ಕುಶಾಲನಗರ, ಜ. 16: ಕುಶಾಲನಗರದಲ್ಲಿ ಅದ್ಧೂರಿಯಾಗಿ ನಡೆದ 11ನೇ ಕನ್ನಡ ಸಾಹಿತ್ಯ ಜಿಲ್ಲಾ ಸಮ್ಮೇಳನದಲ್ಲಿ ಆಹಾರ ಸಮಿತಿಗೆ ನೀಡಬೇಕಾದ ಖರ್ಚು ವೆಚ್ಚಗಳನ್ನು ನೀಡದೆ ಹಣಕಾಸು ಸಮಿತಿ ಸತಾಯಿಸುತ್ತಿರುವ ಬಗ್ಗೆ ಆಹಾರ ಸಮಿತಿ ಅಧ್ಯಕ್ಷರಾದ ಕೆ.ಸಿ.ನಂಜುಂಡಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅತ್ಯುತ್ತಮವಾಗಿ ಸಮಿತಿ ಮೂಲಕ ಸಮ್ಮೇಳನದಲ್ಲಿ ಪಾಲ್ಗೊಂಡ ಸಾವಿರಾರು ಕನ್ನಡ ಮನಸುಗಳಿಗೆ ಊಟ, ತಿಂಡಿ ನೀಡುವ ಮೂಲಕ ಶ್ಲಾಘನೆ ವ್ಯಕ್ತಗೊಂಡಿದ್ದರೂ ಸಮ್ಮೇಳನದ ಹಣಕಾಸು ಸಮಿತಿ ಪ್ರಮುಖರು ಖರ್ಚು ವೆಚ್ಚವನ್ನು ನೀಡಲು ಸತಾಯಿಸುತ್ತಿದ್ದು ಇದರಿಂದ ತನಗೆ ತುಂಬ ನೋವುಂಟಾಗಿದೆ ಎಂದಿದ್ದಾರೆ.

ಅವರು ಸುದ್ದಿಗೋಷ್ಠಿಯಲ್ಲಿ ಆಹಾರ ಸಮಿತಿಯ ಖರ್ಚು ವೆಚ್ಚಗಳ ದಾಖಲಾತಿಯನ್ನು ಒದಗಿಸಿ ಅಂದಾಜು 30 ಜನ ಬಾಣಸಿಗರನ್ನು ಒಳಗೊಂಡಂತೆ ಎರಡು ದಿನಗಳ ಸಮ್ಮೇಳನದ ಒಟ್ಟು ಆಹಾರ ವೆಚ್ಚ 4 ಲಕ್ಷದ 69 ಸಾವಿರದ 482 ರೂಗಳಾಗಿದ್ದು ಸಮ್ಮೇಳನ ಕಳೆದ 1 ವಾರವಾದರೂ ಕನಿಷ್ಟ ಯಾವದೇ ಹಣ ಪಾವತಿಸಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ಎಲ್ಲಾ ಬಿಲ್‍ಗಳನ್ನು ಪರಿಶೀಲಿಸಿ ಸಮ್ಮೇಳನದ ಗೌರವಾಧ್ಯಕ್ಷರೂ ಹಾಗೂ ಮಡಿಕೇರಿ ಕ್ಷೇತ್ರ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಹಾಗೂ ಸಮ್ಮೇಳನದ ಕಾರ್ಯಾಧ್ಯಕ್ಷರಾದ ಲೋಕೇಶ್ ಸಾಗರ್ ಅವರಿಗೆ ದಾಖಲೆಗಳನ್ನು ಒದಗಿಸಲಾಗಿದೆ. ಶಾಸಕರ ಮಾತಿಗೂ ಹಣಕಾಸು ಸಮಿತಿ ಮನ್ನಣೆ ನೀಡಿಲ್ಲ. ತನಗೆ ಸ್ಥಳೀಯ ವರ್ತಕರು ಹಣ ಪಾವತಿ ಸಂಬಂಧ ದಿನನಿತ್ಯ ಸಂಪರ್ಕಿಸುತ್ತಿದ್ದು ಈ ಸಮಸ್ಯೆಗೆ ಪರಿಹಾರ ಇನ್ನೂ ದೊರಕಿಲ್ಲ ಎಂದು ತಿಳಿಸಿದ್ದಾರೆ.

ದಿನಾಂಕ 9 ರಿಂದ 11 ರ ರಾತ್ರಿ ತನಕ ಸುಮಾರು 13 ಸಾವಿರಕ್ಕೂ ಅಧಿಕ ಜನರಿಗೆ ಊಟ, ತಿಂಡಿ ಒದಗಿಸಲಾಗಿದ್ದು ಈ ಬಗ್ಗೆ ಎಲ್ಲೆಡೆ ಶ್ಲಾಘನೆ ವ್ಯಕ್ತಗೊಂಡಿದೆ. ಆದರೆ ಹಣಕಾಸು ಸಮಿತಿಯ ನಡುವೆ ಗೊಂದಲ ಉಂಟಾಗಿರುವದು ನಿಜಕ್ಕೂ ವಿಷಾದನೀಯ ಎಂದಿರುವ ಅವರು, ಸಮಿತಿಯ ಕೆಲವರ ಸ್ವಹಿತಾಸಕ್ತಿ ಇಂತಹ ಗೊಂದಲಗಳಿಗೆ ಕಾರಣ ಎಂದು ಆರೋಪಿಸಿದ್ದಾರೆ. ತಕ್ಷಣ ಹಣ ಮಂಜೂರು ಮಾಡುವಂತೆ ಸುದ್ದಿಗೋಷ್ಠಿಯಲ್ಲಿ ನಂಜುಂಡಸ್ವಾಮಿ ಒತ್ತಾಯಿಸಿದ್ದಾರೆ.

ಈ ಗೊಂದಲಗಳಿಂದ ಮನನೊಂದಿರುವ ತಾನು ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾ ಸಮಿತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.