ನಾಪೆÇೀಕ್ಲು, ಅ. 6: ಸಮೀಪದ ಎಮ್ಮೆಮಾಡು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಹೆಚ್ಚಿನ ಸೌಲಭ್ಯಕ್ಕಾಗಿ ಸರಕಾರದ ಮೂಲಕ ನಿರ್ಮಾಣಗೊಳ್ಳುತ್ತಿರುವ ನೂತನ ಶಾಲಾ ಕಟ್ಟಡದ ಗೋಡೆ ಕುಸಿದು ಬಿದ್ದಿದ್ದು, ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಮನೆಗೆ ತೆರಳಿರುವದರಿಂದ ಯಾವದೇ ಪ್ರಾಣಹಾನಿ ಸಂಭವಿಸದೆ ಪ್ರಕರಣ ಸುಖಾಂತ್ಯಗೊಂಡಿದೆ. ಆದರೆ ಈ ಗೋಡೆ ಕುಸಿದು ಬೀಳಲು ಕಳಪೆ ಕಾಮಗಾರಿಯೇ ಕಾರಣ ಎಂದು ಎಮ್ಮೆಮಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಆಲಿ, ಪ್ರೌಢಶಾಲಾ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬೂಬಕ್ಕರ್, ಪ್ರಾಥಮಿಕ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮುಸ್ತಫ, ಪೆÇೀಷಕರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ವಿವರ: ಶಾಲಾ ಮಕ್ಕಳ ಅನುಕೂಲಕ್ಕಾಗಿ ಸರಕಾರ ಆರು ಕೊಠಡಿಯ ಕಟ್ಟಡಕ್ಕೆ ಲಕ್ಷಾಂತರ ರೂ.ಗಳ (ಮೊತ್ತ ತಿಳಿದು ಬಂದಿಲ್ಲ) ಗುತ್ತಿಗೆಯನ್ನು (ಗುತ್ತಿಗೆದಾರರ ಹೆಸರು ತಿಳಿದು ಬಂದಿಲ್ಲ) ನೀಡಿತ್ತು. ಅದರಂತೆ ಮೊದಲು ಕಟ್ಟಡದ ಅಡಿಪಾಯದ ನಿರ್ಮಾಣ ಕೈಗೊಳ್ಳಲಾಗಿತ್ತು. ತದನಂತರ ಕಾಂಕ್ರೀಟ್ ಪಿಲ್ಲರ್‍ಗಳನ್ನು ನಿರ್ಮಿಸಿ ಪ್ರಸ್ತುತ ಅದರ ಮಧ್ಯೆ ಸಿಮೇಂಟ್ ಇಟ್ಟಿಗೆಗಳಿಂದ ಗೋಡೆ ನಿರ್ಮಾಣ ಕಾರ್ಯ ನಡೆಸಲಾಗುತಿತ್ತು. ಆದರೆ ಆಗಸ್ಟ್ 5ರ ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಈ ಗೋಡೆಗಳು ಕುಸಿದು ಬಿದ್ದಿರುವದಾಗಿ ಪ್ರತ್ಯಕ್ಷದರ್ಶಿಗಳು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. ಈ ಕಟ್ಟಡ ನಿರ್ಮಾಣದ ಹಂತದಿಂದಲೇ ಪೂರ್ತಿ ಕಳಪೆ ಕಾಮಗಾರಿಯಾಗಿದೆ. ಶಾಲಾ ಮಕ್ಕಳು ಮನೆಗೆ ತೆರಳಿದ ಸಂದರ್ಭದಲ್ಲಿ ಈ ಅನಾಹುತ ನಡೆದಿರುವದರಿಂದ ಯಾವದೇ ದುರ್ಘಟನೆ ಸಂಭವಿಸಲಿಲ್ಲ. ಏನಾದರೂ ಪ್ರಾಣಹಾನಿ ಸಂಭವಿಸಿದ್ದರೆ ಇದಕ್ಕೆ ಹೊಣೆಗಾರರು ಯಾರು? ಆದ್ದರಿಂದ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
-ಪಿ.ವಿ. ಪ್ರಭಾಕರ್