ವೀರಾಜಪೇಟೆ, ಜೂ. 30: ಮೂರು ವರ್ಷಗಳ ನಂತರ ಪ್ರಥಮ ಬಾರಿಗೆ ಶಾಸಕ ಕೆ.ಜಿ. ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ವೀರಾಜಪೇಟೆ ತಾಲೂಕಿನ ಅಕ್ರಮ-ಸಕ್ರಮ ಸಮಿತಿ ಸಭೆಯಲ್ಲಿ ಮಡಿಕೇರಿ ತಾಲೂಕಿನ ಎರಡು ಅರ್ಜಿಗಳನ್ನು ಪರಿಶೀಲಿಸಿ ಒತ್ತುವರಿ ಜಾಗವನ್ನು ಸಕ್ರಮಗೊಳಿಸಲಾಯಿತು.

ಮಡಿಕೇರಿ ತಾಲೂಕು ತಹಶೀಲ್ದಾರ್ ಕುಂಞಮ್ಮ ಒಟ್ಟು 7 ಅರ್ಜಿಗಳನ್ನು ಸಲ್ಲಿಸಿದ್ದು, ಉಳಿದ 5 ಅರ್ಜಿಗಳಿಗೆ ಸೂಕ್ತವಾದ ದಾಖಲೆಗಳಿಲ್ಲವೆಂಬ ಕಾರಣಕ್ಕಾಗಿ ಮುಂದಿನ ಸಮಿತಿ ಸಭೆಗೆ 5 ಕಡತ ಗಳನ್ನು ಬಾಕಿ ಉಳಿಸಿಕೊಳ್ಳಲಾಯಿತು.

ವೀರಾಜಪೇಟೆ ತಾಲೂಕು ತಹಶೀಲ್ದಾರ್ ಮಹದೇವ ಸ್ವಾಮಿ ಅವರು ಸಲ್ಲಿಸಿದ ಅಕ್ರಮ-ಸಕ್ರಮದ 11 ಅರ್ಜಿಗಳನ್ನು ಪರಿಶೀಲನೆ ಮಾಡಿದರೂ ಇದಕ್ಕೆ ದಾಖಲೆಗಳ ಪುಸ್ತಕಗಳಿಲ್ಲ ಎಂದು 11 ಕಡತಗಳನ್ನು ಬಾಕಿ ಉಳಿಸಿಕೊಳ್ಳಲಾಯಿತು. ಅಕ್ರಮ-ಸಕ್ರಮ ಸಮಿತಿ ವಿರುದ್ಧದ ದೂರಿನ ಮೇರೆ ತಾಲೂಕು ಕಚೇರಿಯ ಭೂ ಮಂಜೂರು, ಭೂ ದಾಖಲಾತಿಗೆ ಸಂಬಂಧಿಸಿದ ದಾಖಲೆಗಳನ್ನು ಹಾಗೂ ಅಕ್ರಮ-ಸಕ್ರಮ ಸಮಿತಿ ಎಲ್ಲಾ ಭೂ ಮಂಜೂರಾತಿಯ ದಾಖಲೆ ಪುಸ್ತಕಗಳನ್ನು ಲೋಕಾಯುಕ್ತ ಅಧಿಕಾರಿಗಳು ವಶಪಡಿಸಿಕೊಂಡು ಬೆಂಗಳೂರಿಗೆ ತೆಗೆದುಕೊಂಡು ಹೋಗಿರುವದರಿಂದ ಅಕ್ರಮ-ಸಕ್ರಮ ಸಮಿತಿಗೆ ಸಲ್ಲಿಸುವ ಕಡತಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ, ಇದಕ್ಕಾಗಿ ವೀರಾಜಪೇಟೆ ತಾಲೂಕಿನ ಕಡತಗಳನ್ನು ಬಾಕಿ ಉಳಿಸಿಕೊಳ್ಳಬೇಕಾಗಿದೆ ಎಂದು ಶಾಸಕ ಬೋಪಯ್ಯ ಸಮಿತಿ ಸಭೆಗೆ ತಿಳಿಸಿದರು.

ವೀರಾಜಪೇಟೆ ಶಾಸಕರ ಕೊಠಡಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತಾಲೂಕು ಅಕ್ರಮ-ಸಕ್ರಮ ಸಮಿತಿ ಸದಸ್ಯರಾದ ಕೆ. ಬೋಪಣ್ಣ, ರಾಮಕೃಷ್ಣ ಹಾಜರಿದ್ದು ಕಡತಗಳ ಪರಿಶೀಲನೆ ನಡೆಸಿದರು.

ವೀರಾಜಪೇಟೆ ವಿಭಾಗದ ರೆವಿನ್ಯೂ ಇನ್ಸ್‍ಪೆಕ್ಟರ್ ಹೆಚ್.ಕೆ. ಶಿವಪ್ಪ, ಸಿಬ್ಬಂದಿಗಳು, ಶಿರೆಸ್ತೆದಾರ್ ಪೊನ್ನು ಮಡಿಕೇರಿ ವಿಭಾಗದ ರೆವನ್ಯೂ ಇನ್ಸ್‍ಪೆಕ್ಟರ್ ಸಿಬ್ಬಂದಿಗಳು ಹಾಜರಿದ್ದರು.

ಸರಕಾರ ಬದಲಾದ ನಂತರ ಸರಕಾರ ಹೊಸ ಅಕ್ರಮ-ಸಕ್ರಮ ಸಮಿತಿಯನ್ನು ರಚಿಸಲು ಎರಡು ವರ್ಷ ವಿಳಂಬವಾಯಿತು. ಇದರಿಂದ ಸಮಿತಿಯ ಕಡತ ಪರಿಶೀಲನೆಯ ಕಾರ್ಯ ವೈಖರಿಯು ವಿಳಂಬವಾಗಲು ಕಾರಣವಾಯಿತು ಎಂದು ಶಾಸಕ ಬೋಪಯ್ಯ ಮಾಧ್ಯಮದವರಿಗೆ ತಿಳಿಸಿದರು.