ತಲಕಾವೇರಿ, ಅ. 17: ಆಗ ತಾನೆ ಮೂಡುತ್ತಿದ್ದ ಸೂರ್ಯನ ಕಿರಣ.., ಚುಮು ಚುಮು ಎಂದು ಮೈ ಮನ ತಣಿಸುವಂತೆ ಬೀಳುತ್ತಿದ್ದ ಇಬ್ಬನಿ.., ಚಳಿಯ ವಾತಾವರಣದ ನಡುವೆಯೂ ಕಾದು ನಿಂತಿದ್ದ ಭಕ್ತಾದಿಗಳ ಭಾವಪರವಶÀತೆ.., ಜೈ.., ಜೈ.., ಮಾತಾ.., ಕಾವೇರಿ ಮಾತಾ.., ಕಾವೇರಮ್ಮನ ಪಾದಾರವಿಂದಕ್ಕೆ ಗೋವಿಂದಾ.., ಎಂಬಿತ್ಯಾದಿ ಪ್ರಾರ್ಥನೆಯ ನಡುವೆ ಇಂದು ಮುಂಜಾನೆ ಕೊಡಗಿನ ಕುಲಮಾತೆ.., ನಾಡಿನ ಜೀವನದಿ ಕಾವೇರಿ ತೀರ್ಥರೂಪಿಣಿಯಾಗಿ ಉದ್ಭವಿಸುವ ಮೂಲಕ ಭಕ್ತರನ್ನು ಕರುಣಿಸಿದಳು.

ಈ ಬಾರಿ ಮುಂಜಾನೆಯ ಸಮಯದಲ್ಲಿ ಮಾತೆ ಕಾವೇರಿಯ ತೀರ್ಥೋದ್ಭವದ ಪುಣ್ಯಕಾಲ ನಿಗದಿಯಾಗಿದ್ದು, ಸೂರ್ಯ ತುಲಾ ಲಗ್ನವನ್ನು ಪ್ರವೇಶಿಸುವ ಪುಣ್ಯಗಳಿಗೆಯಲ್ಲಿ ನಿಗದಿತ ಸಮಯ (6.29)ಕ್ಕೆ ಒಂದು ನಿಮಿಷ ಮುಂಚಿತವಾಗಿ 6.28ಕ್ಕೆ ನಾಡಿನ ಜೀವನದಿ ದಕ್ಷಿಣ ಗಂಗೆ ಕಾವೇರಿ ತೀರ್ಥ ರೂಪಿಣಿಯಾಗಿ ಮೈದುಂಬಿ ಹರಿಯುವದರೊಂದಿಗೆ ನಾಡಿನ ಸುಭಿಕ್ಷೆಗೆ ಹರಸಿ ಭಕ್ತಾದಿಗಳನ್ನು ಪುಳಕಿತಗೊಳಿಸಿದಳು.

ಪವಿತ್ರ ತೀರ್ಥೋದ್ಭವವನ್ನು ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ನೆರೆದಿದ್ದ ಭಕ್ತಾದಿಗಳು ಸಾಕ್ಷೀಕರಿಸಿದರು. ಮುಂಜಾನೆ 6 ಗಂಟೆ 29 ನಿಮಿಷಕ್ಕೆ ತೀರ್ಥೋದ್ಭವ ಘಟಿಸುವ ಕುರಿತು ಸಮಯ ನಿಗದಿಯಾಗಿತ್ತು. ನಿನ್ನೆ ರಾತ್ರಿಯಿಂದಲೇ ಭಕ್ತಾದಿಗಳು ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಜಮಾಯಿಸಲಾರಂಭಿಸಿದ್ದರು. ಬೆಳಗ್ಗಿನ ತನಕ ಕಾಲಾವಕಾಶವಿದ್ದರಿಂದ ನಡುರಾತ್ರಿಯ ಬಳಿಕವೂ ಭಕ್ತರು ಕ್ಷೇತ್ರದತ್ತ ಹೆಜ್ಜೆ ಹಾಕುತ್ತಿದ್ದರು. ಬೆಳಗ್ಗಿನ ಜಾವ ಸುಮಾರು 4.30 ಗಂಟೆಯ ನಂತರ ಅರ್ಚಕವೃಂದದಿಂದ ಮಾತೆ ಕಾವೇರಿಯನ್ನು ಸ್ವಾಗತಿಸುವ ನಿಟ್ಟಿನಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು ಆರಂಭಗೊಂಡವು. 5.30 ಗಂಟೆಗೆ ಸಂಪ್ರದಾಯದಂತೆ ಭಾಗಮಂಡಲದ ಭಗಂಡೇಶ್ವರ ದೇವಾಲಯ ತಕ್ಕರಾದ ಬಳ್ಳಡ್ಕ ಅಪ್ಪಾಜಿ ಅವರು ಭಂಡಾರ ತಂದರು. ಈ ಸಂದರ್ಭ ಗೌಡ ಸಮುದಾಯ ಬಾಂಧವರು ಸಾಂಪ್ರದಾಯಿಕ ಉಡುಗೆಯಲ್ಲಿ ಪಾಲ್ಗೊಂಡಿದ್ದರು.

ಅತ್ತ ಅರ್ಚಕವೃಂದದಿಂದ ವೇದ ಮಂತ್ರ ಪಠಣದೊಂದಿಗೆ ಮಹಾ ಆರತಿ ನಡೆಯುತ್ತಿದ್ದರೆ, ಇತ್ತ ಭಕ್ತ ಸಮೂಹದಿಂದ ಭಾವಪರವಶತೆಯ ಭಜನೆಯ ಸ್ತುತಿ ಕ್ಷೇತ್ರದಲ್ಲಿ ಕೇಳಿಬರುತ್ತಿತ್ತು. ಕೆ. ನಿಡುಗಣೆಯ ಕರವಲೆ ಭಗವತಿ ದೇವಾಲಯದ ಎಂ.ಬಿ. ದೇವಯ್ಯ ನೇತೃತ್ವದ ತಂಡ ಸುಮಾರು ಎರಡು ತಾಸಿನಷ್ಟು ಸಮಯ ನಿರಂತರವಾಗಿ ಬಾಳೋಪಾಟ್‍ನ ಮೂಲಕ ಮಾತೆಯನ್ನು ಬರಮಾಡಿಕೊಂಡರು. ನಿಗದಿತ ಸಮಯ ಸನ್ನಿಹಿತವಾಗುತ್ತಿದ್ದಂತೆ ಭಕ್ತಾದಿಗಳ ಭಾವಪರವಶÀತೆ ಇನ್ನಷ್ಟು ಹೆಚ್ಚಾಗತೊಡಗಿತು.

ಗೋವಿಂದಾ.., ಗೋವಿಂದಾ.., ಉದ್ಘೋಷದ ನಡುವೆ ಅರ್ಚಕವೃಂದ ಗೋಪಾಲಕೃಷ್ಣಭಟ್ ಮತ್ತು ನಾರಾಯಣಚಾರ್ ನೇತೃತ್ವದಲ್ಲಿ ಕುಂಡಿಕೆಯಿಂದ ತೀರ್ಥ ಪ್ರೋಕ್ಷಣೆ ಮಾಡಲಾರಂಭಿಸಿದಾಗ ತೀರ್ಥೋದ್ಭವ ಘಟಿಸಿತು ಎಂಬ ಅರಿವಾಯಿತು. ತಕ್ಷಣವೇ ಭಕ್ತರು ನಾ ಮುಂದು ತಾ ಮುಂದು ಎಂಬಂತೆ ಕೊಳಕ್ಕೆ ಧುಮುಕಿ ಪುಣ್ಯ ಸ್ನಾನಗೈದು ತೀರ್ಥ ಸ್ವೀಕರಿಸಿ ಪುನೀತರಾದರು. ಹಿಂದಿನ ವರ್ಷಗಳಿಗೆ ಹೋಲಿಸಿದರೆ, ತೀರ್ಥೋದ್ಭವ ) ಸಂದರ್ಭ ಭಕ್ತಾದಿಗಳ ಸಂಖ್ಯೆ ಬಹುತೇಕ ಕಡಿಮೆ ಕಂಡು ಬಂದಿತಾದರೂ ನೆರೆದಿದ್ದವರು ಭಕ್ತಿಯ ಪರಾಕಾಷ್ಠೆಯಲ್ಲಿದ್ದರು.

ಮನೆ ಮನೆಗೆ ಕಾವೇರಿ

ತಲಕಾವೇರಿ ಕ್ಷೇತ್ರದಲ್ಲಿ ಪುಣ್ಯ ಸ್ನಾನ ಗೈದು ತೀರ್ಥ ಸ್ವೀಕರಿಸಿದ ಭಕ್ತಾದಿಗಳು ಮನೆ ಮನೆಗಳಿಗೂ ಪುಣ್ಯ ತೀರ್ಥವನ್ನು ಕೊಂಡೊಯ್ದರು. ವಿವಿಧ ಸಂಘ ಸಂಸ್ಥೆಗಳು, ಸಮಾಜಗಳ ಮೂಲಕ ಜಿಲ್ಲೆಯಾದ್ಯಂತ ಜನತೆಗೆ ತೀರ್ಥ ವಿತರಣೆ ಕಾರ್ಯ ನಡೆಯು ತ್ತಿದ್ದು, ಈ ಬಾರಿಯೂ ಅಲಂಕೃತ ವಾಹನ, ಮಂಟಪಗಳ ಮೂಲಕ ತೀರ್ಥವನ್ನು ನಾಡಿನ ಮೂಲೆ ಮೂಲೆಗೆ ಕೊಂಡೊಯ್ಯಲಾ ಯಿತು. ಕ್ಷೇತ್ರಕ್ಕೆ ಭೇಟಿ ನೀಡಲು ಸಾಧ್ಯವಾಗ ದವರು ಅಲ್ಲಲ್ಲಿ ತೀರ್ಥ ಪಡೆದು ಪುನೀತರಾದರು. ತೀರ್ಥ ವಿತರಣೆಯ ಮೂಲಕ ತಲಕಾವೇರಿ ಯಿಂದ ನಾಡಿನಾದ್ಯಂತ ಕಾವೇರಿ ಮಾತೆಯನ್ನು ತುಲಾ ಸಂಕ್ರಮಣದ ಪುಣ್ಯ ಕಾಲದಲ್ಲಿ ಆರಾಧಿಸಲಾಯಿತು.

ಇಂದು ಕಣಿಪೂಜೆ

ಕೊಡಗಿನ ಪದ್ಧತಿಯಂತೆ ತಾ. 18ರಂದು (ಇಂದು) ಕಣಿಪೂಜೆಯ ಮೂಲಕ ಮನೆ ಮನೆಗಳಲ್ಲಿ ಆರಾಧಿಸ ಲಾಗುತ್ತದೆ. ಕಾವೇರಿಯ ಪ್ರತಿರೂಪ ಸೃಷ್ಟಿಸಿ ಹೂವು, ಆಭರಣಗಳಿಂದ ಅಲಂಕರಿಸಿ ಬೆಳಗ್ಗಿನ ಜಾವ ಕುಲದೇವಿ ಯನ್ನು ಪೂಜಿಸಲಾಗುತ್ತದೆ. ಸೂರ್ಯೋದ ಯಕ್ಕೆ ಮುನ್ನ ಕೃಷಿ ಗದ್ದೆಯಲ್ಲಿ ‘ಬೊತ್ತ್‍ಪುಟ್ಟ್’ ಅರ್ಪಿಸುವ ದರೊಂದಿಗೆ ಗುರು ಕಾರೋಣರು, ಹಿರಿಯರ ಆಶೀರ್ವಾದ ಪಡೆಯುವ ಮೂಲಕ ಸಂಕ್ರಮಣದ ಆಚರಣೆಯಾ ಗಲಿದೆ. ತುಲಾ ಸಂಕ್ರಮಣದ ಒಂದು ತಿಂಗಳ ಕಾಲ ಕ್ಷೇತ್ರಕ್ಕೆ ಭಕ್ತಾದಿಗಳು ಆಗಮಿಸಿ, ಹಿರಿಯರಿಗೆ ಪಿಂಡ ಪ್ರಧಾನ ಮಾಡುವದರೊಂದಿಗೆ ಪುಣ್ಯಸ್ನಾನ ಮಾಡುವದು ಕಾವೇರಿ ಸಂಕ್ರಮಣದ ಕಟ್ಟು ಪಾಡಾಗಿದೆ.

ಬಲಮುರಿಯಲ್ಲಿ ಆರಾಧನೆ

ತಲಕಾವೇರಿಯಿಂದ ಕಾವೇರಿ ಅಗಸ್ತ್ಯಮುನಿಯ ಕಮಂಡಲದಿಂದ ಹೊರ ಬಂದು ಲೋಕಕಲ್ಯಾಣಕ್ಕೆ ಹೊರಟ ಸಂದರ್ಭ ಮಾತೆಯನ್ನು ಹೋಗದಂತೆ ತಡೆದ ಸ್ಥಳದ ಇತಿಹಾಸ ಹೊಂದಿರುವ ಬಲಮುರಿಯಲ್ಲಿ ತಾ. 18 ರಂದು (ಇಂದು) ಕಾವೇರಿಯ ಆರಾಧನೆ ನಡೆಯಲಿದೆ. ಇಲ್ಲಿಯೂ ಪುಣ್ಯ ಸ್ನಾನದೊಂದಿಗೆ ಭಕ್ತಾದಿಗಳು ಪೂಜೆ ಸಲ್ಲಿಸಲಿದ್ದಾರೆ.