ಸುಂಟಿಕೊಪ್ಪ, ಜೂ. 18: ಇಲ್ಲಿಗೆ ಸಮೀಪದ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಚೌಡಿಕಾಡು ಎಸ್ಟೇಟ್ ಹಾಗೂ ಪ್ರಕಾಶ ಎಸ್ಟೇಟ್‍ಗಳಿಗೆ ಕಾಡಾನೆ ನುಗ್ಗಿ ಅಪಾರ ಬೆಳೆ ನಾಶಗೊಳಿಸಿದ ಕುರಿತು ವರದಿಯಾಗಿದೆ.

ಆನೆಕಾಡು ಮೀಸಲು ಅರಣ್ಯದಿಂದ ಕಾಡಾನೆಗಳು ರಾತ್ರಿ ವೇಳೆ ಗ್ರಾಮಗಳಿಗೆ ಲಗ್ಗೆಯಿಡುತ್ತಿದ್ದು, ಹರೀಶ್ ಪೈ ಎಂಬವರಿಗೆ ಸೇರಿದ ಚೌಡಿಕಾಡು ತೋಟಕ್ಕೆ ನುಗ್ಗಿದ ಕಾಡಾನೆಗಳು ಕಾಫಿ, ಮೆಣಸು, ತೆಂಗು ನಾಶಗೊಳಿಸಿ ಸುಮಾರು 15 ಕಡೆ ಬೇಲಿಯನ್ನು ತುಳಿದು ತುಂಡುಮಾಡುವದರೊಂದಿಗೆ ಸುಮಾರು ರೂ. 50,000 ಗಳಷ್ಟು ನಷ್ಟ ಉಂಟಾಗಿದೆ ಎಂದು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.

ಪ್ರದೀಪ್ ಅಣ್ಣಯ್ಯ ಎಂಬವರಿಗೆ ಸೇರಿದ ಪ್ರದೀಪ್ ತೋಟದ ಮನೆಯ ಮುಂಭಾಗದ ಗೇಟನ್ನು ಮುರಿದು ಅವರ ತೋಟದ ಬೇಲಿಯನ್ನು 20 ಕಡೆ ನಾಶಗೊಳಿಸಿದ್ದು, ಸುಮಾರು ರೂ. 40,000 ನಷ್ಟ ಸಂಭವಿಸಿದೆ ಎಂದು ದೂರು ನೀಡಿದ್ದಾರೆ.

ಈ ಭಾಗದಲ್ಲಿ ಪ್ರತಿನಿತ್ಯ ಕಾಡಿನಿಂದ ತೋಟಗಳಿಗೆ ಕಾಡಾನೆಗಳು ಬರುತ್ತಿರುವದರಿಂದ ತೋಟ ಕಾರ್ಮಿಕರು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಭಯದಿಂದ ದಿನದೂಡುವಂತಾಗಿದೆ.

ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗ್ರಾಮಗಳ ತೋಟಗಳಲ್ಲಿ ನೆಲೆವೂರಿರುವ ಕಾಡಾನೆಗಳನ್ನು ಕಾಡಿಗೆ ಅಟ್ಟುವದರೊಂದಿಗೆ ಮುಂದಾಗುವ ಅನಾಹುತವನ್ನು ತಪ್ಪಿಸಬೇಕೆಂದು ಕಾಫಿ ಬೆಗಾರರಾದ ಸುಭಾಷ್ ಪೈ, ಪ್ರದೀಪ್ ಅಣ್ಣಯ್ಯ ಆಗ್ರಹಿಸಿದ್ದಾರೆ.