ವೀರಾಜಪೇಟೆ, ನ. 25: ಕೇಂದ್ರ ಹಾಗೂ ರಾಜ್ಯದಲ್ಲಿ ಯಾವದೇ ಸರಕಾರದ ಆಡಳಿತವಿದ್ದರೂ ಚೆÀನ್ನಂಗಿ ಕೆಸುವಿನಕೆರೆ ಹಾಡಿ ಜನರು ಕನಿಷ್ಟ ಮೂಲ ಸೌಲಭ್ಯಗಳಿಂದ ವಂಚಿತರಾಗಿಯೇ ಇದ್ದಾರೆ. ಕುಗ್ರಾಮದ ಹಾಡಿ ಎಂಬದಕ್ಕೆ ಹೆಸರಾಗಿರುವ ಕೆಸುವಿನಕೆರೆ ಹಾಡಿಗೆ ವಿದ್ಯುತ್, ಕುಡಿಯುವ ನೀರು, ರಸ್ತೆ ಸೌಲಭ್ಯವಿಲ್ಲ. ಚೆನ್ನನಕೋಟೆ ಗ್ರಾಮ ಪಂಚಾಯಿತಿ ಮಾತ್ರ ಹಾಡಿಯ ಜನರಿಂದ ಕಂದಾಯವನ್ನು ವಿಳಂಬವಿಲ್ಲದೆ ವಸೂಲಿ ಮಾಡುತ್ತಿದೆ ಎಂದು ಹಾಡಿಯ ಮುಖ್ಯಸ್ಥ ಪಿ.ಕೆ. ಮಲ್ಲ ಆರೋಪಿಸಿದರು.

ಸುಮಾರು 25 ರಿಂದ 30 ಕುಟುಂಬಗಳು ವಾಸಿಸುವ ಕೆಸುವಿನಕೆರೆ ಹಾಡಿಯಲ್ಲಿ 180ಕ್ಕೂ ಮೇಲ್ಪಟ್ಟು ಜನಸಂಖ್ಯೆ ಇದ್ದು, ಮಕ್ಕಳು ಶಾಲೆಗೆ ತೆರಳಬೇಕಾದರೆ ಕಿಷ್ಕಿಂದೆÉಯ ಮಣ್ಣಿನ ರಸ್ತೆಯಲ್ಲಿಯೇ ನಡೆದು ಹೋಗಬೇಕಾಗಿದೆ. ಇಂದಿನ ಆಧುನಿಕತೆಯಲ್ಲಿ ಈ ಹಾಡಿಗೆ ವಿದ್ಯುತ್ ಸೌಲಭ್ಯ ಇಲ್ಲ. ಕತ್ತಲೆಯಲ್ಲಿ ಸೀಮೆಎಣ್ಣೆ ದೀಪದಲ್ಲಿಯೇ ಜೀವನ ಸಾಗಿಸಬೇಕಾಗಿದ ದುಸ್ಥಿತಿ ಒದಗಿದೆ. ಚೆನ್ನನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಹಾಡಿಯ ಈ ವಿಭಾಗದ ಜನ ಪ್ರತಿನಿಧಿಗಳು, ಶಾಸಕರು ಎರಡೂವರೆ ವರ್ಷಗಳ ಹಿಂದೆಯೇ ಭೇಟಿ ನೀಡಿದಾಗ ಹಾಡಿಯ ಕನಿಷ್ಟ ಸೌಲಭ್ಯಗಳ ಕುರಿತು ಬೇಡಿಕೆ ಸಲ್ಲಿಸಿದರೂ ಈ ತನಕ ಯಾವದೇ ಪ್ರಯೋಜನವಾಗಿಲ್ಲ. ಹಾಡಿಯ ಜನರು ಸ್ವಾತಂತ್ರ್ಯ ಪೂರ್ವದಲ್ಲಿದ್ದಂತಹ ಜೀವನ ನಡೆಸುತ್ತಿದ್ದಾರೆ ಎಂದು ಅತೀವ ಬೇಸರದಿಂದ ಮಲ್ಲ ಹಾಡಿಗೆ ಭೇಟಿ ನೀಡಿದ ಜೆ.ಡಿ.ಎಸ್. ಕಾರ್ಯ ಕರ್ತರೊಂದಿಗೆ ಆರೋಪಿಸಿದರು.

ಜೆಡಿಎಸ್ ಕಾರ್ಯಕರ್ತರ ಸ್ಪಂದನೆ

ಜಾತ್ಯತೀತ ಜನತಾದಳದ ಜಿಲ್ಲಾ ಸಮಿತಿಯ ಅಧ್ಯಕ್ಷ ಮೇರಿಯಂಡ ಸಂಕೇತ್‍ಪೂವಯ್ಯ ನೇತೃತ್ವದಲ್ಲಿ ಕಾರ್ಯಕರ್ತರು ಕೆಸುವಿನಕೆರೆ ಹಾಡಿಯ ನಿವಾಸಿಗಳನ್ನು ಭೇಟಿ ಮಾಡಿ ಸ್ಪಂದಿಸುವ ಭರವಸೆ ನೀಡಿದರು.

ಈ ಸಂದರ್ಭ ಸಂಕೇತ್ ಪೂವಯ್ಯ ಮಾತನಾಡಿ, ಕೆಸುವಿನಕೆರೆ ಹಾಡಿಯ ಜನರು ಸರಕಾರದ ಕನಿಷ್ಟ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವದು ಕಂಡುಬಂದಿದೆ. ದೇಶಕ್ಕೆ ಸ್ವಾತಂತ್ರ್ಯ ದೊರೆತು 70 ವರ್ಷಗಳು ಕಳೆದರೂ ಕುಗ್ರಾಮದ ಹಾಡಿಗೆ ವಿದ್ಯುತ್ ಸೇರಿದಂತೆ ಯಾವದೇ ಸೌಲಭ್ಯ ದೊರೆತಿಲ್ಲ ಎನ್ನುವದು ದುರದೃಷ್ಟಕರ. ರಾಜ್ಯದ ಜನತೆ ಸರಕಾರದ ಬದಲಾವಣೆಯನ್ನು ಬಯಸಿದ್ದಾರೆ. ಜೆಡಿಎಸ್ ಪಕ್ಷದ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯವನ್ನು ನೆನಪಿಸಿಕೊಂಡು ಮುಂದೆ ಬದಲಾದ ಪರಿಸ್ಥಿತಿಯಲ್ಲಿ ಗ್ರಾಮ ವಾಸ್ತವ್ಯ ಮುಂದುವರೆದು ಎಲ್ಲಾ ಮೂಲ ಸೌಲಭ್ಯಗಳೊಂದಿಗೆ ಕೆಸುವಿನಕೆರೆ ಹಾಡಿ ಅಭಿವೃದ್ಧಿಯನ್ನು ಕಾಣಲಿದೆ ಎಂದರು.

ಪಕ್ಷದ ಚೆನ್ನನಕೋಟೆ ವಲಯದ ಮುಖಂಡ ವಿ.ಸಿ. ದೇವರಾಜ್ ಮಾತನಾಡಿ, ಸೌಲಭ್ಯ ವಂಚಿತ ಕೆಸುವಿನಕೆರೆ ಹಾಡಿ ಪರಿಸ್ಥಿತಿ ಶೋಚನೀಯವಾಗಿದೆ. ಹಾಡಿಯ ಮಕ್ಕಳ ವಿದ್ಯಾಭ್ಯಾಸಕ್ಕೂ ರಸ್ತೆ ಇಲ್ಲದೆ ಅಡಚಣೆಯಾಗಿದ್ದು ಹಾಡಿ ನಿವಾಸಿಗಳ ಮಕ್ಕಳು ಅವಿದ್ಯಾವಂತರಾಗಿ ಮುಂದುವರೆಯುವ ದುಸ್ಥಿತಿ ತಲೆದೋರಿದೆ ಎಂದು ವಿಷಾದಿಸಿದರು.

ಇದೇ ಸಂದರ್ಭ ಜೆಡಿಎಸ್ ಸ್ಥಳೀಯ ಮುಖಂಡರು ಹಾಗೂ ಹಾಡಿಯ ಮುಖಂಡ ಪಿ.ಕೆ. ಮಲ್ಲ ನೇತೃತ್ವದಲ್ಲಿ ಹಾಡಿಯ ಸುಮಾರು 114 ಮಂದಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಸಂದರ್ಭ ಪಿ.ಎಂ. ಮುಸ್ತಾಫ, ವಿ.ಎಂ. ದಿನೇಶ್, ವಿ.ಸಿ. ಡಾಲ, ವೈ.ಆರ್. ಸುರೇಶ್, ಪಿ.ಎ. ಮುಸ್ತಾಫÀ ವೀರಾಜಪೇಟೆ ಪಕ್ಷದ ಪ್ರಮುಖ ಕಾರ್ಯಕರ್ತರುಗಳಾದ ಎಸ್.ಎಚ್. ಮತೀನ್, ಆರ್.ಎ. ಸಕ್ಲೇನ್ ಹಾಜರಿದ್ದರು.