ಕುಶಾಲನಗರ, ಸೆ. 2: ಕೊಡಗು ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಕೆಎಫ್‍ಡಿ, ಪಿಎಫ್‍ಐ, ಎಸ್‍ಡಿಪಿಐ ಸಂಘಟನೆಗಳನ್ನು ನಿಷೇಧಿಸಲು ರಾಜ್ಯ ಸರಕಾರ ಕ್ರಮಕೈಗೊಳ್ಳಬೇಕು ಎಂದು ಕೊಡಗು-ಮೈಸೂರು ಲೋಕಸಭಾ ಸದಸ್ಯ ಪ್ರತಾಪ್‍ಸಿಂಹ ಆಗ್ರಹಿಸಿದ್ದಾರೆ.ಗುಡ್ಡೆಹೊಸೂರಿನಲ್ಲಿ ಇತ್ತೀಚೆಗೆ ಹತ್ಯೆಗೀಡಾದ ಪ್ರವೀಣ್ ಪೂಜಾರಿ ನಿವಾಸಕ್ಕೆ ತೆರಳಿ ದಾನಿಗಳಿಂದ ಸಂಗ್ರಹಿಸಿದ್ದ ರೂ. 5 ಲಕ್ಷದ 30 ಸಾವಿರಗಳ ನಿರಖು ಠೇವಣಿಯ ದಾಖಲೆಗಳನ್ನು ಹಸ್ತಾಂತರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಯೋಧರ ಬೀಡು ಎಂದು ಖ್ಯಾತಿ ಹೊಂದಿದ ಕೊಡಗು ಜಿಲ್ಲೆ ಇದೀಗ ಭಯೋತ್ಪಾದಕರ ತಾಣವಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಪ್ರತಾಪ್ ಸಿಂಹ, ಈ ಬಗ್ಗೆ ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕಾಗಿದೆ ಎಂದು ಒತ್ತಾಯಿಸಿದರು.
ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ಪೂಜಾರಿ ತಂದೆ ಚಂದಪ್ಪ ಪೂಜಾರಿ ಹೆಸರಿನಲ್ಲಿ ಹಲವು ದಾನಿಗಳು ತನ್ನ ಮನವಿಗೆ ಸ್ಪಂದಿಸಿ ನೀಡಿದ 5 ಲಕ್ಷ ರೂಗಳನ್ನು ಕಾವೇರಿ ಗ್ರಾಮೀಣ ಬ್ಯಾಂಕ್‍ನಲ್ಲಿ ನಿರಖು ಠೇವಣಿಯಿರಿಸಿರುವ ಬಗ್ಗೆ ಮಾಹಿತಿ ನೀಡಿದ ಅವರು ಈ ಮೂಲಕ ತಿಂಗಳೊಂದಕ್ಕೆ 3 ಸಾವಿರ ರೂಗಳ ಬಡ್ಡಿ ಹಣ ದೊರಕಲಿದೆ ಎಂದರು. ಅಲ್ಲದೆ ಪ್ರವೀಣ್ ಪೂಜಾರಿ ಪೋಷಕರ ದಿನನಿತ್ಯದ ಊಟೋಪಚಾರಕ್ಕೆ ತಗಲುವ ದಿನಸಿ ಖರ್ಚಿಗಾಗಿ 1 ವರ್ಷದ ಅವಧಿಗೆ ದಾನಿಯೋರ್ವರು
(ಮೊದಲ ಪುಟದಿಂದ) ಸಹಕಾರದ ಭರವಸೆ ನೀಡಿರುವದಾಗಿ ಮಾಹಿತಿ ಒದಗಿಸಿದರು. ಈ ಸಂದರ್ಭ ಉಪಸ್ಥಿತರಿದ್ದ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ಹತ್ಯೆಗೊಳಗಾದ ಪ್ರವೀಣ್ ಪೂಜಾರಿ ಬಡ ಕುಟುಂಬಕ್ಕೆ ಮುಂದಿನ ದಿನಗಳಲ್ಲಿ ದಾನಿಗಳ ಸಹಕಾರ ಪಡೆದು ಹೆಚ್ಚಿನ ನೆರವು ನೀಡಲಾಗುವದು. ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಸಂಘಟನೆಗಳ ಸ್ಥಳೀಯ ಮುಖಂಡನೋರ್ವನನ್ನು ಪೊಲೀಸ್ ಇಲಾಖೆ ಕೂಡಲೇ ವಶಕ್ಕೆ ಪಡೆದುಕೊಳ್ಳಬೇಕಿದೆ ಎಂದರು. ಮದನಿ ಪ್ರಕರಣದಲ್ಲಿ ಸಾಕ್ಷಿದಾರರೊಬ್ಬರಿಗೆ ನೆರೆಯ ರಾಜ್ಯದಿಂದ ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು ಇದೇ ರೀತಿ ಮುಂದುವರೆದಲ್ಲಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಮತ್ತಷ್ಟು ಹದಗೆಡಲಿದೆ. ಕೂಡಲೇ ಪೊಲೀಸ್ ಇಲಾಖೆ ಸಾಕ್ಷಿದಾರನಿಗೆ ಸೂಕ್ತ ಬಂದೋಬಸ್ತ್ ಕಲ್ಪಿಸುವದರೊಂದಿಗೆ ಜಿಲ್ಲೆಯಲ್ಲಿ ಭಯೋತ್ಪಾದನೆ ಹುಟ್ಟಿಸುತ್ತಿರುವ ವ್ಯಕ್ತಿಗಳ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭ ಕೊಡಗು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಿ.ಬಿ. ಭಾರತೀಶ್, ಬಿಜೆಪಿ ಕ್ಷೇತ್ರಾಧ್ಯಕ್ಷ ಕುಮಾರಪ್ಪ, ಪ್ರಮುಖರಾದ ಎಂ.ಡಿ.ಕೃಷ್ಣಪ್ಪ, ಭಾಸ್ಕರ್ ನಾಯಕ್, ಅನುದೀಪ್ ಮತ್ತಿತರರು ಇದ್ದರು.