ವೀರಾಜಪೇಟೆ, ಆ. 31: ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅವರೆಗುಂದ ಬಸವನಹಳ್ಳಿ ಎಂಬಲ್ಲಿ ಭಾನುವಾರ ಸಂಭವಿಸಿದ ಒಂಟಿ ಸಲಗ ಧಾಳಿಯಿಂದ ಚೆಲುವ(35) ಕಾರ್ಮಿಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರ ಅರಣ್ಯ ಇಲಾಖೆಯ ಜಿಲ್ಲೆಯ ಹಿರಿಯ ಅಧಿಕಾರಿಯನ್ನು ಅಮಾನತ್ತಿನಲ್ಲಿಟ್ಟು ಇಲಾಖೆಯ ಉನ್ನತ ಮಟ್ಟದಲ್ಲಿ ಆಂತರಿಕ ವಿಚಾರಣೆಗೊಳಪಡಿಸ ಬೇಕೆಂದು ಜಾತ್ಯತೀತ ಜನತಾದಳದ ಜಿಲ್ಲಾ ಸಮಿತಿ ಕಾರ್ಯಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಆಗ್ರಹಿಸಿದರು.
ಜನತಾದಳದಿಂದ ಬಸವನಹಳ್ಳಿಯ ಮೃತ ಚೆಲುವ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಹಾಡಿ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ಸಂಕೇತ್ ಪೂವಯ್ಯ ಅವರು ಕೊಡಗಿನಲ್ಲಿ ಕಾಡಾನೆ ಧಾಳಿಯಿಂದ ಬಡ ಕೂಲಿ ಕಾರ್ಮಿಕರು, ಬಡವರು, ದಲಿತರು ನಿರಂತರವಾಗಿ ಸಾವು ನೋವುಗಳಿಗೆ ಬಲಿಯಾಗುತ್ತಿದ್ದಾರೆ. ದುರಂತದ ತಕ್ಷಣ ಇಲಾಖೆಯ ಅಧಿಕಾರಿಗಳು ಚೆಕ್ ಪುಸ್ತಕಗಳನ್ನು ಜೇಬಿನಲ್ಲಿಟ್ಟುಕೊಂಡು ಸಾಧನೆ ಮಾಡಿದ ರೀತಿಯಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ನೀಡುತ್ತಾರೆ. ಆದರೆ ಕಾಡಾನೆಗಳನ್ನು ನಿಗ್ರಹಿಸುವ, ಮರಳಿ ಕಾಡಿಗೆ ಅಟ್ಟುವಲ್ಲಿ ಉಗಾಂಡ, ಆಫ್ರಿಕಾ, ಇತರ ರಾಷ್ಟ್ರಗಳಂತೆ ಜಾರಿಗೆ ತಂದಿರುವ ವೈಜ್ಞಾನಿಕವಾದ ಯೋಜನೆಗಳಿಗೆ ಚಿಂತಿಸುತ್ತಿಲ್ಲ. ಬಸವನಹಳ್ಳಿಯಲ್ಲಿ ಚೆಲುವನ ಜೊತೆಯಲ್ಲಿದ್ದ ಇಬ್ಬರು ತಕ್ಷಣ ಓಡಿ ಹೋಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾಡಾನೆ ಧಾಳಿಯಿಂದ ದುರಂತ ಸಂಭವಿಸುವಾಗ ಮಾತ್ರ ಇಲಾಖೆ ಕೇವಲ ಪರಿಹಾರದ ಚಿಂತನೆ ಮಾಡುತ್ತಿದೆ. ದುರಂತ ತಪ್ಪಿಸುವಂತಹ ಗೋಜಿಗೆ ಹೋಗುವದಿಲ್ಲ. ಕೊಡಗಿನ ಜನತೆಯ ಶಾಂತ ಚಿತ್ತತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅರಣ್ಯ ಮಂತ್ರಿ ರಮಾನಾಥ್ ರೈ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.
ಜಿಲ್ಲೆಯಲ್ಲಿ ಕಾಡಾನೆ ಧಾಳಿಗೆ ಸಂಬಂಧಿಸಿದಂತೆ ಅರಣ್ಯ ಸಚಿವರನ್ನು ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸಿದರೂ ಯಾವದೇ ಪ್ರಯೋಜನ ವಾಗಿಲ್ಲ. ಪ್ರತಿಕ್ರಿಯೆಯು ಇಲ್ಲ. ಮುಖ್ಯಮಂತ್ರಿ ಭೇಟಿಗೆ ಎರಡೂವರೆ ತಿಂಗಳಿನಿಂದ ಸಮಯಾವಕಾಶ ನಿಗಧಿಪಡಿಸಲು ಆಪ್ತ ಕಾರ್ಯದರ್ಶಿಗೆ ಮನವಿ ನೀಡಿದರೂ ಈ ತನಕ ಸಮಯ ಸಿಕ್ಕಿಲ್ಲ ಎನ್ನವದು ವಿಷಾದನೀಯ. ಈ ಇಬ್ಬರು ನಾಯಕರಲ್ಲಿ ಕೊಡಗು ಕರ್ನಾಟಕ ದಿಂದ ಪ್ರತ್ಯೇಕವಾಗಿರ ಬಹುದೆನ್ನುವ ಭಾವನೆಯಿದೆ. ಇಬ್ಬರು ಕೊಡಗಿನ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎನ್ನುವದರಲ್ಲಿ ಸಂಶಯವಿಲ್ಲ. ಮೈಸೂರು ಇಲ್ಲವೇ ಉಡುಪಿಯಲ್ಲಿ ಈ ರೀತಿಯ ದುರಂತ ಸಂಭವಿಸಿದ್ದರೆ ಸರಕಾರವೇ ಅಲ್ಲಿಯೇ ಇರುತ್ತಿತ್ತು. ಸರಕಾರ ಕಾರ್ಮಿಕ ಕಾಡಾನೆ ದುರಂತಕ್ಕೊಳಗಾಗಿ ಸಾವನ್ನಪ್ಪಿದರೆ ಆತನ ಜೀವಕ್ಕೆ ರೂ5 ಲಕ್ಷ ಮೌಲ್ಯ ನಿಗಧಿಪಡಿಸಿದೆ. ಕನಿಷ್ಠ 10ಲಕ್ಷ ಹಣವನ್ನು ನಿಗಧಿಪಡಿಸಬೇಕು. ಮುಂಜಾಗರೂಕತಾ ಕ್ರಮವಾಗಿ ಕಾಡಾನೆ ದುರಂತದಿಂದ ಕಾರ್ಮಿಕರನ್ನು ರಕ್ಷಿಸುವ ಹೊಣೆ ಸರಕಾರದ್ದು ಹಾಗೂ ಅರಣ್ಯ ಇಲಾಖೆಯದ್ದಾಗಿದೆ ಎಂದರು.
ಇದೇ ಸಮಯದಲ್ಲಿ ಸಂಕೇತ್ ಪೂವಯ್ಯ ಅವರು ವೈಯಕ್ತಿಕವಾಗಿ ಮೃತ ಚೆಲುವನ ಹಿರಿಯ ಸಹೋದರಿ ಬಸವಿಗೆ ರೂ 10,000 ನಗದು ಹಣವನ್ನು ಪರಿಹಾರವಾಗಿ ನೀಡಿದರು. ಪಕ್ಷದ ಜಿಲ್ಲಾ ಸಮಿತಿಯ ಪ್ರಧಾನ ಮಹಾ ಕಾರ್ಯದರ್ಶಿ ಕೆ.ಆರ್ ಸುರೇಶ್, ತಾಲೂಕು ಸಮಿತಿ ಅಧ್ಯಕ್ಷ ಮನಿಯಪಂಡ ಸಿ.ಬೆಳ್ಳಿಯಪ್ಪ ಅವರುಗಳು ಮಾತನಾಡಿ ಬಸವನಹಳ್ಳಿ ಹಾಡಿ ನಿವಾಸಿಗಳಿಗೆ ಕಾಡಾನೆ ಧಾಳಿಯಲ್ಲಿ ಸರಕಾರದ ವೈಫಲ್ಯಗಳ ಕುರಿತು ವಿವರವಾದ ಮಾಹಿತಿ ನೀಡಿದರು.
ಬಸವನಹಳ್ಳಿ ಹಾಡಿಗೆ ಸಂಕೇತ್ ಪೂವಯ್ಯ ಭೇಟಿ ನೀಡಿದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತ ರುಗಳಾದ ಚನ್ನನಕೋಟೆಯ ವಿ.ಸಿ.ದೇವರಾಜು, ಎಂ.ಕೆ.ವಸಂತ್, ಗೂಡ್ಲೂರಿನ ಜಿ.ಬಿ.ಸೋಮಯ್ಯ, ಬಿ.ಎಂ.ಕಿರಣ್, ಸವಿಕುಮಾರ್, ಮಾಲ್ದಾರೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಕೂಡ್ಲಲನ ರಜಾಕ್, ಹಾಲಿ ಉಪಾಧ್ಯಕ್ಷ ಎಂ.ರಾಜು, ಹಾಡಿಯ ಮಾದ, ಕಾಳ, ಮಲ್ಲ, ನೇತ್ರಾವತಿ ಅಧಿಕ ಸಂಖ್ಯೆಯಲ್ಲಿ ಹಾಡಿಯ ನಿವಾಸಿಗಳು ಹಾಜರಿದ್ದರು.
ಸಭೆಯ ನಂತರ ಪಕ್ಷದ ಕಾರ್ಯಕರ್ತರುಗಳು ಮೃತ ಚೆಲುವನ ಕುಟುಂಬದ ಮನೆ ಮುಂದೆ ಅರಣ್ಯ ಇಲಾಖೆ ಹಾಗೂ ಸರಕಾರದ ವಿರುದ್ದ ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿದರು.