ಕುಶಾಲನಗರ, ಅ.8: ಆಂತರಿಕ ಭದ್ರತೆಯ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸುವ ಮೂಲಕ ದೇಶದ ರಕ್ಷಣೆಯಲ್ಲಿ ಕೈಜೋಡಿಸಬೇಕಾಗಿದೆ ಎಂದು 2008 ರ ಮುಂಬೈ ಧಾಳಿಯಲ್ಲಿ ಪಾಲ್ಗೊಂಡ ಶೌರ್ಯಚಕ್ರ ಪ್ರಶಸ್ತಿ ವಿಜೇತ ಕಮಾಂಡರ್ ಪಿ.ವಿ.ಮನೀಷ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಬಿವಿಪಿ ವತಿಯಿಂದ ಏರ್ಪಡಿಸಲಾಗಿದ್ದ ವಿ ಸ್ಟ್ಯಾಂಡ್ ವಿತ್ ಅವರ್ ಆರ್ಮಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ದೇಶಕ್ಕೆ ನೆರೆಯ ಶತ್ರುಗಳಂತೆ ಆಂತರಿಕ ಶತ್ರುಗಳ ಆತಂಕವೂ ಸಾಕಷ್ಟು ಉಂಟಾಗಿದೆ. ಬಲಿಷ್ಠವಾದ ಭಾರತ ಉತ್ತಮ ಸೇನೆಯನ್ನು ಹೊಂದಿದ್ದು, ಯಾವದೇ ಸಂದರ್ಭ ದೇಶದ ರಕ್ಷಣೆಗೆ ಸನ್ನದ್ಧವಾಗಿದೆ. ಸಾಮಾನ್ಯ ಜನತೆ ತಮ್ಮ ಕುಟುಂಬದ ಸಂಬಂಧದ ರೀತಿಯಲ್ಲಿ ದೇಶದ ಬಗ್ಗೆ ಕಾಳಜಿ ಹೊಂದಿರಬೇಕು ಎಂದರು.

ಪ್ರಧಾನ ಭಾಷಣಕಾರರಾಗಿ ಆಗಮಿಸಿದ್ದ ಎಬಿವಿಪಿ ರಾಜ್ಯ ಉಪಾಧ್ಯಕ್ಷ ಕೇಶವ್ ಬಂಗೇರಾ ಮಾತನಾಡಿ, ನಾನು ಎಂಬ ಚಿಂತನೆ ಬಿಟ್ಟು ನಾವು ಎನ್ನುವದನ್ನು ಮೈಗೂಡಿಸಿಕೊಂಡಾಗ ದೇಶಭಕ್ತಿ ಜಾಗೃತವಾಗುತ್ತದೆ. ದೇಶ ಸಂರಕ್ಷಣೆಗೆ ತ್ಯಾಗ ನೀಡಿದ ಸೈನಿಕ ಬಗ್ಗೆ ಚಿಂತನೆ ಮಾಡುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಈ ಸಂದರ್ಭ ಉಪಸ್ಥಿತರಿದ್ದ ಶಾಸಕ ಅಪ್ಪಚ್ಚುರಂಜನ್ ಮಾತನಾಡಿ, ವಿದ್ಯಾರ್ಥಿ ದಿಸೆಯಿಂದಲೇ ದೇಶಭಕ್ತಿ ಬೆಳೆಸಿಕೊಳ್ಳಬೇಕು. ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಯುವ ಪೀಳಿಗೆ ಪ್ರಮುಖ ಪಾತ್ರ ವಹಿಸಬೇಕಾಗಿದೆ ಎಂದರು.

ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ. ವೆಂಕಟೇಶ್ ಬೆಮ್ಮತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಜಿ.ಎಲ್. ನಾಗರಾಜು, ಎಬಿವಿಪಿಯ ಮುಖಂಡರಾದ ಸಿದ್ಧರಾಜು, ನವನೀತ್ ಪೊನ್ನೇಟಿ, ದರ್ಶನ್ ಮತ್ತಿತರರು ಇದ್ದರು.

ಈ ಸಂದರ್ಭ ವೈರಿಗಳ ಧಾಳಿಯಲ್ಲಿ ಹುತಾತ್ಮರಾದ ಸೈನಿಕರ ಆತ್ಮಕ್ಕೆ ಶಾಂತಿಕೋರಿ ಮೌನಾಚರಿಸ ಲಾಯಿತು. ವೀರ ಯೋಧ ಪಿ.ವಿ. ಮನೀಷ್ ಅವರನ್ನು ಎಬಿವಿಪಿ ಮತ್ತು ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.