ಮಡಿಕೇರಿ, ಅ. 27: ರಾಜ್ಯ ಸರ್ಕಾರ ಪಂಚಾಯಿತಿ ಅಧಿನಿಯಮಕ್ಕೆ ತಂದಿರುವ ನೂತನ ತಿದ್ದು ಪಡಿಯನ್ವಯ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಪ್ರತಿ ವರ್ಷವೂ ಸೆಪ್ಟೆಂಬರ್ ಅಂತ್ಯದೊಳಗೆ ತಮ್ಮ ಮತ್ತು ತಮ್ಮ ಕುಟುಂಬದ ಎಲ್ಲಾ ಸದಸ್ಯರು ಹೊಂದಿರುವ ಎರಡು ಲಕ್ಷ ಮೌಲ್ಯಕ್ಕಿಂತ ಹೆಚ್ಚಿನ ಚರ ಮತ್ತು ಸ್ಥಿರ ಆಸ್ತಿಯ ಮತ್ತು ಹೊಣೆಗಾರಿಕೆಯ ಬಗ್ಗೆ ಘೋಷಣೆಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಜಿಲ್ಲಾ ಚುನಾವಣಾ ಆಯೋಗದ ಮೂಲಕ ಕಡ್ಡಾಯವಾಗಿ ಸಲ್ಲಿಸಬೇಕಾಗಿದೆ.

ಚುನಾವಣಾ ಆಯೋಗದ ಪೂರ್ವ ಸೂಚನೆಯನ್ನು ನಿರ್ಲಕ್ಷಿಸಿ ಕೊಡಗು ಜಿಲ್ಲೆಯ 29 ಮಂದಿ ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಮಡಿಕೇರಿಯ 12, ಸೋಮವಾರಪೇಟೆ ಮತ್ತು ವೀರಾಜಪೇಟೆ ತಾಲೂಕುಗಳ ತಲಾ 19ಮಂದಿ ಸೇರಿ ಒಟ್ಟು 50 ಮಂದಿ ತಾಲೂಕು ಪಂಚಾಯಿತಿ ಸದಸ್ಯರುಗಳು ಇದುವರೆಗೂ ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಿಲ್ಲ. ಇದೀಗ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದನ್ವಯ ಜಿಲ್ಲಾ ಚುನಾವಣಾಧಿಕಾರಿಗಳು ಈ ಎಲ್ಲಾ ಸದಸ್ಯರುಗಳಿಗೆ ಪುನಃ ನೋಟೀಸ್ ಜಾರಿಗೊಳಿಸುತ್ತಿದ್ದಾರೆ. ಅಕ್ಟೋಬರ್ ಅಂತ್ಯದೊಳಗೆ ಈ ಎಲ್ಲಾ ಸದಸ್ಯರುಗಳು ನಮೂನೆ 1ರಲ್ಲಿ ತಮ್ಮ ಮತ್ತು ತಮ್ಮ ಕುಟುಂಬದ ಚರ- ಸ್ಥಿರ ಆಸ್ತಿ ಹಾಗೂ ಹೊಣೆಗಾರಿಕೆ ಬಗ್ಗೆ ಘೋಷಣೆ ಸಲ್ಲಿಸದಿದ್ದಲ್ಲಿ ಕಾನೂನಿನ್ವಯ ಸದಸ್ಯತ್ವದಿಂದ ಅನರ್ಹಗೊಳ್ಳಲಿರುವದಾಗಿ ‘ಶಕ್ತಿ’ಗೆ ಖಚಿತ ಮಾಹಿತಿ ಲಭ್ಯವಾಗಿದೆ. ಇದರಿಂದಾಗಿ ಕೊಡಗಿನ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ತಕ್ಷಣ ಕಾರ್ಯೋನ್ಮುಖರಾಗದಿದ್ದಲ್ಲಿ ತಮ್ಮ ಸದಸ್ಯತ್ವಕ್ಕೆ ಸಂಚಕಾರ ತಂದುಕೊಳ್ಳುವ ಆತಂಕ ಎದುರಾಗಿದೆ.

ಕೊಡಗು ಜಿಲ್ಲೆ ಮಾತ್ರವಲ್ಲದೆ ರಾಜ್ಯದ ಒಟ್ಟು 30 ಸ್ಥಳೀಯ ಸಂಸ್ಥೆಗಳಲ್ಲಿ ಬಹುಪಾಲು ಸದಸ್ಯರು ಹೊಸ ಕಾನೂನು ತಿದ್ದುಪಡಿಯ ಅರಿವಿಲ್ಲದೆ ತಮ್ಮ ಆಸ್ತಿಯನ್ನು ಘೋಷಣೆ ಮಾಡಿಲ್ಲದಿರುವದು ಸ್ಪಷ್ಟಗೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಎಸ್.ಆರ್. ನಾಗರಾಜ್ ಅವರು ಪ್ರಕಟಣೆಯೊಂದನ್ನು ಹೊರಡಿಸಿದ್ದು, ಸದಸ್ಯರುಗಳು ತಮ್ಮ ಅಹವಾಲನ್ನು ಈ ಮಾಸಾಂತ್ಯದೊಳಗೆ ನೀಡದಿದ್ದಲ್ಲಿ ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 136 (ಬಿ) ಹಾಗೂ 175 (ಬಿ) ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವದೆಂದು ಮುನ್ನೆಚ್ಚರಿಕೆಯಿತ್ತಿದ್ದಾರೆ. ರಾಜ್ಯದಲ್ಲಿ ಸೆಪ್ಟೆಂಬರ್ ಅಂತ್ಯದೊಳಗೆ 30 ಜಿಲ್ಲಾ ಪಂಚಾಯಿತಿಗಳ 1983 ಸದಸ್ಯರ ಪೈಕಿ 394 ಮಂದಿ ಮಾತ್ರ ಘೋಷಣೆ ಸಲ್ಲಿಸಿದ್ದಾರೆ. 689 ಮಂದಿ ಸದಸ್ಯರು ನಿರ್ಲಕ್ಷ್ಯ ಮಾಡಿದ್ದಾರೆ. ರಾಜ್ಯದ 176 ತಾಲೂಕು ಪಂಚಾಯಿತಿಗಳ 3903 ಮಂದಿ ಸದಸ್ಯರ ಪೈಕಿ 447 ಮಂದಿ ಸದಸ್ಯರು ಮಾತ್ರ ಘೋಷಣೆ ಸಲ್ಲಿಸಿದ್ದು, 3456 ಮಂದಿ ಸ್ಪಂದಿಸಿಲ್ಲ.

ಈ ಹಿಂದೆ ಸ್ಥಳೀಯ ಸಂಸ್ಥೆಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಮಾತ್ರ ತಮ್ಮ ಆಸ್ತಿ ಮತ್ತು ಹೊಣೆಗಾರಿಕೆ ಬಗ್ಗೆ ಘೋಷಣೆ ಸಲ್ಲಿಸಿದರೆ ಸಾಕಾಗಿತ್ತು. ಆದರೆ ಪ್ರಸಕ್ತ ವರ್ಷ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಯನ್ವಯ ಚುನಾವಣೆಯಲ್ಲಿ ವಿಜೇತರಾಗಿ ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಗೊಂಡ ಸದಸ್ಯರುಗಳು ಅವರ ಸದಸ್ಯತ್ವದ ಪೂರ್ಣಾವಧಿ ತನಕ ಪ್ರತಿವರ್ಷವೂ ಸೆಪ್ಟೆಂಬರ್ 30 ರೊಳಗೆ ಘೋಷಣೆಯನ್ನು ಸಲ್ಲಿಸಲೇಬೇಕು, ಇಲ್ಲದಿದ್ದಲ್ಲಿ ಕಾನೂನಿನನ್ವಯ ಅಂತಹವರ ಸದಸ್ಯತ್ವವೇ ರದ್ದುಗೊಳ್ಳುತ್ತದೆ.