ಮಡಿಕೇರಿ, ಜೂ. 15: ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದುದು ನಿಜ. ಆದರೆ ಇದೀಗ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಲಾಗಿದೆ. ಈ ಹಿಂದೆಯೇ ತಾವು ಪಕ್ಷದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ದುಡಿದಿದ್ದು, ಈಗ ತಮಗೆ ನೀಡಿರುವ ಈ ಸ್ಥಾನವನ್ನು ತಮ್ಮ ಬದಲಾಗಿ ಇತರರಿಗೆ ಅವಕಾಶ ಮಾಡಿಕೊಡಲಿ ಎಂದು ನಿನ್ನೆಯಷ್ಟೇ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಎಂದು ನೇಮಕವಾಗಿದ್ದ ಶಾಂತೆಯಂಡ ರವಿ ಕುಶಾಲಪ್ಪ ಹೇಳಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು ತಾವು ಹಲವಾರು ವರ್ಷಗಳಿಂದ ಪಕ್ಷಕ್ಕೆ ದುಡಿದಿದ್ದು, ಹೋರಾಟದ ಮೂಲಕವೇ ಪಕ್ಷ ಕಟ್ಟಲು ಶ್ರಮಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೆ. ಆದರೆ ಈ ಹಿಂದೆಯೇ ಪ್ರಧಾನ ಕಾರ್ಯದರ್ಶಿಯಾಗಿದ್ದ ಕಾರಣ ಈ ಸ್ಥಾನವನ್ನು ಇತರರಿಗೆ ನೀಡಲಿ ಎಂದು ರವಿ ಕುಶಾಲಪ್ಪ ಪ್ರತಿಕ್ರಿಯಿಸಿದ್ದಾರೆ. ಪಕ್ಷದ ಪ್ರಮುಖರು ನೀಡಿರುವ ಈ ಗೌರವವನ್ನು ತಾವು ತಿರಸ್ಕರಿಸುತ್ತಿಲ್ಲ. ಆದರೆ ಹಿಂದೆ ಕೆಲಸ ನಿರ್ವಹಿಸಿರುವ ಹಿನ್ನೆಲೆ ಯಲ್ಲಿ ಬೇರೆಯವರಿಗೆ ಅವಕಾಶ ನೀಡಲಿ ಎಂಬದು ತಮ್ಮ ನಿಲುವಾಗಿದೆ. ಈ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೂ ತರಲಾಗುವದು. ಅವಕಾಶ ನೀಡಿದ ಪ್ರಮುಖರ ಬಗ್ಗೆ ಗೌರವವಿದ್ದು, ಸಾಮಾನ್ಯ ಕಾರ್ಯಕರ್ತನಾಗಿಯೇ ಕೆಲಸ ನಿರ್ವಹಿಸುವದಾಗಿ ಅವರು ಹೇಳಿದ್ದಾರೆ.