ಮಡಿಕೇರಿ, ಜೂ. 10: ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿದ್ದು, ಅಕ್ರಮ ಮರಳು ಮಾಫಿಯಾವನ್ನು ನಿಯಂತ್ರಣ ಮಾಡಬೇಕು. ಇಲ್ಲದಿದ್ದಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಎಚ್ಚರಿಕೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಮಾಹಿತಿ ಪಡೆದು ಅವರು ಮಾತನಾಡಿದರು. ಸಂಬಂಧಪಟ್ಟ ಅಧಿಕಾರಿಗಳಿಗೆ ಅಕ್ರಮ ಮರಳು ಸಾಗಾಣಿಕೆ ಬಗ್ಗೆ ಗೊತ್ತಿರುತ್ತದೆ. ಆದರೆ ಯಾವದೇ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿಲ್ಲ ಎಂಬ ಸುಳ್ಳು ಮಾಹಿತಿಯನ್ನು ನೀಡಲಾಗುತ್ತಿದೆ. ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ ಎಂದರು.
ಅಧಿಕಾರಿಗಳು ಮರಳು ಮಾಫಿಯವನ್ನು ಗಂಭೀರವಾಗಿ ಪರಿಗಣಿಸಬೇಕು. ಕಣ್ಣೊರೆಸುವ ತಂತ್ರ ಬೇಡ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪ್ರತಿದಿನ ಸ್ಥಳಕ್ಕೆ ತೆರಳಿ ಅಕ್ರಮ ಮರಳು ಸಾಗಾಣಿಕೆಯನ್ನು ತಡೆಯಬೇಕು. ಈ ಸಂಬಂಧ ಪೊಲೀಸ್ ರಕ್ಷಣೆ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಸಲಹೆ ಮಾಡಿದರು. ವೈದ್ಯಕೀಯ ಕಾಲೇಜು, ನ್ಯಾಯಾಲಯ ಕಟ್ಟಡ, ಮಹದೇವಪೇಟೆ ರಸ್ತೆ ಅಗಲೀಕರಣ ಸೇರಿದಂತೆ ಜಿಲ್ಲೆಯಲ್ಲಿ ಸರ್ಕಾರಕ್ಕೆ ಸಂಬಂಧಪಟ್ಟ ಹಲವು ಕಾಮಗಾರಿಗಳು ನಡೆಯುತ್ತಿವೆ. ಇವುಗಳಿಗೆ ಮರಳು ದೊರೆಯಬೇಕು. ಮರಳು ಸ್ಟಾಕ್ ಇಲ್ಲ ಎಂಬ ಸಬೂಬು ಹೇಳುವದು ಬೇಡ ಎಂದು ಜಿಲ್ಲಾಧಿಕಾರಿ ಹೇಳಿದರು. ಅಕ್ರಮ ಹಾಗೂ ನಿಗದಿಗಿಂತ ಹೆಚ್ಚು ಮರಳು ಸಾಗಾಣಿಕೆಯಿಂದ ರಸ್ತೆ ಹಾಳಾಗುತ್ತದೆ. ಅಪಘಾತಗಳು ಸಂಭವಿಸುತ್ತವೆ. ಸರ್ಕಾರಕ್ಕೆ ತೆರಿಗೆ ಹಣ ಬರುವದಿಲ್ಲ. ಸ್ಥಳೀಯರಿಗೆ ಮರಳು ದೊರೆಯುವದಿಲ್ಲ. ಇವುಗಳನ್ನು ಅಧಿಕಾರಿಗಳು ಗಮನಿಸಿ, ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ಪಷ್ಟ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಮರಳು ಬೇಡಿಕೆ ಎಷ್ಟಿದೆ, ಎಷ್ಟು ಮರಳು ಬ್ಲಾಕ್‍ಗಳನ್ನು ಗುರುತಿಸಲಾಗಿದೆ. ಮರಳು ಗಣಿಗಾರಿಕೆ ಎಲ್ಲಿ ನಡೆಯುತ್ತಿದೆ, ಮರಳು ಬ್ಲಾಕ್‍ಗಳಲ್ಲಿ ಎಷ್ಟು ಲಾರಿಗಳು ಸಂಚರಿಸುತ್ತಿವೆ. ಜಿಪಿಎಸ್ ಅನ್ನು ಎಷ್ಟು ಲಾರಿಗೆ ಅಳವಡಿಸಲಾಗಿದೆ ಮತ್ತಿತರ ಮಾಹಿತಿಯನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು. ಮರಳು ಗಣಿಗಾರಿಕೆಗೆ ಸಂಬಂಧಪಟ್ಟಂತೆ ನಿರ್ವಹಣೆಯಲ್ಲಿ ವಿಫಲವಾಗಿರುವದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದ್ದರಿಂದ ಸ್ಟಾಕ್ ಯಾರ್ಡ್‍ಗಳನ್ನು ಬಲಪಡಿಸಬೇಕು ಎಂದು ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿ ನಡೆಯುತ್ತಿರುವ ಸರ್ಕಾರಿ ಕಾಮಗಾರಿಗಳಿಗೆ ಮರಳು ಬೇಡಿಕೆ ಎಷ್ಟಿದೆ ಎಂಬದನ್ನು ತಿಳಿದಿರಬೇಕು. ಕೊಡ್ಲಿಪೇಟೆಯಲ್ಲಿ ಜೆಸಿಬಿ ಬಳಸಿ ರಾತ್ರಿ ವೇಳೆಯಲ್ಲಿ ಮರಳು ಸಾಗಾಣಿಕೆ ನಡೆಸುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದೆ. ರಾತ್ರಿ ವೇಳೆಯಲ್ಲಿ ಸಾಗಾಟ ಮಾಡುವ ಮರಳು ಸ್ಟಾಕ್ ಯಾರ್ಡ್‍ಗೆ ಬರುವದಿಲ್ಲ. ಆದ್ದರಿಂದ ಮರಳು ಗಣಿಗಾರಿಕೆ ಟೆಂಡರ್ ಪಡೆದಿರುವವರನ್ನು ಕರೆಸಿ ಮಾತನಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮರಳು ತೆಗೆದುಕೊಂಡು ಹೋಗಲು ದರ ನಿಗದಿ ಮಾಡಲಾಗಿದೆಯೇ, ಅಗತ್ಯಕ್ಕಿಂತ ಹೆಚ್ಚು ಮರಳು ಸಾಗಾಣಿಕೆ ಮಾಡಲಾಗುತ್ತಿದೆ. ಲಾರಿಗಳ ನಂಬರ್ ಪ್ಲೇಟ್, ಜಿಪಿಎಸ್ ಅಳವಡಿಸಲಾಗಿದೆಯೇ ಎಂಬದನ್ನು ಪರಿಶೀಲಿಸಬೇಕಿದೆ ಎಂದರು.
ಮಂಗಳೂರು ಕಡೆಯಿಂದ ಬರುವ ಲಾರಿಗಳ ತಪಾಸಣೆ ಮಾಡುವವರು ಯಾರು, ಅಕ್ರಮ ಮರಳು ತಪಾಸಣೆ ಮಾಡುವ ಸಂದರ್ಭದಲ್ಲಿ ಪೊಲೀಸ್ ರಕ್ಷಣೆ ಪಡೆಯಿರಿ, ಎಷ್ಟು ಬೇಕಾದರೂ ಪೊಲೀಸ್ ಪಡೆ ನಿಯೋಜಿಸಲು ಸಿದ್ಧ. ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುವವರನ್ನು ಕಪ್ಪುಪಟ್ಟಿಗೆ ಏಕೆ ಸೇರಿಸಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಶ್ನಿಸಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಮಹೇಶ ಅವರು ಜಿಲ್ಲೆಯ ತೊರೆನೂರು, ಕೆಳಕೊಡ್ಲಿ, ಹಂಪಾಪುರ, ಶಾಂತಪುರ, ಕಟ್ಟೆಪುರಗಳಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದೆ. ಮಳೆಗಾಲ ಆರಂಭವಾಗಿದ್ದು, ತಾ. 10 ರಿಂದ ಮರಳು ಗಣಿಗಾರಿಕೆ ನಿಷೇಧಕ್ಕೆ ಆದೇಶ ಹೊರಡಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.
ಜಿ.ಪಂ. ಸಿಇಓ ಚಾರುಲತಾ ಸೋಮಲ್ ಅಕ್ರಮ ಮರಳು ಸಾಗಾಣಿಕೆ ತಡೆಯುವ ಬಗ್ಗೆ ಹಲವು ಸಲಹೆ ನೀಡಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಸುಮಿತ್ರ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಎಂ.ಜಿ. ಹೆಗಡೆ, ಎಇಇ ಸತ್ಯನಾರಾಯಣ, ಪರಿಸರ ಇಲಾಖೆ ಅಧಿಕಾರಿ ಮತ್ತಿತರರು ಹಲವು ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಗುರುವಾರ ನಗರದ ನಗರಸಭೆ, ತಹಶೀಲ್ದಾರ್ ಕಚೇರಿ ಹಾಗೂ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಹಲವು ಸಲಹೆ ಸೂಚನೆ ನೀಡಿದರು.