ಮಡಿಕೇರಿ, ಆ. 20: ಏರುತ್ತಿರುವ ಗೊಬ್ಬರ, ಪರಿಕರಗಳ ಬೆಲೆ, ಹೆಚ್ಚುತ್ತಿರುವ ಕೆಲಸಗಾರರ ವೇತನ ಹಾಗೂ ಕುಸಿಯುತ್ತಿರುವ ಕಾಫಿ ಮಾರಾಟ ಬೆಲೆಯಿಂದ ಬೆಳೆಗಾರ ಕವಲುದಾರಿಯಲ್ಲಿದ್ದಾನೆ ಎಂದು ಕೊಡಗು ಬೆಳೆಗಾರರ ಸಂಘದ ಅಧ್ಯಕ್ಷ ಪಿ.ಬಿ. ಚೆಂಗಪ್ಪ ಹೇಳಿದರು.

ಅವರು ಇಂದು ಸಂಘದ 137ನೇ ವಾರ್ಷಿಕೋತ್ಸವ ಸಭೆ ಉದ್ದೇಶಿಸಿ ಮಾತನಾಡುತ್ತಿದ್ದರು. ಬೆಲೆ ಕುಸಿತದೊಂದಿಗೆ ಬರ ಸನ್ನಿವೇಶವೂ ಬೆಳೆಗಾರ ಬಳಲುವಂತೆ ಮಾಡಿದ್ದು, ಬೆಲೆ ಏರಿಕೆಯಾಗದಿದ್ದರೆ ಬೆಳೆಗಾರರು ಅತ್ಯಂತ ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಲಿದ್ದಾರೆ ಎಂದು ಹೇಳಿದರು. ಈ ಬಾರಿ ಕಾಫಿ ಬೆಳೆ ಶೇಕಡ 25 ರಷ್ಟು ಕುಸಿಯಲಿದೆ ಎಂದು ವಿವರಿಸಿದರು.

ಹವಾಮಾನ ವೈಪರೀತ್ಯದಿಂದ ಕರಿಮೆಣಸು ಉತ್ಪಾದನೆಯೂ ಆತಂಕದ ಸ್ಥಿತಿಯಲ್ಲಿದ್ದು, ಇದಕ್ಕೆ ವೈಜ್ಞಾನಿಕ ಪರಿಹಾರ ಕಂಡುಹಿಡಿಯ ದಿದ್ದಲ್ಲಿ ಈ ಹಿಂದೆ ಕೇರಳ ರಾಜ್ಯದಲ್ಲಿ ಉಂಟಾದ ಭಾರೀ ನಷ್ಟ ಇಲ್ಲಿಯೂ ಮರುಕಳಿಸಲಿದೆ ಎಂದರು. ಇದರೊಂದಿಗೆ ಟೀ ಹಾಗೂ ರಬ್ಬರ್ ಬೆಳೆಯ ಸಂಕಷ್ಟಗಳನ್ನೂ ಇವರು ವಿವರಿಸಿದರು.

ಹಿಸ್ಸಾ ಸರ್ವೆ ಹಾಗೂ ಆರ್‍ಟಿಸಿ ಕೊರತೆ, ಆನೆ-ಮಾನವ ಸಂಘರ್ಷ ದಂತೆ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಕಂಡು ಹಿಡಿಯಬೇಕೆಂದು ಪಿ.ಬಿ. ಚೆಂಗಪ್ಪ ಮನವಿ ಮಾಡಿದರು.

ಕಾಫಿ ಬೋರ್ಡ್ ನಿಷ್ಕ್ರಿಯ

ಬೆಳೆಗಾರನ ಸಮಸ್ಯೆಗೆ ಕಾಫಿ ಬೋರ್ಡ್ ಈ ಹಿಂದಿನಿಂದಲೂ ನೇರವಾಗಿ ಸ್ಪಂದಿಸಲಿಲ್ಲ ಎಂದು ಅತಿಥಿಯಾಗಿ ಆಗಮಿಸಿದ್ದ ಪ್ರತಾಪ್ ಸಿಂಹ ಆಪಾದಿಸಿದರು. ಬಿಳಿಕಾಂಡ ಕೊರಕ ಹಾಗೂ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿದಿಲ್ಲ. ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿಸಿ ಬೆಳೆಗಾರರನ್ನು ಕತ್ತಲಲ್ಲಿಡುವ ಮಾಫಿಯಾ ಈ ಅಧಿಕಾರಿಗಳಿಂದ ನಡೆಯುತ್ತಿದ್ದು, ಕೇಂದ್ರ ಸರಕಾರ ಇದಕ್ಕೆ ಕಡಿವಾಣ ಹಾಕಲಾರಂಭಿಸಿದೆ ಎಂದು ಹೇಳಿದರು.

ರಬ್ಬರ್ ಅಂತರ್ರಾಷ್ಟ್ರೀಯ ಮಾರುಕಟ್ಟೆ ಕುಸಿಯುತ್ತಿದ್ದು, ಕೇಂದ್ರವು ಅದರ ಮೇಲಿನ ಸೆಸ್ ತೆಗೆದು ಹಾಕಲು ಚಿಂತಿಸುತ್ತಿದೆ ಎಂದು ಪ್ರತಾಪ್ ಸಿಂಹ ಹೇಳಿದರು. ಮಾರುಕಟ್ಟೆ ಮಾಫಿಯಾದಿಂದಾಗಿ ಇಂದು ಅಡಿಕೆಯನ್ನೇ ಬೆಳೆಯದೆ ಥೈಲಾಂಡ್ 4 ಪಟ್ಟು, ಬಾಂಗ್ಲಾ ಮೂರು ಪಟ್ಟು, ನೇಪಾಳ ಅಡಿಕೆ ರಫ್ತು ಮಾಡುತ್ತಿವೆ ಎಂದು ಹೇಳಿದರು.

ಕಾಫಿ ಬೆಳೆಗಾರರ ಸಮಸ್ಯೆ ತನಗೆ ಅರಿವಿದ್ದು, ಸಾಲ ಅಥವಾ ಬಡ್ಡಿ ಮನ್ನಾ ಮಾಡಲು ಯತ್ನಿಸುವದಾಗಿ ಭರವಸೆ ನೀಡಿದರು. ಆನೆ ಸಮಸ್ಯೆಗೆ ಉತ್ತರಿಸಿದ ಅವರು ಆನೆ ತಡೆಗೆ ಬೇಲಿ ಅಳವಡಿಸಲು 150 ಕೋಟಿಯ ಯೋಜನೆಯಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರ ಜಂಟಿಯಾಗಿ ಕಾರ್ಯಗತ ಮಾಡುವತ್ತ ಚರ್ಚಿಸಲಾಗುವದು ಎಂದರು.

ಹೆಸರಾಂತ ಪೆಪ್ಪರ್ ಬೆಳೆಗಾರ ಕೇಶವ ಕೆಂಜಿಗೆ ಯಶಸ್ವೀ ಬೆಳೆ ಬೆಳೆಯುವ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಡಾ. ಬಿ.ಎಂ. ಬೋಪಣ್ಣ ಹಾಜರಿದ್ದರು. ಉಪಾಸೀ ಉಪಾಧ್ಯಕ್ಷ ವಿನೋದ್ ಶಿವಪ್ಪ ಹಾಗೂ ಇತರರು ಹಾಜರಿದ್ದರು.