ಗೋಣಿಕೊಪ್ಪಲು/ ಸಿದ್ದಾಪುರ, ನ.21: ಕೊಡಗಿನ ಅರಣ್ಯದಲ್ಲಿ ಶತಮಾನಗಳಿಂದ ನೆಲೆಸಿ, ಬಳಿಕ ಕಾರ್ಮಿಕರಾಗಿ ಕಾಫಿ ಬೆಳೆಗಾರರ ಲೈನ್‍ಮನೆಯಲ್ಲಿ ವಾಸವಿದ್ದವರು ಇದೀಗ ಮರಳಿ ಕಾಡಿಗೆ ತೆರಳುತ್ತಿರುವ ಬಗ್ಗೆ ತನಗೆ ಮಾಹಿತಿ ಇದೆ. ಜಿಲ್ಲೆಯ ಆದಿವಾಸಿ ಜನಾಂಗ ಇಲ್ಲಿಯೇ ನೆಲೆಸಬೇಕು. ನಿವೇಶನ, ವಸತಿ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ತಾನು ಜಿಲ್ಲೆಯ ಉಸ್ತುವಾರಿ ಸಚಿವ ಸೀತಾರಾಮ್, ಅರಣ್ಯ ಸಚಿವ ರಮಾನಾಥ ರೈ, ಅರಣ್ಯ ಹಾಗೂ ಕಂದಾಯ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿ ಪೂರಕವಾಗಿ ಸ್ಪಂದಿಸುವೆ. ಅವಶ್ಯವಿದ್ದಲ್ಲಿ ಅರಣ್ಯ ಸಚಿವರನ್ನು ದಿಡ್ಡಳ್ಳಿಗೆ ಕರೆಸುವ ಪ್ರಯತ್ನ ಮಾಡುವೆ. ಅದುವರೆಗೂ ಗುಡಿಸಲು ನಿರ್ಮಿಸಿಕೊಂಡು ಪ್ರತಿಭಟನೆ ನಡೆಸುತ್ತಿರುವ ಆದಿವಾಸಿಗಳು ತಾಳ್ಮೆಯಿಂದ ಇರಬೇಕಾಗಿದೆ. ಇಲ್ಲಿನ ಆದಿವಾಸಿ ಮಹಿಳೆಯರು ಬೆತ್ತಲೆ ಪ್ರತಿಭಟನೆ ನಿರ್ಧಾರ ಕೈ ಬಿಡಬೇಕು. ಕೊಡಗಿನ ಸಂಸ್ಕೃತಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು ಎಂದು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿಪೆÇನ್ನಪ್ಪ ಮನವಿ ಮಾಡಿದರು.

ಇಂದು ಬೆಳಿಗ್ಗೆ ಸುಮಾರು 700ಕ್ಕೂ ಅಧಿಕ ಸಂಖ್ಯೆಯಲ್ಲಿ ದಿಡ್ಡಳ್ಳಿಯಲ್ಲಿ ಸಮಾವೇಶಗೊಂಡ ಪ್ರತಿಭಟನಾ ನಿರತ ಆದಿವಾಸಿಗಳನ್ನು ಭೇಟಿ ಮಾಡಿದ ಪದ್ಮಿನಿ ಪೆÇನ್ನಪ್ಪ ಅವರು, ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ‘ಉಳುವವನೇ ಭೂಮಿ ಒಡೆಯ’ ಎಂಬ ಕಾನೂನು ಜಾರಿಗೆ ತಂದಿದ್ದರು. ಆದರೆ, ಕಾರ್ಮಿಕರ ಬದುಕು, ಕೊಡಗಿನ ಆದಿವಾಸಿಗಳ ಬದುಕು ಹಸನಾಗಲಿಲ್ಲ. ಕೊಡಗಿನ ಕಾಫಿ ತೋಟಗಳಲ್ಲಿ ದುಡಿಯುತ್ತಿರುವ ಇಲ್ಲಿನ ಗಿರಿಜನರಿಗೆ ಹೊರಜಿಲ್ಲೆಯಲ್ಲಿ ಪುನರ್ವಸತಿ ಕಲ್ಪಿಸಿದ್ದಲ್ಲಿ ಅಸ್ಸಾಂ ಮತ್ತು ಬಾಂಗ್ಲಾ ಮೂಲದ ಕಾರ್ಮಿಕರ ಮೊರೆ ಹೋಗಬೇಕಾಗುವ ಸ್ಥಿತಿ ಬರಬಹುದು. ದಿಡ್ಡಳ್ಳಿ ವ್ಯಾಪ್ತಿಯ ಚೆನ್ನಯ್ಯನಕೋಟೆ, ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯ ಕಾಫಿ ತೋಟಗಳಿಗೆ ಅವಶ್ಯವಿರುವ ಕಾರ್ಮಿಕರಿಗೆ ಇಲ್ಲಿ ಪುನರ್ವಸತಿ ಕಲ್ಪಿಸಿ, ಜಿಲ್ಲೆಯ

(ಮೊದಲ ಪುಟದಿಂದ) ಬಾಳೆಲೆ, ತಿತಿಮತಿ, ಶ್ರೀಮಂಗಲ, ಸೋಮವಾರಪೇಟೆ, ಮಡಿಕೇರಿ ತಾಲೂಕಿನಲ್ಲಿಯೂ ಅರಣ್ಯ ಪೈಸಾರಿ ಅಥವಾ ಕಂದಾಯ ಇಲಾಖೆಯ ಸುಪರ್ದಿಯಲ್ಲಿರುವ ಪೈಸಾರಿ ಜಾಗವನ್ನು ಗುರುತಿಸಿ ಆದಿವಾಸಿಗಳಿಗೆ ನಿವೇಶನ ಹಾಗೂ ವಸತಿ ಯೋಜನೆ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲಾಗುವದು. ಕೇವಲ ಒಂದೇ ಜಾಗದಲ್ಲಿ 500ಕ್ಕೂ ಅಧಿಕ ಗಿರಿಜನರಿಗೆ ಪುನರ್ವಸತಿ ಕಲ್ಪಿಸಿದರೆ ಜಿಲ್ಲೆಯ ಇತರೆ ಸ್ಥಳಗಳಲ್ಲಿ ಕಾರ್ಮಿಕರ ಸಮಸ್ಯೆ ಉಂಟಾಗುತ್ತದೆ. ಇದರಿಂದಾಗಿ ಮುಂದೆ ಆರೋಗ್ಯ, ಶಿಕ್ಷಣ ಇತ್ಯಾದಿ ವಿಚಾರಗಳಲ್ಲಿ ಸಮಸ್ಯೆ ತಲೆದೋರಬಹುದು. ಗಿರಿಜನ ಕಾರ್ಮಿಕರ ನಡುವೆಯೇ ಸ್ಥಳೀಯ ತೋಟ ಕೆಲಸಕ್ಕೆ ತೆರಳಲು ಪೈಪೆÇೀಟಿ ಉಂಟಾಗಬಹುದು. ಈ ನಿಟ್ಟಿನಲ್ಲಿ ತಲಾ 80 ಅಥವಾ 100 ರ ಸಂಖ್ಯೆಯಲ್ಲಿ ಅಲ್ಲಲ್ಲಿ ಪುನರ್ವಸತಿ ಕಲ್ಪಿಸುವದರಿಂದಾಗಿ ಕಾಫಿ ಬೆಳೆಗಾರರು ಹಾಗೂ ಕಾರ್ಮಿಕರ ನಡುವೆ ಉತ್ತಮ ಬಾಂಧವ್ಯ ಏರ್ಪಡಲು ಸಾಧ್ಯ. ಕಾಡುಪ್ರಾಣಿಗಳ ನಡುವೆಯೇ ವಾಸಿಸುವ ಕಾಡಿನ ಮಕ್ಕಳು ಅರಣ್ಯದಂಚಿನಲ್ಲಿ ನೆಲೆಸುವದರಿಂದ ಎಲ್ಲ ಮೂಲಭೂತ ಸೌಕರ್ಯವನ್ನೂ ಕಲ್ಪಿಸಲು ಅವಕಾಶವಿದೆ. ಅರಣ್ಯ, ವನ್ಯಜೀವಿಗಳು ಉಳಿದಲ್ಲಿ ಮಾತ್ರ ಜಿಲ್ಲೆಯ ಮೇಲೆ ಉತ್ತಮ ಮಳೆ ಯಾಗಲು ಸಾಧ್ಯ. ಅರಣ್ಯವೂ ಉಳಿಯಬೇಕು, ಆದಿವಾಸಿಗಳ ಬಾಳೂ ಹಸನಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಅರಣ್ಯ ಸಚಿವರು ಹಾಗೂ ಅಧಿಕಾರಿ ಗಳೊಂದಿಗೆ ಚರ್ಚಿಸಿ ಉತ್ತಮ ನಿರ್ಧಾರ ಕೈಗೊಳ್ಳಲಾಗುವದು ಎಂದು ಪದ್ಮಿನಿ ಪೆÇನ್ನಪ್ಪ ಭರವಸೆ ನೀಡಿದರು.

ಚೆನ್ನಯ್ಯನ ಕೋಟೆ ಗ್ರಾ.ಪಂ.ಸದಸ್ಯ ಹಾಗೂ ಆದಿವಾಸಿ ಮುಖಂಡ ಜೇನುಕುರುಬರ ಅಪ್ಪಾಜಿ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆ ಅನ್ವಯ ನಿರಾಶ್ರಿತ ಆದಿವಾಸಿಗಳಿಗೆ ಹಕ್ಕುಪತ್ರ ದೊರೆಯಬೇಕು. 20-06-2016 ರಿಂದ ಪ್ರತಿಭಟನೆ ಆರಂಭಿಸಿದ್ದು ಇಂದಿಗೆ 150 ದಿನ ಕಳೆದಿದೆ. ನಮಗೆ ಕಾಡು ಪ್ರಾಣಿಗಳು, ಕಾಡಾನೆಯ ಭಯವಿಲ್ಲ. ಕೆಲವು ಪ್ರಭಾವಿಗಳು ಮಾಧ್ಯಮದವರಿಗೆ ತಪ್ಪು ಮಾಹಿತಿ ನೀಡಿ ಸಕಲೇಶಪುರ, ಪಿರಿಯಾಪಟ್ಟಣ, ಹುಣಸೂರು ಇತರೆ ಹೊರಜಿಲ್ಲೆಯಿಂದ ದಿಡ್ಡಳ್ಳಿಗೆ ಬಂದು ಗುಡಿಸಲು ನಿರ್ಮಿಸಿಕೊಂಡಿದ್ದಾರೆ ಎಂದು ಆರೋಪಿಸಿ ನಮ್ಮನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಯಿತು. ಕಳೆದೆರಡು ದಿನಗಳಿಂದ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ದಿಡ್ಡಳ್ಳಿಯಲ್ಲಿ ಸರ್ವೆ ಕಾರ್ಯ ನಡೆಸಿದ್ದು ಇಲ್ಲಿ ಕೊಡಗಿನ ವಿವಿಧೆಡೆಯ ಆದಿವಾಸಿ ನಿರಾಶ್ರಿತರು ಮಾತ್ರ ಇದ್ದಾರೆ ಎಂಬ ಅಂಕಿ ಅಂಶ ಸಿಕ್ಕಿದೆ. ಇದೀಗ ಒಟ್ಟು 575 ಆದಿವಾಸಿ ಕುಟುಂಬ ಗುಡಿಸಲು ನಿರ್ಮಿಸಿಕೊಂಡಿದ್ದು, ನಮಗೆ ಕೂಡಲೇ ಸರ್ಕಾರ ಹಕ್ಕುಪತ್ರವನ್ನು ನೀಡಬೇಕಾಗಿದೆ. ಇಲ್ಲಿ ಅರಣ್ಯವನ್ನು ಕಡಿದು ನಾವು ಗುಡಿಸಲು ನಿರ್ಮಿಸಲಿಲ್ಲ. ಮರಗಳು ಹಾಗೇ ಇವೆ. ಕುರುಚಲು, ಗಿಡ ಗಂಟಿಗಳನ್ನು ಮಾತ್ರ ಕಡಿಯಲಾಗಿದೆ. ಈ ಹಿಂದೆ ದಿಡ್ಡಳ್ಳಿ-ಬಸವನ ಹಳ್ಳಿ ಮೀಸಲು ಅರಣ್ಯವಾಗಿಯೇ ಇತ್ತು. ಆದರೆ,ಗುಡಲೂರು ಕಂಠಾಪುರದ ಇತರೆ ಜನಾಂಗಕ್ಕೆ ಇಲ್ಲಿ ತಲಾ ಎರಡು ಎಕರೆ ಜಾಗ ನೀಡಲಾಗಿದೆ. ಅಂದು ಇಲ್ಲಿದ್ದ ಅರಣ್ಯವನ್ನು ನಾಶಮಾಡಿ ತೋಟ ಗದ್ದೆ ಮಾಡಿಕೊಂಡಿದ್ದಾರೆ. ಕಾಡಿನ ಮಕ್ಕಳಾದ ನಮಗೊಂದು ಕಾನೂನು. ಇತರರಿಗೆ ಒಂದು ಕಾನೂನು ಸರಿಯಲ್ಲ. ನಾವು ಶೋಷಣೆಗೆ ಒಳಗಾಗಿದ್ದೇವೆ. 2005 ರ ಕಾಯ್ದೆ ಅನ್ವಯ ನಮಗೆ ನಿವೇಶನ ಬೇಕು. ನಾವು ಸಾವಿರಾರು ಎಕರೆ ಜಾಗವನ್ನು ಕೇಳುತ್ತಿಲ್ಲ. ಇದೀಗ ಮಾನಸಿಕವಾಗಿ ನಮ್ಮ ಹಕ್ಕು ಸ್ಥಾಪನೆಯ ಹೋರಾಟಕ್ಕೆ ಸಿದ್ಧರಾಗಿ ದ್ದೇವೆ. ಜಿಲ್ಲಾಧಿಕಾರಿ ಆರ್.ವಿ. ಡಿಸೋಜಾ, ಉಪ ವಿಭಾಗಾಧಿಕಾರಿ ಗಳು, ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ನಮ್ಮ ಸಮಸ್ಯೆ ತಿಳಿದಿದೆ. ಇತ್ತೀಚೆಗೆ ಐಟಿಡಿಪಿ ಇಲಾಖೆ ಇಲ್ಲಿ ವಾಸ್ತವ್ಯ ಹೂಡಿರುವವರಿಗೆ ಪೌಷ್ಟಿಕ ಆಹಾರವನ್ನೂ ನೀಡಿದೆ. ನಾವು ಕೊಡಗು ಬಿಟ್ಟು ಹೋಗಲು ಸಿದ್ಧರಿಲ್ಲ. ಅರಣ್ಯದಂಚಿನಲ್ಲಿ ಜಾಗ ಕೇಳುತ್ತಿದ್ದೇವೆ ಎಂದು ಹೇಳಿದರು.

ಇದೇ ಸಂದರ್ಭ ಬುಡಕಟ್ಟು ಕೃಷಿಕರ ಸಂಘದ ಹೋರಾಟಗಾರ್ತಿ ಜೆ.ಕೆ.ಮುತ್ತಮ್ಮ ಮಾತನಾಡಿ, ತಾನು 9 ವರ್ಷ ನ್ಯಾಯಕ್ಕಾಗಿ ನ್ಯಾಯಾಲಯಕ್ಕೆ ಅಲೆದಿದ್ದೇನೆ. ಇದೀಗ ಬೆಂಕಿಯೊಂದಿಗೆ ಹೋರಾಟ ಮಾಡಲೂ ನಾವು ಸಿದ್ಧರಿದ್ದೇವೆ. ಆದಿವಾಸಿಗಳ ಮೈಬಣ್ಣ ಇದೀಗ ಬಿಳಿ ಬಣ್ಣಕ್ಕೆ ತಿರುಗಲು ಸರ್ಕಾರ ನೀಡುತ್ತಿರುವ ಪೌಷ್ಠಿಕ ಆಹಾರ ಕಾರಣ. ಮಹಿಳಾ ಪೆÇಲೀಸರನ್ನು ಕರೆಯಿಸಿ ನಮ್ಮನ್ನು ತೆರವು ಮಾಡಲು ಯತ್ನಿಸಿದರೆ ಬೆತ್ತಲೆ ಪ್ರತಿಭಟನೆಗೂ ಸಿದ್ಧ ಎಂದು ಪುನರುಚ್ಛರಿಸಿದರು.

ಚೆನ್ನಯ್ಯನಕೋಟೆ ಗ್ರಾ.ಪಂ. ಸದಸ್ಯೆ ಕಾವೇರಿ ಮಾತನಾಡಿ, ಲೈನ್‍ಮನೆಯಲ್ಲಿ ವಾಸವಿರುವ ಆದಿವಾಸಿ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸ ವಿವಿಧ ಕಾರಣಗಳಿಗಾಗಿ ಮೊಟಕುಗೊಳ್ಳುತ್ತಿದೆ. ನಮ್ಮ ಕುಟುಂಬಸ್ಥರನ್ನು ಲೈನ್‍ಮನೆಗೆ ಹೋಗಿ ನೋಡಲೂ ಕಸಿವಿಸಿ ವಾತಾವರಣ ವಿದೆ. ಬಾಳೆಲೆ, ಕುಟ್ಟ, ನಾಪೆÇೀಕ್ಲುವಿನ ಕಡೆಯಲ್ಲಿ ಲೈನ್‍ಮನೆಯಲ್ಲಿ ವಾಸವಿರುವ ನಮ್ಮ ಜನಾಂಗದ ಮಕ್ಕಳು ಗಂಭೀರ ಸಮಸ್ಯೆ ಎದುರಿಸು ತ್ತಿದ್ದು, ಈ ನಿಟ್ಟಿನಲ್ಲಿ ಸ್ವಾವಲಂಭಿ ಜೀವನಕ್ಕಾಗಿ ನಮಗೆ ನಿವೇಶನ ಹಾಗೂ ಸ್ವಂತ ವಸತಿ ಅಗತ್ಯವಿದೆ ಎಂದು ಹೇಳಿದರು.

ಗಿರಿಜನರ ಸಮಸ್ಯೆ ಕುರಿತಾಗಿ ಆದಿವಾಸಿ ಮುಖಂಡ ಜೆ.ಕೆ.ಸ್ವಾಮಿ, ಮೈಸೂರು ವಲಯ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ನಿಸಾರ್ ಅಹಮ್ಮದ್, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಸಲಾಂ, ತಾ.ಪಂ. ಸದಸ್ಯರಾದ ಚಿನ್ನಮ್ಮ, ಕಾವೇರಮ್ಮ, ಮಾಲ್ದಾರೆ ಮಾಜಿ ಗ್ರಾ.ಪಂ.ಅಧ್ಯಕ್ಷ ಸಜಿ ಥೋಮಸ್,ಉಮೇಶ್, ಮಾಜಿ ಜಿ.ಪಂ.ಸದಸ್ಯ ಪಾಪು ಸಣ್ಣಯ್ಯ, ಜಿಲ್ಲಾ ಕಾಂಗ್ರೆಸ್ ಹಿರಿಯ ಉಪಾಧ್ಯಕ್ಷ ಪಿ.ಕೆ.ಪೆÇನ್ನಪ್ಪ, ಚೆನ್ನಯ್ಯನಕೋಟೆ ವಲಯ ಕಾಂಗ್ರೆಸ್ ಅಧ್ಯಕ್ಷ ವಾಟೇರಿರ ಸುರೇಶ್ ಸೋಮಯ್ಯ, ವಿಜು ಬಿದ್ದಪ್ಪ ಮುಂತಾದವರು ಮಾತನಾಡಿದರು.

ಪದ್ಮಿನಿ ಪೆÇನ್ನಪ್ಪ ಅವರು ದಿಡ್ಡಳ್ಳಿಗೆ ಭೇಟಿ ನೀಡುತ್ತಿದ್ದಂತೆ ಗಿರಿಜನ ಮುಖಂಡರು ಹೂವಿನ ಹಾರ ಹಾಕಿ ಬರ ಮಾಡಿಕೊಂಡರು. ಇದೇ ಸಂದರ್ಭ ಗಿರಿಜನ ಮಹಿಳೆಯರು ಪದ್ಮಿನಿ ಅವರಿಗೆ ಗೆಣಸನ್ನು ತಿನ್ನಿಸಿದರು. ಸುಮಾರು 800ಕ್ಕೂ ಮಿಕ್ಕಿ ಗಿರಿಜನರು ಭಾಗವಹಿಸಿದ್ದರು. ಪದ್ಮಿನಿ ಪೆÇನ್ನಪ್ಪ ಹಾಗೂ ಭದ್ರತೆಗೆ ಆಗಮಿಸಿದ್ದ ಸಿದ್ದಾಪುರ ಪೆÇಲೀಸ್ ಉಪನಿರೀಕ್ಷಕ ಸಂತೋಷ್ ಕಶ್ಯಪ್ ಮತ್ತು ಸಿಬ್ಬಂದಿಗಳು ಸಾಮೂಹಿಕ ಅರಣ್ಯ ಭೋಜನದಲ್ಲಿ ಪಾಲ್ಗೊಂಡರು.

-ವರದಿ: ಟಿ.ಎಲ್.ಶ್ರೀನಿವಾಸ್, ವಾಸು ಸಿದ್ದಾಪುರ