ಮಡಿಕೇರಿ, ನ. 16: ವಿವಿಧ ಉಪಯೋಗೀ ವಸ್ತುಗಳು ಇಂದು ಆನ್‍ಲೈನ್ ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದು, ಔಷಧಗಳೂ ದೊರೆಯಲಾರಂಭಿಸಿವೆ. ಔಷಧಗಳಿಗೆ ಮುನ್ನೂರು ಪಟ್ಟು ಕೆಲವೊಮ್ಮೆ ಅದಕ್ಕೂ ಹೆಚ್ಚು ಲಾಭವಿರಿಸಿ ಮಾರುವ ಔಷಧ ವ್ಯಾಪಾರಿಗಳಿಗೆ ಆನ್‍ಲೈನ್ ಬಿಸಿ ತಟ್ಟುತ್ತಿದ್ದು, ಸಾಕಷ್ಟು ಔಷಧಗಳ ಬೆಲೆ ಕಡಿತಗೊಳಿಸಲಾಗಿದೆ. ಆನ್‍ಲೈನ್ ಮಾರಾಟ ವಿರೋಧಿಸಿ ಇತರ ಬೇಡಿಕೆಗಳೊಂದಿಗೆ ಎಂಟು ಲಕ್ಷಕ್ಕೂ ಅಧಿಕ ಔಷಧ ವ್ಯಾಪಾರಿಗಳು ರಾಷ್ಟ್ರಾದ್ಯಂತ ನ. 23 ರಂದು ಮಳಿಗೆ ಮುಚ್ಚಿ ಪ್ರತಿಭಟಿಸಲಿದ್ದಾರೆ.
ನಿತ್ಯ ಮಾರಾಟವಾಗುವ ಹಲವು ಔಷಧಗಳ ಬೆಲೆಯನ್ನು ಗಣನೀಯವಾಗಿ ಇಳಿಸಲಾಗಿದೆ. ಉದಾಹರಣೆಗೆ ‘ಅಗುಮೆಂಟಿನ್ 625’ರ ಬೆಲೆ 252.69 ಇದ್ದುದನ್ನು ರೂ. 169.47ಕ್ಕೆ ಇಳಿಸಲಾಗಿದೆ. ಸಾಕಷ್ಟು ಮಾರಾಟವಾಗುವ ‘ಸಿಟ್ರಿಜಿನ್’ ಮಾತ್ರೆಗೆ ರೂ. 20.93 ಇದ್ದುದು ಇದೀಗ ರೂ. 16.06 ಆಗಿದೆ. ರೂ. 115.70 ಇದ್ದ ‘ಅಜಿತ್ರಾಲ್’ ಮಾತ್ರೆ ಈಗ ರೂ. 95.13ಕ್ಕೆ ಲಭ್ಯವಿದೆ. ಅಮ್ಲಾಂಗ್ ಮಾತ್ರೆ ರೂ. 49.30 ಇದ್ದುದು ರೂ. 33.69 ಆಗಿದೆ. ‘ಟಾಜ್ಲಾಕ್ ಮಾತ್ರೆ ರೂ. 86.58 ಇದ್ದುದು ರೂ. 64.26ಕ್ಕೆ ಇಳಿದಿದೆ.
ಅನಿಯಂತ್ರಿತ ಬೆಲೆ
ಸಾಮಾನ್ಯ ಔಷಧಗಳ ಬೆಲೆಯನ್ನು ರಾಷ್ಟ್ರೀಯ ಕ್ರಯ ನಿಗದಿ ನಿಗಮ ಮಾಡುತ್ತದೆ. ಆದರೆ ಈ ನಿಗಮಕ್ಕೆ ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವುಳ್ಳ ಹೃದಯ ಸಂಬಂಧೀ ‘ಸ್ಟೆಂಟ್’ ಇತ್ಯಾದಿ, ಹೃದಯ ಮತ್ತು ಕ್ಯಾನ್ಸರ್ ಔಷಧಗಳ ಮೆಲೆ ಹಿಡಿತವಿಲ್ಲ. ಒಂದು ‘ಸ್ಟೆಂಟ್’ ಮಾರುಕಟ್ಟೆಯಲ್ಲಿ ಹತ್ತು ಸಾವಿರಕ್ಕೆ ದೊರೆತರೆ ಆಸ್ಪತ್ರೆಗಳಲ್ಲಿ ಅದಕ್ಕೆ ಒಂದು-ಎರಡು ಲಕ್ಷದಷ್ಟು ಹಣವನ್ನು ರೋಗಿಯಿಂದ ಕಸಿಯಲಾಗುತ್ತದೆ. ಇವನ್ನು ಆಸ್ಪತ್ರೆಗಳು ಔಷಧ ವ್ಯಾಪಾರಿಗಳಿಂದಲೇ ಪಡೆಯಬೇಕೆಂದೇನು ಇಲ್ಲ. ಹಾಗಾಗಿ ಇದೊಂದು ದಂಧೆಯಾಗಿದೆ.
ಆನ್‍ಲೈನ್ ಅವಾಂತರ
ಆನ್‍ಲೈನ್‍ನಿನಲ್ಲಿ ಔಷಧ ಪಡೆದರೆ ಸಾಕಷ್ಟು ಅವಾಂತರಗಳು ಆಗಲಿವೆ ಎಂದು ರಾಜ್ಯ ಕೆಮಿಸ್ಟ್ಸ್ ಆ್ಯಂಡ್ ಡ್ರಗ್ಗಿಸ್ಟ್ ಸಂಘದ ಕಾರ್ಯದರ್ಶಿ ಎ.ಕೆ. ಜೀವನ್ ಹೇಳುತ್ತಾರೆ.
ಆನ್‍ಲೈನಿನಲ್ಲಿ ಔಷಧ ತರಿಸಿ ಅದು ವ್ಯತಿರಿಕ್ತ ಪರಿಣಾಮ ಬೀರಿದರೆ ಅದಕ್ಕಾಗಿ ಅವರನ್ನು ಸುಲಭವಾಗಿ ಜವಾಬ್ದಾರಿ ಮಾಡುವಂತಿಲ್ಲ. ಕೊಂಡ ಔಷಧವನ್ನು ಬದಲಾಯಿಸಲಾಗುವದಿಲ್ಲ. ನಿದ್ರೆ ಮಾತ್ರೆಯಂತಹ ಹಿಡಿತದಲ್ಲಿ ನೀಡಬೇಕಾಗುವ ಔಷಧ ಧಾರಾಳವಾಗಿ ಲಭ್ಯವಾಗಿ ಅಪಾಯಕ್ಕೆ ಸುಲಭವಾಗಿ ಆಹ್ವಾನ ನೀಡಿದಂತಾಗುತ್ತದೆ. ಆನ್‍ಲೈನ್ಗೆ ಯಾರೋ ವೈದ್ಯರ ಚೀಟಿಯ ಪ್ರತಿ ಸ್ಕ್ಯಾನ್ ಮಾಡಿ ನೀಡಲಾಗುತ್ತದೆ. ಆ ಚೀಟಿ ಅಸಲೋ-ನಕಲೊ ಪರಿಶೀಲಿಸಲು ಮಾರಾಟಗಾರನಿಗೆ ಸಾಧ್ಯವಿಲ್ಲ. ಆನ್‍ಲೈನಿನಲ್ಲಿ ಕಳಪೆ ಔಷಧ ಮಾರಲು ಅವಕಾಶವಿದೆ.
(ಮೊದಲ ಪುಟದಿಂದ) ಏಕೆಂದರೆ ಡ್ರಗ್ ಡಿಪಾರ್ಟ್‍ಮೆಂಟಿಗೆ ಇದರ ಮೇಲೆ ಯಾವದೇ ಹಿಡಿತವಿರುವದಿಲ್ಲ. ಔಷಧ ಮಳಿಗೆಗಳಿಗಾದರೆ ಡ್ರಗ್ ಇನ್ಸ್‍ಪೆಕ್ಟರ್‍ಗಳು ಆಗಿಂದ್ದಾಗೆ ಭೇಟಿಯಿತ್ತು ಮಾರಾಟಕ್ಕಿರುವ ಔಷಧಗಳನ್ನು ಕ್ರಯಸಹಿತ ಪರಿಶೀಲಿಸುತ್ತಾರೆ.
ದೇಶದಲ್ಲಿ ಎಂಟು ಲಕ್ಷಕ್ಕೂ ಹೆಚ್ಚು ಅಧಿಕೃತ ಔಷಧ ಮಳಿಗೆಗಳಿದ್ದಾವೆ. ನಲವತ್ತು ಲಕ್ಷ ಮಂದಿ ಮಳಿಗೆಗಳನ್ನು ಅವಲಂಬಿಸಿದ್ದಾರೆ. ಆನ್‍ಲೈನ್ ಹೊಡೆತದೊಂದಿಗೆ ಮಳಿಗೆಗಳ ಪರವಾನಗಿಯನ್ನು ವಾರ್ಷಿಕ ಮೂರು ಸಾವಿರದೊಂದಿಗೆ ದಿಢೀರನೆ ಮೂವತ್ತು ಸಾವಿರಕ್ಕೆ ಏರಿಸಿ ಆದೇಶ ಹೊರಬಿದ್ದಿದೆ.
ಔಷಧ ಮಳಿಗೆಗಳ ವ್ಯಾಪಾರ ಕುಸಿದರೆ ನಲವತ್ತು ಲಕ್ಷ ಮಂದಿ ನಿರ್ಗತಿಕರಾಗುತ್ತಾರೆ ಎನ್ನುವ ಜೀವನ್ ಕುಶಾಲಪ್ಪ ಅವರು, ಆನ್‍ಲೈನ್‍ನಲ್ಲಿ ಔಷಧಗಳ ಅಕ್ರಮ ಮಾರಾಟವನ್ನು ವಿರೋಧಿಸಿ ಅಖಿಲ ಭಾರತ ಔಷಧ ವ್ಯಾಪಾರಿಗಳು ನ. 23 ರಂದು ದೇಶವ್ಯಾಪಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ ಎಂದಿದ್ದಾರೆ.
ಇ-ಫಾರ್ಮಸಿಯ ಮುಖಾಂತರ ಔಷಧ ವ್ಯಾಪಾರಕ್ಕೆ ಅನುಮತಿ ನೀಡಿರುವ ಕೇಂದ್ರ ಸರಕಾರದ ನಡೆಯನ್ನು ವಿರೋಧಿಸುತ್ತೇವೆ. ಸಾಮಾನ್ಯ ಜನರ ಆರೋಗ್ಯವನ್ನು ರಕ್ಷಿಸಲು ಹಾಗೂ 8,80,000 ಸಾವಿರ ಔಷಧ ವ್ಯಾಪಾರಿಗಳ ಒಳಿತಿಗಾಗಿ ಮುಷ್ಕರಕ್ಕೆ ಕರೆ ನೀಡಿರುವದಾಗಿ ಎಐಒಸಿಡಿ ಅಧ್ಯಕ್ಷ ಜೆ.ಎಸ್. ಶಿಂಧೆ ಹೇಳಿದ್ದಾರೆ. ಈಗಾಗಲೇ ಆನ್‍ಲೈನ್‍ನಲ್ಲಿ ಅಕ್ರಮವಾಗಿ ಔಷಧ ಮಾರಾಟವಾಗುತ್ತಿದ್ದು, ಸರಕಾರವು ಯಾವದೇ ಕ್ರಮಗಳನ್ನು ಕೈಗೊಂಡಿಲ್ಲ. ಇದರಿಂದ ಮಾದಕ ವ್ಯಸನಿಗಳ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.