ವೀರಾಜಪೇಟೆ, ಡಿ.29: ಜ್ಞಾನಗಿಂತ ಮಿಗಿಲಾದ ಬೇರೆ ಸಂಪತ್ತಿಲ್ಲ, ಅಜ್ಞಾನಕ್ಕಿಂತ ಬಡತನವಿಲ್ಲ ಎಂಬಂತೆ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಸಮಾಜದ ಮುಕ್ತ ಸೇವೆಗೆ ಮುಂದಾಗಬೇಕು. ಸೇವಾ ಯೋಜನೆಯ ಘಟಕ ವಿದ್ಯಾರ್ಥಿಗಳಿಗೆ ಸಮಾಜ ಸೇವೆಯ ಕುರಿತು ಅರಿವು, ಜಾಗೃತಿ ಮೂಡಿಸುವ ಕಾರ್ಯವನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕು ಎಂದು ಜಾತ್ಯತೀತ ಜನತಾದಳದ ಜಿಲ್ಲಾ ಸಮಿತಿ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.ಗೋಣಿಕೊಪ್ಪಲಿನ ಕಾವೇರಿ ಪದವಿ ಕಾಲೇಜಿನ ರಾಷ್ಟ್ರೀಯ ಯೋಜನಾ ಘಟಕದ ವತಿಯಿಂದ ನಿನ್ನೆ ರಾತ್ರಿ ಏರ್ಪಡಿಸಿದ್ದ ಶಿಬಿರ ಜ್ಯೋತಿ ಮತ್ತು ಕೊಡವ ಆಟ್-ಪಾಟ್ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಕೇತ್ ಪೂವಯ್ಯ ಅವರು 1952ರಿಂದಲೇ ಕೇಂದ್ರದಲ್ಲಿ ಎನ್.ಎಸ್.ಎಸ್. ಘಟಕದ ಸ್ಥಾಪನೆ ಕುರಿತು ಉನ್ನತ ಮಟ್ಟದಲ್ಲಿ ವಿಚಾರ ವಿನಿಮಯ ನಡೆದು 1958 ರಲ್ಲಿ ದೇಶದ 35 ವಿಶ್ವ ವಿದ್ಯಾನಿಲಯಗಳಲ್ಲಿ ಈ ಘಟಕವನ್ನು ಸ್ಥಾಪಿಸಿ ಕಾರ್ಯರೂಪಕ್ಕೆ ತರಲಾಯಿತು. ಇಂದು ರಾಷ್ಟ್ರದ ಎಲ್ಲಾ ಕಾಲೇಜುಗಳಲ್ಲಿ ಯೋಜನೆ ಕಾರ್ಯಗತಗೊಂಡು ಕಾರ್ಯ ನಿರ್ವಹಿಸುತ್ತಿದೆ ಎಂದರಲ್ಲದೆ ಎನ್.ಎಸ್.ಎಸ್. ಲಾಂಛನದ ಆಕಾರ, ಅದರಲ್ಲಿ ಅಡಗಿರುವ ಮಹತ್ವದ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಅತಿಥಿಗಳಾಗಿ ಬಲ್ಯಮುಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಟ್ರಂಗಡ ಪ್ರಕಾಶ್, ಈಟಿವಿಯ ಬೆಂಗಳೂರು ಸಿಟಿ ಬ್ಯೂರೋ ಚೀಫ್, ಮಾಚಿಮಾಡ ಸೋಮಣ್ಣ, ಪತ್ರಕರ್ತ ರವಿ ಸುಬ್ಬಯ್ಯ, ಘಟಕದ ಯೋಜನಾಧಿಕಾರಿ ಎನ್.ಪಿ. ರೀತಾ ಉಪಸ್ಥಿತರಿದ್ದರು.
ಕಾವೇರಿ ಕಾಲೇಜು ವ್ಯಿದ್ಯಾರ್ಥಿ ತಂಡಗಳಿಂದ ರಾತ್ರಿ ಕೊಡವ ಆಟ್ ಪಾಟ್ ಕಾರ್ಯಕ್ರಮ ಜರುಗಿತು.
ಕಾವೇರಿ ಕಾಲೇಜಿನ ಎನ್ ಎಸ್ ಎಸ್. ಘಟಕದ ಯೋಜನಾಧಿಕಾರಿ ಎಂ.ಎನ್. ವನೀತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.