕøತ ಅಂದಾಜು ಪಟ್ಟಿಯೊಂದಿಗೆ ಸಲ್ಲಿಸುವಂತೆ ಸಚಿವ ಎಚ್.ಆಂಜನೇಯ ಅವರು ಸೂಚಿಸಿದ ಹಿನ್ನೆಲೆಯಲ್ಲಿ ಶಾಸಕರ ಪತ್ರದೊಂದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಸ್ಮಶಾನಕ್ಕಾಗಿ ಸ್ಥಳ ಮೀಸಲಿರಿಸುವಂತೆ ಸರ್ಕಾರ ಆದೇಶ ನೀಡಿದ್ದರೂ ಈವರೆಗೂ ಯಾವದೇ ಕ್ರಮ ಜರುಗಿಸಿಲ್ಲ. ಕಳೆದ ಮೂರು ವರ್ಷಗಳಲ್ಲಿ ಐವರು ತಹಶೀಲ್ದಾರ್‍ರವರುಗಳು ಅಧಿಕಾರಕ್ಕೆ ಬಂದು ಹೋದರೂ ಸಹ ಸ್ಮಶಾನ ಜಾಗದ ಸಮಸ್ಯೆ ಪರಿಹಾರವಾಗಿಲ್ಲ ಎಂದು ಜಿಪಂ ಮಾಜಿ ಅಧ್ಯಕ್ಷೆ ಎಚ್.ಬಿ.ಜಯಮ್ಮ ಆರೋಪಿಸಿದರು.
ಈಗಾಗಲೇ ತಾಲೂಕಿನಾದ್ಯಂತ ಸ್ಮಶಾನಕ್ಕೆ ಸ್ಥಳ ಗುರುತಿಸಲಾಗಿದೆ. ಸದ್ಯದಲ್ಲೇ ಸಮಸ್ಯೆಯನ್ನು ಬಗೆಹರಿಸಲಾಗುವದು ಎಂದು ತಹಶೀಲ್ದಾರ್ ಶಿವಪ್ಪ ತಿಳಿಸಿದರು. ವಕೀಲ ಬಿ.ಈ.ಜಯೇಂದ್ರ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಇದೇ ಹೇಳಿಕೆಯನ್ನು ತಹಶೀಲ್ದಾರ್‍ಗಳು ನೀಡುತ್ತಾ ಬಂದಿದ್ದಾರೆ. ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ ಎಂದು ದೂರಿದರು.
ಈ ವಿಚಾರಕ್ಕೆ ಧ್ವನಿಗೂಡಿಸಿದ ಸಮಿತಿ ಸದಸ್ಯ ರಾಜಪ್ಪ, ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಮಾತಿಗೆ ಯಾವದೇ ಕಿಮ್ಮತ್ತಿಲ್ಲ, ಸಿಬ್ಬಂದಿಗಳು ಅವರಿಗೆ ಇಷ್ಟ ಬಂದಂತೆ ಕೆಲಸ ಮಾಡುತ್ತಿದ್ದಾರೆ. ಇನ್ನಾದರೂ ತಾಲೂಕು
ದಂಡಾಧಿಕಾರಿಗಳು ಸಿಬ್ಬಂದಿಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡು ಕೆಲಸ ಮಾಡಿಸಲಿ ಎಂದು ಸಲಹೆ ನೀಡಿದರು.
ಕಳೆದ ವರ್ಷ ಏಪ್ರಿಲ್‍ನಲ್ಲಿ ಮೃತಪಟ್ಟ ದಲಿತ ವಿದ್ಯಾರ್ಥಿ ಸ್ವೀಕಾರ್ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಇದು ಪೊಲೀಸ್ ಇಲಾಖೆಯ ದಲಿತ ವಿರೋಧಿ ನೀತಿಯನ್ನು ಬಿಂಬಿಸುತ್ತದೆ ಎಂದು ಸಮಿತಿ ಸದಸ್ಯ ಡಿ.ಎಸ್. ನಿರ್ವಾಣಪ್ಪ ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಪರಶಿವಮೂರ್ತಿಯವರನ್ನು ತರಾಟೆಗೆ ತೆಗೆದುಕೊಂಡರು. ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬಡ ನಿವೇಶನ ರಹಿತರಿಗೆ ವಿತರಿಸಲು ಬಾಕಿ ಉಳಿದಿರುವ 21 ನಿವೇಶನಗಳ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸೂಕ್ತ ಮಾಹಿತಿ ಯನ್ನು ಪಪಂ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸದೇ ಇರುವದಕ್ಕೆ ಮುಖ್ಯಾಧಿಕಾರಿ ನಾಚಪ್ಪ ಅವರನ್ನು ಸಮಿತಿ ಸದಸ್ಯರು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿಗಳು, ನಿವೇಶನ ಪ್ರಕ್ರಿಯೆಯನ್ನು ಸೂಚನಾ ಫಲಕದಲ್ಲಿ ಪ್ರಕಟಿಸಿ ಪಾರದರ್ಶಕವಾಗಿ ವಿತರಿಸಲು ಕ್ರಮ ತೆಗೆದುಕೊಳ್ಳುವದಾಗಿ ಹೇಳಿದರು.
ತಾಲೂಕು ಕಚೇರಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಜಾತಿ ಮತ್ತು ಆದಾಯ ದೃಢೀಕರಣ ಪತ್ರಕ್ಕೆ ಸಿಬ್ಬಂದಿಗಳು ಹಣಕ್ಕಾಗಿ ಪೀಡಿಸುತ್ತಿ ದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಜನಾಂಗದವರು ಸರ್ಕಾರದ ಯಾವದೇ ಯೋಜನೆಯ ಪ್ರಯೋಜ ನ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಸದಸ್ಯೆ ಸೋಮಕ್ಕ ತಹಶೀಲ್ದಾರ್ ಸಮ್ಮುಖದಲ್ಲಿಯೇ ಗಂಭೀರವಾಗಿ ಆರೋಪಿಸಿದರು.
ತಾಲೂಕಿನ ಸಿದ್ಧಲಿಂಗಪುರ ಗ್ರಾಮದ ಸುರೇಶ್‍ಕುಮಾರ್ ಅವರಿಗೆ ಸರ್ವೆ ನಂ.9ರ 4.75 ಏಕ್ರೆ ಜಮೀನನ್ನು ನೀಡಬೇಕಾಗಿದ್ದು, ಮೂರು ಬಾರಿ ಸರ್ವೆ ಮಾಡಿದರೂ 3.20 ಏಕ್ರೆ ಮಾತ್ರ ಜಾಗವಿರುವದಾಗಿ ಸರ್ವೆ ಇಲಾಖೆ ಯವರು ತಿಳಿಸಿದ್ದಾರೆ. ಇದರಿಂದ ಸುರೇಶ್‍ಕುಮಾರ್ ಅವರಿಗೆ ಅನ್ಯಾಯವಾಗುತ್ತಿದ್ದು, ಸರ್ವೆ ಇಲಾಖೆ ಮೇಲ್ವಿಚಾರಕ ಹಾಗೂ ಶನಿವಾರಸಂತೆ ಕಂದಾಯ ಇಲಾಖೆಯ ಸಿಬ್ಬಂದಿಗಳು ಶಾಮೀಲಾಗಿದ್ದಾರೆ. ಕೂಡಲೇ ಅವರನ್ನು ಅಮಾನತು ಗೊಳಿಸ ಬೇಕೆಂದು ಡಿ.ಎಸ್. ನಿರ್ವಾಣಪ್ಪ ತಹಶೀಲ್ದಾರ್ ಅವರನ್ನು ಆಗ್ರಹಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿ ಪಿ.ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಮೇಗೌಡ, ಕೃಷಿ ಇಲಾಖೆ ಅಧಿಕಾರಿ ಡಾ.ರಾಜಶೇಖರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.