ಸೋಮವಾರಪೇಟೆ, ಜೂ. 23: ತಾ. 19 ರಂದು ಸೋಮವಾರಪೇಟೆಯಲ್ಲಿ ನಡೆದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತನ ಮೇಲಿನ ಹಲ್ಲೆ,ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಮಾಯಕರನ್ನು ಬಂಧಿಸಿದ್ದಾರೆ ಎಂದು ಆರೋಪಿಸಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಹೇಳಿಕೆಗೆ ಹಿಂದೂ ಜಾಗರಣಾ ವೇದಿಕೆ ತಿರುಗೇಟು ನೀಡಿದ್ದು, ಹಾಗಿದ್ದಲ್ಲಿ ನಿಜವಾದ ಆರೋಪಿಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸಿ ಅಮಾಯಕರನ್ನು ಬಿಡಿಸಲಿ ಎಂದು ಸವಾಲು ಹಾಕಿದೆ.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಾಗರಣಾ ವೇದಿಕೆಯ ತಾಲೂಕು ಸಂಚಾಲಕ ದರ್ಶನ್ ಜೋಯಪ್ಪ, ಜಿಲ್ಲೆಯಲ್ಲಿ ಕೋಮು ಪ್ರಚೋದನೆಗೆ ಕುಮ್ಮಕ್ಕು ನೀಡುತ್ತಿರುವ ಪಿ.ಎಫ್.ಐ. ಸಂಘಟನೆಯನ್ನು ಸರ್ಕಾರ ತಕ್ಷಣ ನಿಷೇಧಿಸಬೇಕೆಂದು ಆಗ್ರಹಿಸಿದರು.
ಪಿಎಫ್‍ಐ ಪ್ರಕಾರ ಇದೀಗ ಬಂಧನಕ್ಕೊಳಗಾದವರು ಅಮಾಯಕರಾಗಿದ್ದರೆ ಮೋಹನ್ ಅವರ ಮೇಲೆ ಹಲ್ಲೆ ನಡೆಸಿದ ನಿಜವಾದ ಆರೋಪಿಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸಲಿ. ನಂತರ ಇದೀಗ ಬಂಧನಕ್ಕೊಳಗಾಗಿರುವ ವರನ್ನು ಬಿಡಿಸಿಕೊಳ್ಳಲಿ. ಜೀವನ್ಮರಣ ಸ್ಥಿತಿಗೆ ತಲುಪುವಂತೆ ಹಲ್ಲೆ ಮಾಡಿದ ವ್ಯಕ್ತಿಗಳು ಪಿಎಫ್‍ಐ ಪ್ರಕಾರ ಅಮಾಯಕರೇ? ಎಂದು ತಿರುಗೇಟು ನೀಡಿದರು.
ಸೋಮವಾರಪೇಟೆ ಪಟ್ಟಣದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಕರೀಂ ಬೇಗ್ ಎಂಬ ಯುವಕ ನೇರ ಕಾರಣನಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಿಂದೂ ದೇವತೆಗಳು ಮತ್ತು ಹಿಂದೂ ಸಂಘಟನೆಗಳ ಕುರಿತು ಅವಹೇಳನ ಕಾರಿಯಾಗಿ ಸಂದೇಶಗಳನ್ನು ಕಳುಹಿಸಿದ್ದಾನೆ. ಈಗ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿ ಮುಂದಿನ ಟಿಪ್ಪು ಜಯಂತಿ ವೇಳೆ ನೀನು ಬದುಕಿರಬಾರದು ಎಂಬ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾನೆ. ಇಂತಹವರನ್ನು ಅಮಾಯಕರೆಂದು ಸಮರ್ಥಿಸಿ ಕೊಳ್ಳುವ ಪಿ.ಎಫ್.ಐ. ಸಂಘಟನೆಗೆ ನೈತಿಕತೆ ಇದೆಯೇ? ಎಂದು ಪ್ರಶ್ನಿಸಿದರು.
ಆರ್‍ಎಸ್‍ಎಸ್ ಪಥಸಂಚಲನ ಸಂದರ್ಭ ಅಡ್ಡಾದಿಡ್ಡಿ ಬೈಕ್ ಚಾಲಿಸಿ ಗಲಭೆ ಸೃಷ್ಟಿಸಲು ಯತ್ನಿಸಿದ್ದ ಕರೀಂ ಬೇಗ್‍ನ ಹಿಂದೆ ಬೃಹತ್ ಜಾಲ ಇರುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ಕಾಲೇಜಿಗೆ ತೆರಳುತ್ತಿದ್ದ ಸಂದರ್ಭ ಸ್ವಾಮಿ ವಿವೇಕಾನಂದ ಜಯಂತಿಗೆ ಕಾಲೇಜು ಸಹಪಾಠಿಗಳನ್ನು ಕರೆತಂದಿದ್ದ ಕರೀಂ ಸಭ್ಯನೇ ಆಗಿದ್ದ. ಕಾಲೇಜು ಮುಗಿದ ನಂತರ ಪಿಎಫ್‍ಐ ಸಂಘಟನೆ ಸೇರಿದ ಮೇಲೆ ಇಂತಹ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾನೆ. ಈತನಿಗೆ ಉಗ್ರ ಸಂಘಟನೆಗಳ ಸಂಪರ್ಕವಿರುವ ಬಗ್ಗೆ ಸಂಶಯವಿದ್ದು, ತಕ್ಷಣ ಬಂಧಿಸಿ ತನಿಖೆಗೊಳಪಡಿಸಬೇಕು ಎಂದರು.
ಪಿ.ಎಫ್.ಐ. ಸಂಘಟನೆಯಲ್ಲಿ ರುವ ಕೆಲವರು ಈ ಹಿಂದೆ ಹೊಸತೋಟದಲ್ಲಿ ನೆಲೆಸಿದ್ದ ಉಗ್ರಗಾಮಿ ಸಂಘಟನೆಯೊಂದರ ಮುಖಂಡನೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದವರು. ಹೊಸತೋಟದಲ್ಲಿ ನಡೆದ ಗಲಭೆಗಳಲ್ಲಿ ಇವರುಗಳೂ ಆರೋಪಿಗಳಾಗಿದ್ದಾರೆ. ಇದೀಗ ಹಿಂದೂ ಸಮಾಜದ ಮುಖಂಡರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವದು ಖಂಡನೀಯ. ಇಂತಹವರಿಂದ ಹಿಂದೂಪರ ಸಂಘಟನೆಗಳು ಸಲಹೆಯನ್ನು ಕೇಳುವ ಅಗತ್ಯವಿಲ್ಲ ಎಂದರು. ಸಂಘ ಪರಿವಾರದ ಮೇಲೆ ನಿರಂತರ ಆರೋಪಗಳನ್ನು ಮಾಡುತ್ತಾ ಕೋಮುಗಲಭೆಗಳನ್ನು ಸೃಷ್ಟಿಸಲು ಕಾರಣವಾಗಿರುವ ಪಿ.ಎಫ್.ಐ. ಸಂಘಟನೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ವೇದಿಕೆಯ ತಾಲೂಕು ಅಧ್ಯಕ್ಷ ನಗರಳ್ಳಿ ರಮೇಶ್, ತಾಲೂಕು ಕಾರ್ಯದರ್ಶಿ ಉಮೇಶ್, ಸಹ ಸಂಚಾಲಕ ಕರ್ಕಳ್ಳಿ ರವಿ, ಕಾರ್ಯಕರ್ತ ಶಶಿಕಾಂತ್ ಉಪಸ್ಥಿತರಿದ್ದರು.