ಮಡಿಕೇರಿ, ಸೆ. 20: ವಿದ್ಯಾರ್ಥಿಗಳು ತಮ್ಮ ಕಲಿಕೆ ಹಾಗೂ ಪ್ರತಿಭೆಯೊಂದಿಗೆ ಸಿಗುವ ಸೂಕ್ತ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಟಿ. ಸ್ವಾಮಿ ಹೇಳಿದರು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ಕಲೆ, ಸಾಂಸ್ಕøತಿಕ ಮತ್ತು ಕ್ರೀಡಾ ಚಟುವಟಿಕೆ ಹಾಗೂ ಇಕೋ-ಕ್ಲಬ್ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪಠ್ಯ ಅಭ್ಯಾಸದೊಂದಿಗೆ ತಮ್ಮನ್ನು ಕಲೆ, ಸಾಂಸ್ಕøತಿಕ ಹಾಗೂ ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜದಲ್ಲಿ ಉತ್ತಮ ಸಾಧನೆ ಹೊಂದಬೇಕು ಎಂದರು.

ಗಿಡ ನೆಡುವ ಮೂಲಕ ಇಕೋ-ಕ್ಲಬ್ ಚಟುವಟಿಕೆಗಳಿಗೆ ಚಾಲನೆ ನೀಡಿದ ಪರಿಸರ ಜಾಗೃತಿ ಆಂದೋಲನದ ಸಂಚಾಲಕ, ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ಪ್ರತಿಯೊಬ್ಬರೂ ತಮ್ಮನ್ನು ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎ.ಪಿ. ಧನಂಜಯ ಮಾತನಾಡಿ, ವಿದ್ಯಾರ್ಥಿ ಸಮುದಾಯ ಸ್ವಚ್ಛ ಭಾರತ ಯೋಜನೆಯಡಿ ದೇಶದಲ್ಲಿ ನಡೆಯುತ್ತಿರುವ ಸ್ವಚ್ಛತಾ ಆಂದೋಲನವನ್ನು ಮುನ್ನಡೆಸುವ ಮೂಲಕ ಜನರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಬಿ.ಎಂ. ಬೆಳ್ಳಿಯಪ್ಪ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಸಂಘಗಳ ಚಟುವಟಿಕೆಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದರು. ಇಕೋ ಕ್ಲಬ್‍ನ ಸಂಯೋಜಕ ಉಪನ್ಯಾಸಕ ಎನ್. ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ವಿದ್ಯಾರ್ಥಿ ನಾಯಕ ಪೊನ್ನಣ್ಣ, ವಿದ್ಯಾರ್ಥಿನಿ ನಾಯಕಿ ಹರ್ಷಿತ ಇದ್ದರು. ಕನ್ನಡ ಉಪನ್ಯಾಸಕ ಬಿ.ಜಿ.ನವೀಶ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಉಪನ್ಯಾಸಕ ಎಸ್. ನಂದೀಶ್ ಸಂಘದ ವಿದ್ಯಾರ್ಥಿ ನಾಯಕರಿಗೆ ಬ್ಯಾಡ್ಜ್ ವಿತರಿಸಿದರು. ಉಪನ್ಯಾಸಕ ಎಂ. ಮಹಾಂತೇಶ್ ಸ್ವಾಗತಿಸಿ, ಉಪನ್ಯಾಸಕ ಎನ್.ಎಸ್. ಚಿದಾನಂದ ವಂದಿಸಿದರೆ, ಉಪನ್ಯಾಸಕಿ ಬಿ.ಜಿ. ಶಾಂತಿ ನಿರ್ವಹಿಸಿದರು. ವಿದ್ಯಾರ್ಥಿಗಳು ಗೀತೆ ಗಾಯನ ನಡೆಸಿಕೊಟ್ಟರು.