ಮಡಿಕೇರಿ, ಜೂ. 16: ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಏರಿಯಾ ಸ್ಕೀಂಗೆ ವಿರೋಧ ವ್ಯಕ್ತವಾಗಿದ್ದು, ನಿಯಮವನ್ನು ಜಾರಿಗೆ ತಾರದಂತೆ ಖಾಸಗಿ ಬಸ್ ಮಾಲೀಕರ ಸಂಘ ಒತ್ತಾಯಿಸಿದೆ. ಬೆಂಗಳೂರಿನಲ್ಲಿ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಪಾಲ್ಗೊಂಡು ನಿಯಮಕ್ಕೆ ವಿರೋಧ ವ್ಯಕ್ತಪಡಿಸಿದರು.

ಏರಿಯಾ ಸ್ಕೀಂ ಜಾರಿಯಾದಲ್ಲಿ ಖಾಸಗಿ ಬಸ್ ಸಂಚಾರಕ್ಕೆ ತೊಡಕಾಗಲಿದೆ. ಪ್ರಸ್ತುತ ಇರುವ ರಹದಾರಿಗಳು ಕೂಡ ರದ್ದಾಗಲಿವೆ ಎಂದು ಸಂಘದ ಪ್ರಮುಖರು ಆತಂಕ ವ್ಯಕ್ತಪಡಿಸಿದರು. ಇದು ಖಾಸಗಿ ಬಸ್ ಸಂಚಾರವನ್ನೇ ರದ್ದು ಪಡಿಸುವ ನಿಯಮವಾಗಿದೆ ಎಂದು ಸಂಘದ ಪದಾಧಿಕಾರಿಗಳು ಆರೋಪಿಸಿದರು. ಈ ನಿಯಮಕ್ಕೆ ವಿರೋಧ ವ್ಯಕ್ತಪಡಿಸುವ ನಿಟ್ಟಿನಲ್ಲಿ ತಾ. 28 ರಂದು ರಾಜ್ಯಾದ್ಯಂತ ಖಾಸಗಿ ಬಸ್ ಸಂಚಾರವನ್ನು ಸ್ಥಗಿತ ಮಾಡುವ ಮೂಲಕ ಪ್ರತಿಭಟಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಅಲ್ಲದೆ ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ನಿರ್ಧರಿಸಲಾಯಿತು. ಏರಿಯಾ ಸ್ಕೀಂ ಕುರಿತಂತೆ ರಾಜ್ಯ ಸರ್ಕಾರ ತಾ. 10 ರಂದು ಅಧಿಸೂಚನೆ ಹೊರಡಿಸಿತ್ತು.