ಸೋಮವಾರಪೇಟೆ,ಜೂ.26: ಇಲ್ಲಿನ ವಿಎಸ್‍ಎಸ್‍ಎನ್ ಬ್ಯಾಂಕ್ ಮುಂಭಾಗದಿಂದ ಮಹದೇಶ್ವರ ಬಡಾವಣೆ, ಜನತಾ ಕಾಲೋನಿಗೆ ತೆರಳುವ ಮುಖ್ಯರಸ್ತೆಯ ಎರಡೂ ಬದಿಗಳಲ್ಲಿ ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸುತ್ತಿರುವದರಿಂದ ಪಾದಚಾರಿಗಳು ಹಾಗೂ ವಾಹನ ಚಾಲಕರಿಗೆ ಸಮಸ್ಯೆ ಎದುರಾಗಿದೆ.

ವಾರದ ಸಂತೆ ದಿನವಾದ ಸೋಮವಾರದಂದು ಕ್ಲಬ್ ರಸ್ತೆಯಲ್ಲಿ ಏಕಮುಖ ಸಂಚಾರ ಅಳವಡಿಸಿರುವ ಹಿನ್ನೆಲೆ ನಗರಕ್ಕೆ ಆಗಮಿಸುವ ವಾಹನಗಳು ಅಲೋಕ ಸಭಾಂಗಣದ ಮೂಲಕ ಡಿಸಿಸಿ ಬ್ಯಾಂಕ್, ಗ್ರಂಥಾಲಯ ಮುಂಭಾಗದ ರಸ್ತೆಯನ್ನೇ ಅವಲಂಬಿಸಬೇಕಿದೆ.

ಇದು ಮಹದೇಶ್ವರ ಬಡಾವಣೆ, ಜನತಾ ಕಾಲೋನಿ, ಅಶೋಕ ಬಡಾವಣೆಗಳಿಗೆ ತೆರಳುವ ಮುಖ್ಯರಸ್ತೆಯೂ ಆಗಿರುವದರಿಂದ ಸಹಜವಾಗಿ ವಾಹನ ಹಾಗೂ ಜನ ಸಂಚಾರ ಅಧಿಕವಿರುತ್ತದೆ. ಆದರೆ ವಿಎಸ್‍ಎಸ್‍ಎನ್ ಬ್ಯಾಂಕ್‍ನಿಂದ ಡಿಸಿಸಿ ಬ್ಯಾಂಕ್‍ನ ವರೆಗೆ ಈ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳನ್ನು ನಿಲುಗಡೆಗೊಳಿಸುವದರಿಂದ ವಾಹನಗಳಿರಲಿ;ಪಾದಚಾರಿಗಳ ಸಂಚಾರಕ್ಕೂ ತೊಡಕಾಗಿ ಪರಿಣಮಿಸಿದೆ.

ಎರಡೂ ಭಾಗದಲ್ಲಿ ವಾಹನಗಳ ನಿಲುಗಡೆಯಿರುವದರಿಂದ ಅನ್ಯ ವಾಹನಗಳ ಸಂಚಾರಕ್ಕೆ ತೊಡಕುಂಟಾಗಿದ್ದು, ಸಣ್ಣಪುಟ್ಟ ಅಪಘಾತಗಳು, ಚಾಲಕರುಗಳ ನಡುವೆ ವಾಗ್ವಾದಗಳು ಸಾಮಾನ್ಯವೆನಿಸಿವೆ. ಸೋಮವಾರದಂದು ಬೆಳಗ್ಗೆನಿಂದ ಸಂಜೆಯವರೆಗೂ ವಾಹನಗಳನ್ನು ನಿಲುಗಡೆಗೊಳಿಸುತ್ತಿರುವದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳ ಓಡಾಟಕ್ಕೆ ತೊಡಕುಂಟಾಗಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಸ್ಪಂದನೆ ಶೂನ್ಯವಾಗಿದೆ ಎಂದು ಈ ಭಾಗದ ವರ್ತಕರು ದೂರಿದ್ದಾರೆ. ತಿಂಗಳ 15 ದಿನ ಈ ರಸ್ತೆಯ ಬಲ ಬದಿ, ಉಳಿದ 15 ದಿನ ರಸ್ತೆಯ ಎಡ ಬದಿ ವಾಹನಗಳ ನಿಲುಗಡೆಗೆ ಕ್ರಮಕೈಗೊಂಡರೆ ಸಮಸ್ಯೆ ಬಗೆಹರಿಯಲಿದೆ. ಈ ಬಗ್ಗೆ ಸೋಮವಾರಪೇಟೆ ಪೊಲೀಸರು ಹಾಗೂ ಪಟ್ಟಣ ಪಂಚಾಯಿತಿ ತುರ್ತು ಕ್ರಮ ಕೈಗೊಳ್ಳಬೇಕಾದ ಅಗತ್ಯತೆಯಿದೆ.