ಶನಿವಾರಸಂತೆ, ಅ. 5: ಸಾಹಿತ್ಯದ ಸ್ಪರ್ಧೆಗಳು ಸಾಂಕೇತಿಕವಾಗಿ ಕೇವಲ ಅಭ್ಯಾಸ ಸಾಧನೆಗಾಗಿ ನಡೆಯುತ್ತ ವೆಯೇ ಹೊರತು ಸೋಲು -ಗೆಲುವು ನಿಶ್ಚಿತವಲ್ಲ. ಭಾಗವಹಿಸುವಿಕೆ ಮಾತ್ರ ಮುಖ್ಯವಾಗುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅಭಿಪ್ರಾಯಪಟ್ಟರು. ಸಮೀಪದ ಕೊಡ್ಲಿಪೇಟೆಯ ಹಲಸಿನಮರ ಗೌರಮ್ಮ - ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕೊಡ್ಲಿಪೇಟೆ ಹೋಬಳಿ ಘಟಕದ ವತಿಯಿಂದ ಪ್ರಾಥಮಿಕ ಪ್ರೌಢಶಾಲಾ ವಿದ್ಯಾರ್ಥಿ ಗಳು ಹಾಗೂ ಸಾರ್ವಜನಿಕರಿಗೆ ನಡೆದ ಜಾನಪದ ಮತ್ತು ಭಾವಗೀತೆಗಳ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ, ಕನ್ನಡ ನಾಮಫಲಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಭಾಷೆಯಲ್ಲಿ ಸಾಹಿತ್ಯದಷ್ಟೇ ಸಂಗೀತಕ್ಕೂ ಪ್ರಾಧಾನ್ಯತೆ ನೀಡಬೇಕು. ಗಾಯಕರು, ಕಲಾವಿದರಿಗೂ ಪ್ರೋತ್ಸಾಹ ಅಗತ್ಯ. ಮುಂದಿನ ಜನವರಿಯಲ್ಲಿ ಜಾನಪದದ ತವರಾದ ಕೊಡ್ಲಿಪೇಟೆಯಲ್ಲಿ ‘ಸುಗ್ಗಿ ಸಂಪದ’ ಕಾರ್ಯಕ್ರಮ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದರು.

ಕಸಾಪ ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಎನ್.ಎ. ಅಶ್ವಥ್‍ಕುಮಾರ್ ಮಾತನಾಡಿ, ಕಸಾಪ ಹೋರಾಟದ ಸಂಘವಲ್ಲ ಕನ್ನಡ ಸೇವೆ ಲಾಭಕ್ಕಾಗಿ ಅಲ್ಲ. ಸಾಹಿತ್ಯ, ಸಂಗೀತ, ಕಲೆಯನ್ನು ಗುರುತಿಸುವಂತದ್ದು, ಭಾಷೆ ಭಾವನಾತ್ಮಕವಾಗಿದ್ದು, ಉಳಿಸಿ ಬೆಳೆಸುವದು ಕನ್ನಡಿಗರ ಆದ್ಯ ಕರ್ತವ್ಯವಾಗಿದೆ ಎಂದರು.

ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಿರಂಜನ್ ಮಾತನಾಡಿ ಪ್ರಾಚೀನ ಕಾಲದಿಂದಲೂ ಪ್ರಾಮುಖ್ಯತೆ ಪಡೆದಿರುವ ಕನ್ನಡ ಭಾಷೆ ಸರಳ, ಸುಂದರ, ಸುಲಲಿತವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ ಕಸಾಪ ಕೊಡ್ಲಿಪೇಟೆ ಹೋಬಳಿ ಘಟಕದ ಅಧ್ಯಕ್ಷ ಎಂ.ಎಸ್. ಅಬ್ದುಲ್‍ರಬ್ ಮಾತನಾಡಿ, ಗಡಿಭಾಗದಲ್ಲಿ ಕನ್ನಡ ಭಾಷಾ ಬೆಳವಣಿಗೆಗಾಗಿ ಕಸಾಪದಂಥ ಘಟಕಗಳು ಅತ್ಯಗತ್ಯವಾಗಿದೆ. ಕನ್ನಡ ಮಾಧ್ಯಮ ಕಾರಣದಿಂದಾಗಿ ಸರ್ಕಾರಿ ಶಾಲೆಗಳು ಮುಚ್ಚಿ ಹೋಗುತ್ತಿದ್ದರೂ, ಕನ್ನಡ ಮಾಧ್ಯಮದಲ್ಲಿ ಕಲಿತವರು ಉನ್ನತ ಸ್ಥಾನಮಾನಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದರು.

ವೇದಿಕೆಯಲ್ಲಿ ತೀರ್ಪುಗಾರರಾದ ಬೆಸೂರು ಶಾಂತೇಶ್, ಉಪನ್ಯಾಸಕ ಮುರಳೀಧರ್, ಆಕಾಶವಾಣಿ ಕಲಾವಿದ ಸೋಮೇಶ್, ಕಸಾಪ ಸದಸ್ಯ ಶಾಂತಮಲ್ಲಪ್ಪ, ಶಿಕ್ಷಕ ಶಿವಕುಮಾರ್ ಉಪಸ್ಥಿತರಿದ್ದರು. ಉಪನ್ಯಾಸಕ ಡಿ.ಪಿ. ಸತೀಶ್ ನಿರೂಪಿಸಿದರು. ಉಪನ್ಯಾಸಕ ಶರಣ್ ಸ್ವಾಗತಿಸಿದರು.