ಮಡಿಕೇರಿ, ನ. 14 : ಸೋಮವಾರಪೇಟೆ ತಾಲೂಕಿನ ಐಗೂರಿನ ಮಸೀದಿಯಲ್ಲಿ ಪವಿತ್ರ ಕುರಾನ್ ಗ್ರಂಥಕ್ಕೆ ಬೆಂಕಿ ಹಚ್ಚಿದ ಪ್ರಕರಣವನ್ನು ಖಂಡಿಸಿರುವ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಆರೋಪಿಗಳ ಬಂಧನಕ್ಕೆ ಹತ್ತು ದಿನಗಳ ಗಡುವು ನೀಡಿದೆ.
ನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರಿಗೆ ಮನವಿ ಸಲ್ಲಿಸಿದ ನಗರ ಸಮಿತಿ ಅಧ್ಯಕ್ಷ ಕೆ.ಯು.ಅಬ್ದುಲ್ ರಜಾóಕ್ ಹಾಗೂ ಪ್ರಮುಖರು ಪವಿತ್ರ ಕುರಾನ್ ಗ್ರಂಥಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ತಾ. 10 ರಂದು ಪೊಲೀಸ್ ಇಲಾಖೆಯ ಕರ್ತವ್ಯ ಪ್ರಜ್ಞೆಯಿಂದಾಗಿ ಟಿಪ್ಪು ಜಯಂತಿ ಆಚರಣೆ ಶಾಂತಿಯುತವಾಗಿ ನಡೆಯುವ ಮೂಲಕ ಕೋಮು ಸೌಹಾರ್ದತೆಗೆ ಜಿಲ್ಲೆ ಮಾದರಿಯಾಯಿತು. ಆದರೆ ಇದನ್ನು ಸಹಿಸದ ಕೆಲವು ಕಿಡಿಗೇಡಿಗಳು ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಲೇಬೇಕೆನ್ನುವ ಉದ್ದೇಶದಿಂದ ಪವಿತ್ರ ಖುರಾನ್‍ಗೆ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿದ ಅಬ್ದುಲ್ ರಜಾóಕ್ ಆರೋಪಿಗಳನ್ನು ಮುಂದಿನ ಹತ್ತು ದಿನಗಳ ಒಳಗೆ ಬಂಧಿಸದಿದ್ದಲ್ಲಿ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ಎಚ್ಚರಿಕೆ ನೀಡಿದರು. ಪೊಲೀಸರ ತನಿಖೆಗೆ ಎಲ್ಲರೂ ಸಹಕಾರ ನೀಡಬೇಕೆಂದು ಇದೇ ಸಂದರ್ಭ ಮನವಿ ಮಾಡಿಕೊಂಡ ಅವರು ಜಿಲ್ಲೆಯ ಜನತೆ ವದಂತಿಗಳಿಗೆ ಕಿವಿಗೊಡದೆ ಶಾಂತಿಯನ್ನು ಕಾಯ್ದುಕೊಳ್ಳಬೇಕೆಂದು ತಿಳಿಸಿದರು.
ಮನವಿ ಸಂದರ್ಭ ನಗರ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಟಿ.ಪಿ.ನಾಣಯ್ಯ, ಪ್ರಧಾನ ಕಾರ್ಯದರ್ಶಿ ಎಂ.ಎ.ಮುನೀರ್ ಮಚ್ಚಾರ್, ಅಲ್ಪಸಂಖ್ಯಾತರ ಘಟಕದ ಮಡಿಕೇರಿ ಬ್ಲಾಕ್ ಅಧ್ಯಕ್ಷ ಕೆ.ಇ.ಮ್ಯಾಥ್ಯು, ನಗರಸಭಾ ಸದಸ್ಯ ಟಿ.ಹೆಚ್.ಉದಯಕುಮಾರ್ ಮತ್ತಿತರರು ಹಾಜರಿದ್ದರು.