ಗೋಣಿಕೊಪ್ಪಲು, ಅ. 17: ಸ್ವಾತಂತ್ರ್ಯ ಬಂದು 69 ವರ್ಷಗಳ ನಂತರ ದಕ್ಷಿಣ ಕೊಡಗು-ಪಿರಿಯಾಪಟ್ಟಣ-ಹಾಸನ ಸಂಪರ್ಕ ರಸ್ತೆ ಅಭಿವೃದ್ಧಿಯತ್ತ ಮೊದಲ ಹೆಜ್ಜೆ ಹಾಕಿದೆ. ರಾಜರ ಕಾಲದಲ್ಲಿ ಎತ್ತಿನ ಗಾಡಿಯ, ಕುದುರೆ ಸಾರೋಟು ರಸ್ತೆಯಾಗಿದ್ದ ಉದ್ದೇಶಿತ ಗೋಣಿಕೊಪ್ಪಲು-ತಿತಿಮತಿ-ಆನೆಚೌಕೂರು-ಪಿರಿಯಾಪಟ್ಟಣ ಸಂಪರ್ಕದ 11.5 ಕಿ.ಮೀ. ರಸ್ತೆ ಇದೀಗ ಅಗಲೀಕರಣದೊಂದಿಗೆ ಗುಣಮಟ್ಟದ ರಸ್ತೆಯಾಗಿ ಪರಿವರ್ತನೆಯಾಗುತ್ತಿದೆ. ಇದಕ್ಕೂ ಮುನ್ನ ಒಂದೆರಡು ಬಾರಿ ರಸ್ತೆ ಡಾಂಬರೀಕರಣಗೊಂಡಿದ್ದರೂ ಹೊಂಡದ ರಸ್ತೆಯಲ್ಲಿಯೇ ಖಾಸಗಿ ವಾಹನ, ಕಾಫಿ ಸಾಗಾಟ, ಸರಕು ಸಾಗಾಟ ಲಾರಿಗಳು, ರಾಜ್ಯ ರಸ್ತೆ ಸಾರಿಗೆ ಬಸ್‍ಗಳು ತ್ರಾಸದಾಯಕವಾಗಿ ಓಡಾಟ ನಡೆಸಬೇಕಾಗಿತ್ತು. ಇದೀಗ ಸುಮಾರು ರೂ. 19 ಕೋಟಿ ಅನುದಾನದಲ್ಲಿ ಉತ್ತಮ ರಸ್ತೆ ನಿರ್ಮಾಣ ಭಾಗ್ಯ ಕಂಡಿದ್ದು ಮುಂದಿನ 9 ತಿಂಗಳಿನಲ್ಲಿ ಸುಮಾರು 7 ಮೀಟರ್ ಅಗಲದ ರಸ್ತೆ ನಿರ್ಮಾಣ ಪೂರ್ಣಗೊಳ್ಳಲಿದೆ ಎನ್ನಲಾಗುತ್ತಿದೆ. ಕಳೆದ ಒಂದು ತಿಂಗಳಿನಿಂದ ಕಾಮಗಾರಿ ವೇಗ ಪಡೆದುಕೊಂಡಿದೆ. ಉದ್ದೇಶಿತ ರಸ್ತೆ ಬಗ್ಗೆ ‘ಶಕ್ತಿ’ ಹಲವು ಬಾರಿ ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಹಾಸನ-ಬೆಟ್ಟದಪುರ-ಪಿರಿಯಾಪಟ್ಟಣ ರಸ್ತೆಯೂ ಉತ್ತಮ ರಸ್ತೆಯಾಗಿ ರೂಪುಗೊಳ್ಳುತ್ತಿದ್ದು, ಮುಂದೆ ಹಾಸನ ಮಾರ್ಗ ಕೊಡಗು ಹಾಗೂ ಕೇರಳದ ಪ್ರವಾಸೋದ್ಯಮ ಚಟುವಟಿಕೆ ಅಭಿವೃದ್ಧಿ ನಿಟ್ಟಿನಲ್ಲಿಯೂ ರಾಷ್ಟ್ರೀಯ ಹೆದ್ದಾರಿಯಾಗಿ ರೂಪುಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಬಂಡೀಪುರ ರಾಷ್ಟ್ರೀಯ ಉದ್ಯಾನ ಹಾಗೂ ಸುಲ್ತಾನ್ ಬತೇರಿ ಮಾರ್ಗ ಕೇರಳಕ್ಕೆ ತೆರಳುತ್ತಿದ್ದ ಬಸ್‍ಗಳ ಓಡಾಟ ಸ್ಥಗಿತಗೊಂಡ ನಂತರ ಮೈಸೂರು-ಗೋಣಿಕೊಪ್ಪಲು-ಪೆÇನ್ನಂಪೇಟೆ-ಕುಟ್ಟಮಾರ್ಗ ಮಾನಂದವಾಡಿಗೆ ನೂರಾರು ಬಸ್‍ಗಳು ರಾತ್ರಿಯ ವೇಳೆ, ಬೆಳಗ್ಗಿನ ಜಾವ ಓಡಾಟ ಆರಂಭಿಸಿದ್ದವು. ಇದೀಗ ರಾಜ್ಯ ಸರ್ಕಾರ ರೂ. 34 ಕೋಟಿ ಮೊತ್ತದ ಅನುದಾನವನ್ನು ಕೊಡಗು ಮಾರ್ಗ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಬಿಡುಗಡೆ ಮಾಡಿದ್ದು, ಆನೆಚೌಕೂರು-ತಿತಿಮತಿ-ಕೋಣನಕಟ್ಟೆ-ಬಾಳೆಲೆ-ನಿಟ್ಟೂರು-ಕಾನೂರು-ಕುಟ್ಟ ಮಾರ್ಗ ಕೇರಳದ ತೋಲ್‍ಪೆಟ್ಟಿ ಕಡೆಗೆ ಮತ್ತೊಂದು ರಸ್ತೆ ಅಭಿವೃದ್ಧಿ ಗೊಳ್ಳಲಿದೆ. ಉದ್ದೇಶಿತ ರಸ್ತೆಯು ಮುಂದೆ ರಾಷ್ಟ್ರೀಯ ಹೆದ್ದಾರಿ ಯಾಗಿಯೂ ಅಭಿವೃದ್ಧಿ ಗೊಳಿಸಲು ಪ್ರಸ್ತಾವನೆ ಕಳುಹಿಸ ಲಾಗಿದೆ ಎನ್ನಲಾಗುತ್ತಿದೆ.

ಗೋಣಿಕೊಪ್ಪಲು ಹಾಗೂ ಪೆÇನ್ನಂಪೇಟೆ ಅವಳಿ ನಗರದ ಮೂಲಕ ಹಾಸನ-ದಕ್ಷಿಣ ಕೊಡಗು-ಕೇರಳ ಮಾರ್ಗ ಅಂತರರಾಜ್ಯ ರಸ್ತೆ ಹೆದ್ದಾರಿ ಉದ್ದೇಶವಿಲ್ಲ. ಕೋಣನಕಟ್ಟೆ ಮಾರ್ಗ ನಾಗರಹೊಳೆ ರಾಷ್ಟ್ರೀಯ ಸರಹದ್ದಿನ ಮೂಲಕವೇ ಅಂತರರಾಜ್ಯ ಹೆದ್ದಾರಿ ಹಾದುಹೋಗಲಿದೆ. ದಕ್ಷಿಣ ಕೊಡಗಿನ ಕೆಲವೊಂದು ಸಂಘಟನೆ ಗಳು ಕೇರಳಕ್ಕೆ ಸಂಪರ್ಕ ರೈಲು ಮಾರ್ಗವನ್ನು ವಿರೋಧಿಸಿದ ನಂತರ ನಡೆದ ಬೆಳವಣಿಗೆ ಇದಾಗಿದ್ದರೂ, ಹೈಟೆನ್ಷನ್ ವಿದ್ಯುತ್ ಲೇನ್ ಹಲವು ವಿರೋಧಗಳ ನಡುವೆಯೂ

ಅನುಷ್ಠಾನಗೊಂಡ ಹಿನ್ನೆಲೆ ಇದೀಗ ಮೈಸೂರಿನಿಂದ ದಕ್ಷಿಣ ಕೊಡಗಿನ ಮಾರ್ಗ ಕೇರಳಕ್ಕೆ ಸದ್ದಿಲ್ಲದೆ ರೈಲು ಮಾರ್ಗವನ್ನೂ ಅಳವಡಿಸಲು ಕೇರಳ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರುತ್ತಿದೆ ಎನ್ನಲಾಗಿದೆ.

ಒಂದೆಡೆ ಅಭಿವೃದ್ಧಿ ಮಂತ್ರ, ಮತ್ತೊಂದೆಡೆ ದಕ್ಷಿಣ ಕೊಡಗಿನ ಸಣ್ಣ ಹಿಡುವಳಿದಾರರು, ಭೂಮಾಲೀಕರು ಆಸ್ತಿ ಪಾಸ್ತಿಯನ್ನು ಕಳೆದುಕೊಳ್ಳದೆ ವಿಧಿಯಿಲ್ಲ ಎಂದು ನಂಬಲರ್ಹ ಮೂಲಗಳು ಖಚಿತಪಡಿಸಿವೆ!

ಪಿರಿಯಾಪಟ್ಟಣ ತಾಲೂಕು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಎಸ್. ಪ್ರಕಾಶ್ ಅವರ ಪ್ರಯತ್ನದಿಂದ ಹಾಗೂ ಸದಾ ಟೀಕೆಗೆ ಗುರಿಯಾಗುತ್ತಿದ್ದ ಪಿರಿಯಾಪಟ್ಟಣ ಪಿಡಬ್ಲ್ಯೂಡಿ ಇದೀಗ 11.5 ಕಿ.ಮೀ. ರಸ್ತೆಯನ್ನು ಉತ್ತಮವಾಗಿ ಅಭಿವೃದ್ಧಿಪಡಿಸುವದು ಕಂಡು ಬಂದಿದೆ. ಕೆ.ಆರ್. ಪೇಟೆಯ ಮಂಜುನಾಥ್ ಅವರು ಗುತ್ತಿಗೆದಾರ ರಾಗಿದ್ದು, ಸುಮಾರು 47.50 ದಪ್ಪದಲ್ಲಿ ರಸ್ತೆ ನಿರ್ಮಾಣವಾಗುತ್ತಿದೆ. ವೆಟ್‍ಮಿಕ್ಸ್ 20 ಸೆ.ಮೀಟರ್, ಜಿ.ಎಸ್.ಪಿ. 20 ಸೆ.ಮೀಟರ್ ದಪ್ಪ, ಬಿ.ಎಂ. 5 ಸೆ.ಮೀಟರ್ ಹಾಗೂ ಎಸ್‍ಟಿಬಿಸಿ 25 ಸೆ.ಮೀಟರ್ ದಪ್ಪದಲ್ಲಿ ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ ಎಂದು ಇಂಜಿನಿಯರ್ ವರುಣ್ ತಿಳಿಸಿದ್ದಾರೆ. ಇದೀಗ ಒಟ್ಟು 7 ಮೀಟರ್ ಅಗಲದ ರಸ್ತೆ ನಿರ್ಮಾಣವಾಗುತ್ತಿದ್ದು, ಭವಿಷ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಯಾಗಿ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ದಕ್ಷಿಣ ಕೊಡಗಿನಿಂದ ಕಾಫಿ ತುಂಬಿದ ಬಹುತೇಕ ಲಾರಿಗಳು ತಿತಿಮತಿ-ಆನೆಚೌಕೂರು-ಪಿರಿಯಾಪಟ್ಟಣ ಮಾರ್ಗ ಕುಶಾಲನಗರ ಹಾಗೂ ಕೂಡಿಗೆ ಕಾಫಿ ಸಂಸ್ಕರಣಾ ಕೇಂದ್ರ ಹಾಗೂ ಹಾಸನ-ಚಿಕ್ಕಮಗಳೂರಿನತ್ತ ತೆರಳುತ್ತಿದ್ದವು. ನಂತರ ಭಾರೀ ವಾಹನಗಳ ಓಡಾಟ ಹದಗೆಟ್ಟ ರಸ್ತೆಯಿಂದಾಗಿ ಮೊಟಕುಗೊಂಡಿತ್ತು. ಕೇರಳಕ್ಕೆ ಹಾಸನದಿಂದ ತರಕಾರಿ, ಸಿಮೆಂಟ್, ಅಕ್ಕಿ ಇತ್ಯಾದಿ ದಿನಸಿ ಸಾಮಗ್ರಿಗಳು ಈ ಹಿಂದೆ ಸಾಗಾಟವಾಗುತ್ತಿತ್ತು. ಉದ್ದೇಶಿತ ರಸ್ತೆ ಕಾಮಗಾರಿ ಪೂರ್ಣಗೊಂಡಲ್ಲಿ ಮತ್ತಷ್ಟು ಹೊಸ ಕರ್ನಾಟಕ ರಸ್ತೆ ಸಾರಿಗೆ, ಕೇರಳ ರಸ್ತೆ ಸಾರಿಗೆ ಬಸ್‍ಗಳು ಹಾಸನ-ಪಿರಿಯಾಪಟ್ಟಣ-ಕೋಣನಕಟ್ಟೆ- ಕುಟ್ಟ ಮಾರ್ಗ ಕೇರಳಕ್ಕೆ ಸಂಚರಿಸಲಿದೆ ಎಂದು ಹೇಳಲಾಗಿದೆ.

ಪಿರಿಯಾಪಟ್ಟಣದಿಂದ ಗೋಣಿಕೊಪ್ಪಲು, ವೀರಾಜಪೇಟೆ ಇತ್ಯಾದಿ ನಗರಗಳಿಗೆ ವೀಳ್ಯ, ತರಕಾರಿ, ಸೊಪ್ಪು ಇತ್ಯಾದಿಗಳು ಅಧಿಕವಾಗಿ ಈಗಲೂ ಬರುತ್ತಿದ್ದು 11.5 ಕಿ.ಮೀ. ರಸ್ತೆ ವರ್ಷದ ಅವಧಿಯಲ್ಲಿ ಪೂರ್ಣಗೊಂಡಲ್ಲಿ ಈ ಭಾಗದಲ್ಲಿ ವ್ಯಾಪಾರ-ವಹಿವಾಟು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

- ಟಿ.ಎಲ್. ಶ್ರೀನಿವಾಸ್