ಕರಿಕೆ, ಜೂ. 25 : ಜಿಲ್ಲಾ ಮತ್ತು ತಾಲೂಕು ಕೇಂದ್ರದಿಂದ ಸುಮಾರು 70 ಕಿ.ಮೀ. ದೂರವಿರುವ ಗಡಿಭಾಗದ ಕರಿಕೆ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ವಿಶೇಷ ಪ್ರಯತ್ನ ಮಾಡಲಾಗುವದು ಎಂದು ಶಾಸಕ ಕೆ.ಜಿ. ಬೋಪಯ್ಯ ಭರವಸೆಯಿತ್ತರು.

ಜಿಲ್ಲೆಯ ಕರಿಕೆ ಗ್ರಾ. ಪಂ. ಕಚೇರಿ ಸಭಾಂಗಣದಲ್ಲಿ ಶನಿವಾರ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಸಾರ್ವಜನಿಕರು, ಆರೋಗ್ಯ ಇಲಾಖೆ ಅಧಿಕಾರಿಗಳಿಂದ, ವೈದ್ಯಕೀಯ ಕಾಲೇಜು ನಿರ್ದೇಶಕರು ಮತ್ತಿತರರಿಂದ ಡೆಂಗಿ ನಿಯಂತ್ರಣ ಸಂಬಂಧಿಸಿದಂತೆ ಮಾಹಿತಿ ಪಡೆದು ಅವರು ಮಾತನಾಡಿದರು. ಕರಿಕೆ ಸೇರಿದಂತೆ ಪೆರಾಜೆ, ಸಂಪಾಜೆ, ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಡೆಂಗಿ, ಚಿಕೂನ್ ಗುನ್ಯಾ ವರದಿಗಳು ಕೇಳಿ ಬರುತ್ತಿವೆ. ಈ ಸಂಬಂಧ ಮುನ್ನೆಚ್ಚರಿಕೆ ವಹಿಸುವದು ಅಗತ್ಯ. ಆ ನಿಟ್ಟಿನಲ್ಲಿ ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.

ಮಳೆಗಾಲದ ಅವಧಿಯಲ್ಲಿ ತಾತ್ಕಾಲಿಕವಾಗಿ ಪ್ರತಿ ದಿನ ಆಂಬ್ಯುಲೆನ್ಸ್ ಸೌಲಭ್ಯ ದೊರೆಯಲಿದೆ. ಜೊತೆಗೆ ವೈದ್ಯರು ಪ್ರತಿ ದಿನ ಕರಿಕೆ ಗ್ರಾಮಕ್ಕೆ ಭೇಟಿ ನೀಡಲಿದ್ದು, ಆರೋಗ್ಯಕ್ಕೆ ಸಂಬಂಧಿಸಿದಂತೆ ಚಿಕಿತ್ಸಾ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಆ ನಿಟ್ಟಿನಲ್ಲಿ ವೈದ್ಯಕೀಯ ಕಾಲೇಜು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕೈಜೋಡಿಸಲಿದ್ದಾರೆ ಎಂದು ಅವರು ಹೇಳಿದರು. ಮಡಿಕೇರಿಯಲ್ಲಿ ವೈದ್ಯಕೀಯ ಕಾಲೇಜು ಆರಂಭವಾಗುತ್ತಿರುವದರಿಂದ ಎಲ್ಲಾ ರೀತಿಯ ಆರೋಗ್ಯ ಸೌಲಭ್ಯಗಳು ಲಭ್ಯವಾಗಲಿವೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಚಿಕಿತ್ಸಾ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಶಾಸಕರು ತಿಳಿಸಿದರು. ಕರಿಕೆ ಗ್ರಾಮದಲ್ಲಿ ಜೂನಿಯರ್ ಕಾಲೇಜು ಆರಂಭ ಸಂಬಂಧ ಮಾತನಾಡಿದ ಕೆ.ಜಿ.ಬೋಪಯ್ಯ ಅವರು ಅಟಲ್ ಬಿಹಾರಿ ವಾಜಪೇಯಿ ಆಂಗ್ಲ ಮಾದರಿ ವಸತಿ ಶಾಲೆಯು ಭಾಗಮಂಡಲದಲ್ಲಿ ಆರಂಭವಾಗಲಿದ್ದು, ಈಗಾಗಲೇ

(ಮೊದಲ ಪುಟದಿಂದ) ಈ ಸಂಬಂಧ 10 ಎಕರೆ ಜಾಗ ಗುರುತಿಸಲಾಗಿದೆ. ಪದವಿ ಪೂರ್ವ ಶಿಕ್ಷಣದವರೆಗೆ ಶಿಕ್ಷಣ ಪಡೆಯಬಹುದಾಗಿದ್ದು, ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಕೆ.ಜಿ. ಬೋಪಯ್ಯ ನುಡಿದರು.

ಕರಿಕೆ, ಚೆಂಬು, ಸಂಪಾಜೆ, ಪೆರಾಜೆ ಈ ಭಾಗದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಲೋನಿಗಳಲ್ಲಿ ಡೆಂಗಿ ನಿಯಂತ್ರಣ ಸಂಬಂಧ ವಿಶೇಷ ಗಮನಹರಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಲಹೆ ಮಾಡಿದರು. ಸಾರಿಗೆ ಸೌಲಭ್ಯ, ಬಸ್ ನಿಲ್ದಾಣ, ರಸ್ತೆ ಅಭಿವೃದ್ಧಿ, ಅತಿಥಿ ಗೃಹ ಮತ್ತಿತರ ಮೂಲ ಸೌಕರ್ಯ ಕಲ್ಪಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವದು. ಈ ಸಂಬಂಧ ಮುಂದಿನ ದಿನಗಳಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವದು. ಸದ್ಯ ಡೆಂಗಿ, ಚಿಕೂನ್ ಗುನ್ಯಾ ನಿಯಂತ್ರಣ ಬಗ್ಗೆ ಹೆಚ್ಚಿನ ಗಮನಹರಿಸುವಂತೆ ಅವರು ಸಲಹೆ ಮಾಡಿದರು.

ಎಂ.ಬಿ.ಬಿ.ಎಸ್ ಪದವಿ ಓದಿದ ಹಾಗೂ ಶುಶ್ರೂಷಕ ಪದವಿ ಮಾಡಿದ ಸ್ಥಳೀಯರು ಈ ಭಾಗದಲ್ಲಿ ಸೇವೆ ಮಾಡಲು ಮುಂದೆ ಬರುತ್ತಿಲ್ಲ. ಎಂ.ಬಿ.ಬಿ.ಎಸ್. ಮಾಡಿದ ವೈದ್ಯರಿಗೆ ಪ್ರಾರಂಭದಲ್ಲಿ 45 ಸಾವಿರ ರೂ. ನೀಡಿದರೂ ಸಹ ಗ್ರಾಮೀಣ ಸೇವೆಗೆ ಮುಂದೆ ಬರುತ್ತಿಲ್ಲ ಎಂದು ಕೆ.ಜಿ.ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಕರಿಕೆ, ಪೆರಾಜೆ, ಚೆಂಬು, ಸಂಪಾಜೆ ಮತ್ತಿತರ ಕಡೆಗಳಲ್ಲಿ ರಬ್ಬರ್ ತೋಟಗಳು ಹೆಚ್ಚಿರುವದರಿಂದ ಡೆಂಗಿ ಪ್ರಕರಣಗಳು ವರದಿಯಾಗುತ್ತಿವೆ. ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿ ಡೆಂಗಿ, ಚಿಕೂನ್ ಗುನ್ಯಾ ನಿಯಂತ್ರಣಕ್ಕೆ ವಿಶೇಷ ಗಮನ ಅಗತ್ಯ. ಆ ನಿಟ್ಟಿನಲ್ಲಿ ಸೊಳ್ಳೆ ಪರದೆ ಬಳಸುವದು, ನೀರು ಹರಿದು ಹೋಗುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಕುಗ್ರಾಮ ಕರಿಕೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲು ಶಾಸಕರೊಂದಿಗೆ ಪ್ರಯತ್ನಿಸಲಾಗುವದು ಎಂದು ತಿಳಿಸಿದರು.

ಮಡಿಕೇರಿ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ. ಮಹೇಂದ್ರ ಮಾತನಾಡಿ ಡೆಂಗಿ ನಿಯಂತ್ರಣ ಸಂಬಂಧಿಸಿದಂತೆ 7 ರಿಂದ 10 ದಿನದಲ್ಲಿ ತಡೆಯಬಹುದಾಗಿದೆ. ಸದ್ಯ ಸಮೀಕ್ಷೆ ಮಾಡಲಾಗಿರುವ ಮನೆಗಳಲ್ಲಿ ಶೇ.35ರಷ್ಟು ಲಾವಾ ಕಂಡುಬಂದಿದೆ. ಸಂಗ್ರಹಿಸಿರುವ ನೀರನ್ನು ವಾರಕ್ಕೊಮ್ಮೆಯಾದರೂ ಬದಲಾಯಿಸಬೇಕು. ನಿಂತಿರುವ ನೀರು ಹರಿದು ಹೋಗುವಂತೆ ಮಾಡಬೇಕು. ಟೈರ್, ತೆಂಗಿನ ಚಿಪ್ಪುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಮಡಿಕೇರಿ ತಾಲೂಕು ವೈದ್ಯಾಧಿಕಾರಿ ಡಾ. ರವಿಕುಮಾರ್ ಮಾತನಾಡಿ ಡೆಂಗಿ ಸಂಬಂಧಿಸಿದಂತೆ ಎರಡು ಪಾಸಿಟಿವ್ ಕಂಡುಬಂದಿದೆ. ಮಡಿಕೇರಿ ತಾಲೂಕಿನ ಏಳು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಇಲ್ಲ. ಕರಿಕೆ ವ್ಯಾಪ್ತಿಯಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್ ಮಾಡಲಾಗುತ್ತದೆ. ಜ್ವರ ಬಂದಾಗ ಪ್ರತಿಯೊಬ್ಬರೂ ವೈದ್ಯರ ಬಳಿ ತೆರಳಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಲಹೆ ಮಾಡಿದರು.

ಕರಿಕೆ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಕರಿಕೆ ಗ್ರಾಮ ಪಂಚಾಯಿತಿ ಸದಸ್ಯ ರಾಮನಾಥ ಅವರು ಕರಿಕೆ ಗ್ರಾಮದಲ್ಲಿ 60 ರಿಂದ 70 ಮಂದಿ ಡೆಂಗಿ ಬಾದಿತರು ಇದ್ದಾರೆ. ಡೆಂಗಿ ಜ್ವರದಿಂದ ಇಲ್ಲಿನ ಜನರು ಭಯ ಭೀತರಾಗಿದ್ದಾರೆ. ಹೆಚ್ಚಿನ ಆರೋಗ್ಯ ಸೌಲಭ್ಯ ಕಲ್ಪಿಸಬೇಕಿದೆ. ಕರಿಕೆ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಬೇಕಿದೆ. ಜೂನಿಯರ್ ಕಾಲೇಜು, ಬಸ್ ನಿಲ್ದಾಣ, ರಸ್ತೆ ಅಭಿವೃದ್ಧಿ, ಅತಿಥಿ ಗೃಹ ಮತ್ತಿತರ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕಿದೆ ಎಂದು ಮನವಿ ಮಾಡಿದರು.

ಹೊಸಮನೆ ಹರೀಶ್ ಮಾತನಾಡಿ ಕರಿಕೆ ಗ್ರಾಮಕ್ಕೆ ಸಮರ್ಪಕ ಸಂಚಾರ ವ್ಯವಸ್ಥೆ ಇಲ್ಲ. ವೈದ್ಯರು ಇಲ್ಲ. ನರ್ಸ್‍ಗಳು ಇಲ್ಲ, ಶುಶ್ರೂಷಕರು ಇಲ್ಲ. ಗ್ರಾಮದಲ್ಲಿ ಇಬ್ಬರು ಮರಣ ಹೊಂದಿರುವದರಿಂದ ಇಲ್ಲಿನ ಜನರ ಮನೋಬಲ ಕುಗ್ಗಿಸಿದೆ ಎಂದು ಅವಲತ್ತುಗೊಂಡರು. ಹೊಸಮನೆ ಚಂಗಪ್ಪ ಮಾತನಾಡಿ, ಕರಿಕೆ ಗ್ರಾಮಸ್ಥರು ಮೂಲ ಸೌಲಭ್ಯದಿಂದ ಬಹುದೂರ ಇದ್ದಾರೆ. ಇವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಮನವಿ ಮಾಡಿದರು. ಗ್ರಾಮದ ಸಿ.ಟಿ. ಐಸಾಕ್, ಜಯಂತ್ ಅವರು ಡೆಂಗಿ ಜ್ವರದಿಂದ ನರಳುತ್ತಿರುವ ಜನರ ಪರಿಸ್ಥಿತಿ ಬಗ್ಗೆ ಮಾತನಾಡಿದರು. ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಸದಸ್ಯೆ ಹೊಸಮನೆ ಕವಿತಾ ಪ್ರಭಾಕರ್, ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ತಾ.ಪಂ.ಸದಸ್ಯ ಸಂಧ್ಯಾ, ಗ್ರಾ.ಪಂ.ಅಧ್ಯಕ್ಷÀ ಬಾಲಚಂದ್ರ ನಾಯರ್, ಸದಸ್ಯರಾದ ಬಾಲಕೃಷ್ಣ, ಜಯಂತಿ, ಹರಿಪ್ರಸಾದ್ ಮತ್ತಿತರರು ಇದ್ದರು.

ಟಿ.ಪಿ. ರಮೇಶ್ ಭೇಟಿ : ಕಾಂಗ್ರೆಸ್ ಪ್ರಬಾರ ಅಧ್ಯಕ್ಷ ಟಿ.ಪಿ. ರಮೇಶ್ ಅವರು ಕರಿಕೆ ಗ್ರಾಮಕ್ಕೆ ಭೇಟಿ ನೀಡಿ ಮೃತಪಟ್ಟ ಕುಟುಂಬದವರಿಗೆ ಸಾಂತ್ವನ ಹೇಳಿದರು.

- ಸುಧೀರ್, ಸುನಿಲ್.