ಸೋಮವಾರಪೇಟೆ, ಜ. 16: ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಗಣರಾಜ್ಯೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ 7ನೇ ವರ್ಷದ ರಾಜ್ಯ ಮಟ್ಟದ ನೃತ್ಯೋತ್ಸವ, ಶಾಲಾ ಮಕ್ಕಳಿಗೆ ತಾಲೂಕು ಮಟ್ಟದ ನೃತ್ಯೋತ್ಸವ ಹಾಗೂ ಭ್ರಷ್ಟಾಚಾರ ಜಾಗೃತಿ ಸಮಾವೇಶ ಫೆ. 5 ರಂದು ನಡೆಯಲಿದೆ ಎಂದು ತಾಲೂಕು ಘಟಕದ ಅಧ್ಯಕ್ಷ ಕೆ.ಎನ್. ದೀಪಕ್ ಹೇಳಿದರು.

ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಫೆ. 5 ರಂದು ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿವೆ. ಶಾಲಾ ಮಕ್ಕಳ ವಿಭಾಗದಲ್ಲಿ 14 ವರ್ಷದೊಳಗಿನ ವಿದ್ಯಾರ್ಥಿಗಳು ಭಾಗವಹಿಸ ಬಹುದಾಗಿದೆ. ವಿಜೇತರಿಗೆ ಮೊದಲ ಬಹುಮಾನ ರೂ. 5 ಸಾವಿರ ನಗದು, ದ್ವಿತೀಯ ಬಹುಮಾನ ರೂ. 3 ಸಾವಿರ ಹಾಗೂ ತೃತೀಯ ರೂ. 2 ಸಾವಿರ ನಗದು ಹಾಗೂ ಮೂರು ವಿಭಾಗಗಳಿಗೂ ಆಕರ್ಷಕ ಟ್ರೋಫಿ ನೀಡಲಾಗುವದು ಎಂದರು.

14 ವರ್ಷದ ನಂತರದ ವಿಭಾಗದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸ್ಪರ್ಧಿಸುವ ಅವಕಾಶವಿರುತ್ತದೆ. ವಿಜೇತರಿಗೆ ಮೊದಲ ಬಹುಮಾನ ರೂ. 20 ಸಾವಿರ, ಎರಡನೇ ಬಹುಮಾನ ರೂ. 15 ಸಾವಿರ, ಮೂರನೇ ರೂ. 10 ಸಾವಿರ, ನಾಲ್ಕನೇ ರೂ. 5 ಸಾವಿರ ಹಾಗೂ ಐದನೇ ಬಹುಮಾನ ರೂ. 3 ಸಾವಿರ ಹಾಗೂ ಎಲ್ಲಾ ವಿಭಾಗಕ್ಕೂ ಆಕರ್ಷಕ ಟ್ರೋಫಿ ನೀಡಲಾಗುವದು ಎಂದರು.

ವಿದ್ಯಾರ್ಥಿಗಳ ವಿಭಾಗದಲ್ಲಿ ಒಂದು ಶಾಲೆಯಿಂದ ಒಂದು ತಂಡಕ್ಕೆ ಮಾತ್ರ ಅವಕಾಶವಿರುತ್ತದೆ. ಪ್ರತಿ ನೃತ್ಯಕ್ಕೆ 6 ನಿಮಿಷಗಳ ಕಾಲಾವಕಾಶವಿರುತ್ತದೆ. ಕನ್ನಡದ ಹಾಡುಗಳಿಗೆ ಮಾತ್ರ ನೃತ್ಯ ಮಾಡಲು ಅವಕಾಶವಿದ್ದು, ಒಂದು ತಂಡದಲ್ಲಿ 7 ರಿಂದ 12 ಮಂದಿ ನೃತ್ಯ ಮಾಡಬಹುದು. ಒಂದು ತಂಡದಲ್ಲಿ ಮಾತ್ರ ನೃತ್ಯ ಮಾಡುವ ಅವಕಾಶ. ಅಂದು ಮಧ್ಯಾಹ್ನ 1 ಗಂಟೆಗೆ ನೃತ್ಯ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದ್ದು, ಇದಕ್ಕೂ ಮೊದಲು ಸ್ಪರ್ಧಿಗಳು ತಮ್ಮ ತಂಡದ ಹೆಸರನ್ನು ನೋಂದಾಯಿಸಿ ಕೊಳ್ಳುವಂತೆ ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮೊ. 9008639659 ಅಥವಾ 9902232768 ಅನ್ನು ಸಂಪರ್ಕಿಸ ಬಹುದಾಗಿದೆ. ಗೋಷ್ಠಿಯಲ್ಲಿ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷ ರೂಪಾ ಸುರೇಶ್, ನಗರ ಘಟಕದ ಅಧ್ಯಕ್ಷ ಬಿ.ಎಸ್. ಮಂಜುನಾಥ್, ತಾಲೂಕು ಸಾಹಿತ್ಯ ಘಟಕದ ಅಧ್ಯಕ್ಷ ಕೆ.ಪಿ. ಸುದರ್ಶನ್ ಹಾಗೂ ನಗರ ಉಪಾಧ್ಯಕ್ಷ ಮನು ಮಂದಣ್ಣ ಉಪಸ್ಥಿತರಿದ್ದರು.