ಒಡೆಯನಪುರ, ಜ. 6: ಪ್ರತಿಯೊಬ್ಬ ವ್ಯಕ್ತಿಯಲ್ಲಿ ಸೇವಾ ಮನೋಭಾವನೆಯ ಸಾರ್ಥಕತೆ ಇದ್ದರೆ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಲು ಸಾಧ್ಯವಾಗುತ್ತದೆ ಎಂದು ಶಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ ಅಭಿಪ್ರಾಯ ಪಟ್ಟರು. ಸಮೀಪದ ಮೂದರಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರಸಂತೆ ಭಾರತಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಹಮ್ಮಿಕೊಂಡಿರುವ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ವಿದ್ಯಾರ್ಥಿ ದಿಸೆಯಲ್ಲಿರುವಾಗಲೇ ಸೇವಾ ಮನೋಭಾವನೆ, ಏಕಾಗ್ರತೆ, ಸಂಯಮ, ಸ್ವಚ್ಛತೆಯ ಬಗ್ಗೆ ಕಳಕಳಿ ಮುಂತಾದ ಮೌಲ್ಯಗಳನ್ನು ಅಳವಡಿಸಿಕೊಂಡರೆ ಭವಿಷ್ಯದಲ್ಲಿ ಯುವ ಸಮುದಾಯದಿಂದ ಸಮಾಜ ಮತ್ತು ದೇಶ ಉನ್ನತ್ತಿ ಹೊಂದುತ್ತದೆ ಎಂದರು.

ತಾ.ಪಂ. ಸದಸ್ಯ ಕುಶಾಲಪ್ಪ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಮತ್ತು ಯುವ ಜನಾಂಗದಲ್ಲಿ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳು ಕಡಿಮೆಯಾಗಿ ಪೋಷಕರಿಗೆ, ಗುರು-ಹಿರಿಯರಿಗೆ ಗೌರವ ಕೊಡುವಂತ ಸಂಪ್ರದಾಯಗಳು ಕಡಿಮೆಯಾಗುತ್ತಿದೆ. ಇದರಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ಕದಡುತ್ತಿದೆ.

ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಎನ್.ಎಸ್.ಎಸ್. ಶಿಬಿರದಲ್ಲಿ ಪಾಲ್ಗೊಂಡರೆ ಹಲವಾರು ಮೌಲ್ಯಗಳನ್ನು ಕಲಿತುಕೊಳ್ಳಬಹುದು ಎಂದರು.

ಕಾಲೇಜು ಪ್ರಾಂಶುಪಾಲ ಎಸ್.ಎಂ. ಉಮಾಶಂಕರ್ ಮಾತನಾಡಿ, ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಶ್ರಮಕ್ಕೆ ರಾಷ್ಟ್ರೀಯ ಸೇವಾ ಶಿಬಿರ ಉತ್ತಮ ವೇದಿಕೆಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಜಗನ್‍ಪಾಲ್, ಶಾಲಾ ಮುಖ್ಯ ಶಿಕ್ಷಕಿ ಮಮತ, ಹಂಡ್ಲಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಚಂದ್ರಶೇಖರ್, ಹಿರಿಯ ಉಪನ್ಯಾಸಕ ದಯಾನಂದ್, ಶಿಬಿರಾಧಿಕಾರಿ ಹೆಚ್.ಎಂ. ವಿವೇಕ್, ಎಂ.ಎನ್. ಹರೀಶ್, ವಿನೀಶ್ ಮುಂತಾದವರಿದ್ದರು.

- ವಿ.ಸಿ. ಸುರೇಶ್ ಒಡೆಯನಪುರ