ಮಡಿಕೇರಿ, ಸೆ. 23: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಮಡಿಕೇರಿ ತಾಲೂಕು ಯುವ ಒಕ್ಕೂಟ, ಮದೆ ಗ್ರಾಮ ಪಂಚಾಯತ್ ಇವರ ಸಹಯೋಗದಲ್ಲಿ ಅವಂದೂರಿನ ಶ್ರೀ ಗೋಪಾಲಕೃಷ್ಣ ಯುವ ಸಂಘ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೈಲ್ ಮುಹೂರ್ತ ಹಬ್ಬದ ಪ್ರಯುಕ್ತ ಗ್ರಾಮೀಣ ಕ್ರೀಡೋತ್ಸವ ಏರ್ಪಡಿಸಲಾಗಿತ್ತು. ಅವಂದೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ನಡೆದ ಕ್ರೀಡೋತ್ಸವವನ್ನು ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಚೊಕ್ಕಾಡಿ ಅಪ್ಪಯ್ಯ ಉದ್ಘಾಟಿಸಿದರು.

ಗೋಪಾಲಕೃಷ್ಣ ಯುವ ಸಂಘದ ಅಧ್ಯಕ್ಷ ಹೊಸೂರು ಗಿರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕೈಲ್ ಮುಹೂರ್ತ ಹಬ್ಬದ ವಿಷಯವಾಗಿ ಉಪನ್ಯಾಸಕ ಪಟ್ಟಡ ಶಿವಕುಮಾರ್ ವಿಚಾರ ಮಂಡನೆ ಮಾಡಿದರು. ಮುಖ್ಯ ಅತಿಥಿಗಳಾಗಿ ಪ್ರಗತಿಪರ ಕೃಷಿಕ ಮಂದ್ರಿರ ತೇಜಸ್ ನಾಣಯ್ಯ, ಗ್ರಾ.ಪಂ. ಸದಸ್ಯ ಬೆಳ್ಯನ ಚಂದ್ರ ಪ್ರಕಾಶ್, ನಿವೃತ್ತ ಮುಖ್ಯ ಲೆಕ್ಕಪರಿಶೋಧಕ ಕಾಳೇರಮ್ಮನ ಗೋಪಾಲ, ಗ್ರಾ.ಪಂ. ಮಾಜಿ ಸದಸ್ಯ ಕಡ್ಯದ ಸೋಮಣ್ಣ, ಬಲ್ಲಮಾವಟಿ ಪ್ರೌಢಶಾಲೆ ದೈಹಿಕ ಶಿಕ್ಷಕ ಬೊಳ್ಳಿಯಂಡ ವಿಕ್ರಂ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಊರೋಳನ ಗೋಪಾಲ, ಮಾದರಿ ಕೃಷಿಕ ಉರುಂಡೆ ಬೋಜಪ್ಪ ಉಪಸ್ಥಿತರಿದ್ದರು. ಮಕ್ಕಳಿಂದ ಹಿಡಿದು ವಯಸ್ಕರವರೆಗೆ ವಿವಿಧ ಗ್ರಾಮೀಣ ಕ್ರೀಡಾಸ್ಪರ್ಧೆ ಹಾಗೂ ಜಾನಪದ ಸಂಗೀತ ಸ್ಪರ್ಧೆ ನಡೆಯಿತು.