ಶ್ರೀಮಂಗಲ, ಮೇ 11: 2014-15ರ ಸಾಲಿನಲ್ಲಿ ಅತಿವೃಷ್ಟಿಗೆ ತುತ್ತಾಗಿ ನಷ್ಟಗೊಂಡ ಫಸಲುಗಳಿಗೆ ಪರಿಹಾರ ಕೋರಿ ಸಲ್ಲಿಸಿದ ಬೆಳೆಗಾರರ ಅರ್ಜಿಗಳಿಗೆ ಇನ್ನೂ ಪರಿಹಾರ ವಿತರಣೆಯಾಗದಿರಲು ಕಾರಣದ ಬಗ್ಗೆ ವರದಿ ನೀಡುವಂತೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜಿಲ್ಲಾಧಿಕಾರಿ ಮೀರ್ ಅನೀಸ್ ಅಹಮದ್ ಅವರಿಗೆ ಸೂಚಿಸಿದರು.
ಮಡಿಕೇರಿಯಲ್ಲಿ ಜಿಲ್ಲಾ ಬೆಳೆಗಾರರ ಒಕ್ಕೂಟದ ನಿಯೋಗ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದ ಸಂದರ್ಭ 2014-15ರ ಸಾಲಿನಲ್ಲಿ ಅತಿವೃಷ್ಟಿಗೆ ತುತ್ತಾಗಿ ಕಾಫಿಫಸಲು ಶೇ.50 ಕ್ಕಿಂತ ಹೆಚ್ಚು ನಷ್ಟಗೊಂಡ ಜಿಲ್ಲೆಯ 122 ಗ್ರಾಮಗಳ ಬೆಳೆಗಾರರಿಗೆ ಹಾಗೂ ಕರಿಮೆಣಸು ಸೇರಿದಂತೆ ತೋಟಗಾರಿಕಾ ಬೆಳೆ ಮತ್ತು ಭತ್ತದ ಕೃಷಿ ನಷ್ಟಗೊಂಡ ಬೆಳೆಗಾರರು ಪರಿಹಾರಕ್ಕಾಗಿ ಸಲ್ಲಿಸಿದ ಅರ್ಜಿಗಳಿಗೆ ಇನ್ನೂ ಪರಿಹಾರ ಬಿಡುಗಡೆಯಾಗಿಲ್ಲವೆಂದು ಗಮನ ಸೆಳೆಯಿತು.
ಈ ಸಂದರ್ಭ ಜಿಲ್ಲಾಧಿಕಾರಿ ಯವರು ಸಚಿವರಿಗೆ ಮಾಹಿತಿ ನೀಡಿ ಪರಿಹಾರ ಅರ್ಜಿಗಳಿಗೆ ಒಟ್ಟು 22 ಕೋಟಿ ಅನುದಾನ ಅಗತ್ಯವಿದೆ. ಈಗ ಕೇವಲ 4 ಕೋಟಿ ಹಣವಿದೆ. ಇನ್ನೂ 18 ಕೋಟಿ ಅನುದಾನ ಕೇಂದ್ರ ಹಾಗೂ ರಾಜ್ಯ ಪ್ರಕೃತಿ ವಿಕೋಪ ನಿಧಿಯಿಂದ ಬರಬೇಕಾಗಿದೆ. ಅನುದಾನ ಕೊರತೆಯಿಂದ ಪರಿಹಾರ ನೀಡಲಾಗಿಲ್ಲವೆಂದು ತಿಳಿಸಿದರು.
ಕೂಟಿಯಾಲ ರಸ್ತೆ ಪ್ರಸ್ತಾಪ:
ದಕ್ಷಿಣ ಕೊಡಗಿನ ಬಾಡಗರಕೇರಿ-ಕೂಟಿಯಾಲ ಮೂಲಕ ತಾಲೂಕು ಕೇಂದ್ರ ವೀರಾಜಪೇಟೆಗೆ ಸಂಪರ್ಕ ಕಲ್ಪಿಸುವ ಸಂಪರ್ಕ ರಸ್ತೆ ನಡುವೆ ಇರುವ ನದಿಗೆ 20 ವರ್ಷದ ಹಿಂದೆಯೇ ಸೇತುವೆಯಾಗಿದೆ. ಬಿ.ಶೆಟ್ಟಿಗೇರಿ ಕಡೆ ರಸ್ತೆ ಸಂಪರ್ಕಿಸಲಾಗಿದೆ. ಬಾಡಗರಕೇರಿ ಭಾಗದಲ್ಲಿ ಅಂದಾಜು 2 ಕಿ.ಮೀ ರಸ್ತೆಯಾಗಬೇಕಾಗಿದೆ. ಇದಕ್ಕೆ ಅರಣ್ಯ ಇಲಾಖೆ ತಡೆಯೊಡ್ಡಿದೆ. ಈ ರಸ್ತೆ ಜೋಡಣೆಯಿಂದ ಈ ಭಾಗದ ಜನರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿದ್ದಾಟಂಡ ಟಿ. ಪ್ರದೀಪ್ ಸಚಿವರ ಗಮನಕ್ಕೆ ತಂದರು. ಇದರ ಬಗ್ಗೆ ಎಲ್ಲಾ ದಾಖಲೆ ಮಾಹಿತಿಗಳನ್ನು ತರಿಸಿಕೊಂಡು ಬೆಂಗಳೂರು ಮಟ್ಟದಲ್ಲಿ ತಮ್ಮನ್ನು ಸೇರಿಸಿ ಉನ್ನತಾಧಿಕಾರಿಗಳ ಸಭೆ ಕರೆದು ಸರಿಪಡಿಸಲು ಕ್ರಮಕೈಗೊಳ್ಳಲಾಗುವದು ಎಂದು ಭರವಸೆ ನೀಡಿದರು.
ಹುದಿಕೇರಿ-ಬಿರುನಾಣಿ ಸಂಪರ್ಕ ರಸ್ತೆ ಕಾಮಗಾರಿ ವಿಳಂಬದ ಬಗ್ಗೆಯೂ ಅಗತ್ಯ ಕ್ರಮ ಕೈಗೊಳ್ಳಲಾಗುವದೆಂದು ಹೇಳಿದರು.
ಸಾಲ ಮನ್ನಾ ಪ್ರಸ್ತಾಪ
ಕಾಫಿ ಬೆಳೆಗಾರರ ಸಾಲ ಮನ್ನಾದ ಬಗ್ಗೆ ಪ್ರಸ್ತಾಪಿಸಿದ ಸಂದರ್ಭ ರಾಜ್ಯ ಸರಕಾರ ಕಾಫಿ ಬೆಳೆಗಾರರಿಗೆ ಸೀಮಿತವಾಗಿ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ. ಬೆಳೆಸಾಲ ಪ್ರತಿ ಏಕರೆಗೆ ಈಗಿರುವ ಪ್ರಮಾಣವನ್ನು 30 ಸಾವಿರದಿಂದ 1 ಲಕ್ಷಕ್ಕೆ ಹೆಚ್ಚಿಸುವ ಹಾಗೂ 7 ಲಕ್ಷದವರೆಗೆ ಬಡ್ಡಿರಹಿತ ವಾಗಿ ಒದಗಿಸುವ ವಿಚಾರ ಜಿಲ್ಲೆಗೆ ಸೀಮಿತ ಮಾಡಲು ಸಾಧ್ಯವಿಲ್ಲ. ಇದು ರಾಜ್ಯವ್ಯಾಪ್ತಿಯಲ್ಲಿ ತೆಗೆದುಕೊಳ್ಳ ಬೇಕಾದ ಕ್ರಮ ಎಂದು ಸಚಿವರು ವಿವರಿಸಿದರು. ಈ ಸಂದರ್ಭ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್, ಪ್ರಮುಖರಾದ ಮಿಟ್ಟು ಚಂಗಪ್ಪ, ಬೆಳೆಗಾರ ಒಕ್ಕೂಟದ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ, ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ನಿರ್ದೇಶಕ ಕೈಬುಲೀರ ಎಂ. ಹರೀಶ್, ಬಿರುನಾಣಿ ಬೆಳೆಗಾರ ಒಕ್ಕೂಟದ ಅಧ್ಯಕ್ಷ ಬೊಳ್ಳೇರ ಪೊನ್ನಪ್ಪ ಹಾಜರಿದ್ದರು.