ಮಡಿಕೇರಿ, ನ. 16: ಆ ಮಕ್ಕಳನ್ನು ನೋಡುತ್ತಿದ್ದರೆ ನೋಡುತ್ತಲೇ ಇರಬೇಕು ಎನಿಸುವಷ್ಟು ಆಕರ್ಷಣೆ. ಆ ಮಕ್ಕಳು ನರ್ತಿಸುತ್ತಿದ್ದರೆ ನೋಡುವ ಕಣ್ಣುಗಳಿಗೆ ಹಬ್ಬ! ಭಿನ್ನ ಭಿನ್ನ ವೇಷ ಭೂಷಣದೊಂದಿಗೆ ಭಿನ್ನ ಮಕ್ಕಳು ಪ್ರಸ್ತುತ ಪಡಿಸಿದ ಸಾಂಸ್ಕøತಿಕ ಕಾರ್ಯಕ್ರಮಗಳು ನೆರೆದಿದ್ದವರ ಮನಸೂರೆಗೊಂಡವು. ಓಂಕಾರ ಸದನದಲ್ಲಿಂದು ಕೊಡಗು ವಿದ್ಯಾಲಯ ಆಪರ್ಚುನಿಟಿ ಶಾಲೆಯ ವಿಶೇಷ ಅಗತ್ಯತೆಯುಳ್ಳ ಮಕ್ಕಳ ಶಾಲಾ ವಾರ್ಷಿಕೋತ್ಸವದಲ್ಲಿ ಅಲ್ಲಿನ ಮಕ್ಕಳಿಂದ ಮೂಡಿಬಂದ ಸಾಂಸ್ಕøತಿಕ ಕಾರ್ಯಕ್ರಮ ನೋಡುಗರ ಮನಸ್ಸಿಗೆ ಮುದ ನೀಡಿದವು. ವಿವಿಧೆಡೆಯ ಸಂಸ್ಕøತಿ, ಆಚಾರ - ವಿಚಾರವನ್ನು ಬಿಂಬಿಸುವ ಉಡುಗೆ ತೊಟ್ಟು ವೇದಿಕೆಗೆ ಆಗಮಿಸಿ ಗಮನ ಸೆಳೆದ ಮಕ್ಕಳು ‘ಬಲ್ಲೆ ಬಲ್ಲೆ' ಎಂಬ ಪಂಜಾಬಿ ಹಾಡಿಗೆ ಪಂಜಾಬಿ ಶೈಲಿಯ ಉಡುಗೆ ತೊಟ್ಟು ಕುಣಿದು ಕುಪ್ಪಳಿಸಿದರು. ‘ಟುಕುರ್ ಟುಕುರ್' ಎಂಬ ಹಾಡಿಗೆ ಹೆಜ್ಜೆ ಹಾಕಿದ ಪುಟಾಣಿಗಳು ‘ಸಾಧಿಸಿ ತೋರಿಸುವ ನಾವು ಒಂದು ದಿನ; ಪ್ರೀತಿ ವಿಶ್ವಾಸ ತುಂಬಿದೆ ಮನದಲ್ಲಿ ಎಂಬ ಗೀತೆ ಹಾಡಿ ನೋಡುಗರ ಹೃದಯಗಳನ್ನು ಕದ್ದರು. ಪ್ರಸ್ತುತ ಸಮಾಜದಲ್ಲಿ ಮೊಬೈಲ್ ಫೋನ್ ಮೇಲಿನ ಅತಿಯಾದ ವ್ಯಾಮೋಹ ತಂದೊಡ್ಡುವ ಫಜೀತಿಗಳನ್ನು ರೂಪಕದ ಮೂಲಕ ತೆರೆದಿಟ್ಟ ಮಕ್ಕಳು ಮೊಬೈಲ್‍ಗಿಂತ ಮಾನವೀಯತೆ ಮುಖ್ಯ ಎಂಬದನ್ನು ಸಾರಿದರು. ತಮ್ಮ ಪ್ರತಿಭೆಯನ್ನು ಕಂಡು ನೋಡುಗರು ಚಪ್ಪಾಳೆ ತಟ್ಟುತ್ತಿದ್ದಾರೆ ಎಂಬ ಅರಿವಿಲ್ಲದೆ ನೋಡುಗ ರೊಂದಿಗೆ ಸೇರಿಕೊಂಡು ತಾವೂ ಕೂಡ ಚಪ್ಪಾಳೆ ತಟ್ಟುವ ಮೂಲಕ ಆ ಮಕ್ಕಳು ತಮ್ಮಲ್ಲಿರುವ ಮುಗ್ಧತೆ ಯನ್ನು ಸಾಕ್ಷೀಕರಿಸಿದರು. ಪರಿಸರ ಕಾಳಜಿಯನ್ನು ವ್ಯಕ್ತಪಡಿಸಿದ ಮಕ್ಕಳು ಸುಮಾರು ಮುಕ್ಕಾಲು ತಾಸು ಸಭಾಂಗಣದಲ್ಲಿ ನೆರೆದಿದ್ದ ವರನ್ನು ಮಂತ್ರ ಮುಗ್ಧರನ್ನಾಗಿಸಿದರು.
ಜಿಲ್ಲಾಧಿಕಾರಿ ಪ್ರಶಂಸೆ: ಮಕ್ಕಳ ಸಾಂಸ್ಕøತಿಕ ಚಟುವಟಿಕೆ ಗಳನ್ನು ಗಮನಿಸಿದ ಕಾರ್ಯಕ್ರಮದ ಮುಖ್ಯ ಅತಿಥಿ ಜಿಲ್ಲಾಧಿಕಾರಿ ಡಾ. ಆರ್.ವಿ. ಡಿಸೋಜ ಅವರು ಈ ಮಕ್ಕಳು ತಾವು ಯಾರಿಗೂ ಕಮ್ಮಿಯಿಲ್ಲ ಎಂಬದನ್ನು ತಮ್ಮ ಕಲಾ ಪ್ರತಿಭೆ ಮೂಲಕ ಸಾಬೀತು ಮಾಡಿದ್ದಾರೆ. ಇಂತಹ ಮಕ್ಕಳನ್ನು ಸಾಕಿ ಬೆಳೆಸುವ ಪೋಷಕರು - ಶಿಕ್ಷಕರ ಸೇವೆ ನಿಜಕ್ಕೂ ಶ್ಲಾಘನಾರ್ಹ. ಕೊಡಗು ಜಿಲ್ಲೆ ಕರ್ನಾಟಕ ರಾಜ್ಯದ ಅತ್ಯುತ್ತಮ ಜಿಲ್ಲೆ. ಇಲ್ಲಿನ ಜನರು ನಿಜಕ್ಕೂ ಅಭಿನಂದನಾರ್ಹರು. ಶಿಕ್ಷಣಕ್ಕೆ ಇಲ್ಲಿ ಹೆಚ್ಚಿನ ಆದ್ಯತೆಯಿದೆ. ಆದರೂ ಕೆಲವು ಕಡೆ ಮಕ್ಕಳು ತೋಟ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಅಂತಹ ಮಕ್ಕಳ ಬಗ್ಗೆ ಮಾಹಿತಿ ದೊರೆತರೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದಲ್ಲಿ ಅಂತಹ ಮಕ್ಕಳಿಗೆ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವದಾಗಿ ಜಿಲ್ಲಾಧಿಕಾರಿ ಭರವಸೆಯಿತ್ತರು.
ಈ ಸಂದರ್ಭ ಶಾಲೆಯ ಪ್ರಾಂಶುಪಾಲೆ ಮೀನಾ ಕಾರ್ಯಪ್ಪ, ಪ್ರಮುಖರಾದ ಕೆ.ಪಿ. ಉತ್ತಪ್ಪ, ಶಿಕ್ಷಕವೃಂದ, ಪೋಷಕರು ಇದ್ದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ತೆರೆಕಂಡಿತು.
-ಉಜ್ವಲ್ ರಂಜಿತ್.