ಸುಂಟಿಕೊಪ್ಪ, ಡಿ. 1: 7ನೇ ಹೊಸಕೋಟೆ ಗ್ರಾಮ ವ್ಯಾಪ್ತಿಯ ಆನೆಕಾಡು ಅರಣ್ಯ ಪ್ರದೇಶದ ಬಳಿಯಬಿದ್ರಳ ಎಂಬಲ್ಲಿ ಅನಾದಿ ಕಾಲದಿಂದಲೂ ವಾಸವಿದ್ದ ಪರಿಶಿಷ್ಟ ಪಂಗಡದ ಕುಟುಂಬದವರು ಜಾಗವನ್ನು ರೂಢಿಸಿಕೊಂಡು ಕೂಲಿನಾಲಿ ಮಾಡಿ ಜೀವಿಸುತ್ತಿದ್ದು, ಅವರುಗಳಿಗೆ ಹಕ್ಕುಪತ್ರ ನೀಡುವ ಪಕ್ರಿಯೆಗೆ ಚಾಲನೆ ನೀಡಲಾಯಿತು.
ಗ್ರಾಮ ಅರಣ್ಯ ಹಕ್ಕು ಸಮಿತಿ ಸಭೆಯು ಸಮಿತಿ ಅಧ್ಯಕ್ಷ ರವೀಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 7ನೇ ಹೊಸಕೋಟೆ ಗ್ರಾ.ಪಂ. ಅಧ್ಯಕ್ಷೆ ಸುಜಾತ, ಉಪಾಧ್ಯಕ್ಷ ಮುಸ್ತಾಫ, ಸದಸ್ಯರುಗಳಾದ ಅಬ್ದುಲ್ಲ ಜೋಸೆಫ್ ಹಾಗೂ ಲಲಿತ ಅವರಲ್ಲದೆ ಕುಶಾಲನಗರ ವಲಯ ಅರಣ್ಯಾಧಿಕಾರಿ ನೆಹರೂ, ಆನೆಕಾಡು ಅರಣ್ಯ ವಲಯಾರಣ್ಯಾಧಿಕಾರಿ ರಂಜನ್, ಕಂದಾಯ ಇಲಾಖೆಯ ಗ್ರಾಮಲೆಕ್ಕಿಗ ಚಂದ್ರಪ್ರಸಾದ್, ಗ್ರಾಮ ಸಹಾಯಕ ಶಿವಪ್ಪ, 7ನೇ ಹೊಸಕೋಟೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಉಪಸ್ಥಿತರಿದ್ದರು. ಸಭೆಯಲ್ಲಿ ತಲತಲಾಂತರಗಳಿಂದ ಅರಣ್ಯ ಅಂಚಿನಲ್ಲಿ ಕಾಡಿನ ಮಕ್ಕಳಾಗಿ ಮರ ಗಿಡಗಳನ್ನು ಪೋಷಿಸಿ ಬೆಳೆಸಿದ ಬುಡಕಟ್ಟು ಜನರಿಗೆ ಭೂ ಮಾನ್ಯತಾ ಹಕ್ಕು ಮಸೂದೆ ಇನ್ನೂ ಜಾರಿಯಾಗದಿರುವ ಬಗ್ಗೆ ಸಭೆಯಲ್ಲಿದ್ದ ಜನಪ್ರತಿನಿಧಿಗಳು ತೀವ್ರ ಕಳವಳ ವ್ಯಕ್ತಪಡಿಸಿದರಲ್ಲದೆ ಇವರುಗಳ ಜಾಗ ಸ್ವಾಧೀನ ಪಡಿಸಿರುವ ದಾಖಲೆಗಳನ್ನು ಪರಿಶೀಲಿಸಿ ಹಕ್ಕು ಪತ್ರಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಕಂದಾಯ ಅರಣ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.