ಸುಂಟಿಕೊಪ್ಪ, ಸೆ. 12: ಸುಂಟಿಕೊಪ್ಪ ಸುತ್ತ-ಮುತ್ತಲಿನ ಗ್ರಾಮಗಳ ತೋಟಗಳಲ್ಲಿ ಮತ್ತೆ ಕಾಡಾನೆ ಹಾವಳಿ ಮುಂದುವರೆದಿದ್ದು ಕೃಷಿಕರಲ್ಲಿ, ತೋಟಗಳ ಮಾಲೀಕರಲ್ಲಿ ಆತಂಕ ಸೃಷ್ಟಿಸಿದೆ.
ಇಲ್ಲಿಗೆ ಸಮೀಪದ ಕಂಬಿಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮ್ಯಾಗಡೋರ್ ಪಾರ್ವತಿ ತೋಟಕ್ಕೆ ಒಂಟಿ ಸಲಗವೊಂದು ರಾತ್ರಿ ವೇಳೆ ಲಗ್ಗೆಯಿಟ್ಟು ಅಲ್ಲಿದ್ದ ಭಾರೀ ಗಾತ್ರದ ತೆಂಗಿನ ಮರವನ್ನು ಕೆಡವಿ ಹಾಕಿದ್ದರಿಂದ ಅಲ್ಲೇ ಪಕ್ಕದಲ್ಲಿ ಇದ್ದ ಕೊಟ್ಟಿಗೆ ಮೇಲೆ ಬಿದ್ದ ಪರಿಣಾಮ ಮೇಲ್ಛಾವಣಿ ಸಂಪೂರ್ಣ ಧ್ವಂಸಗೊಂಡಿದೆ. ನಂತರ ಕಾಫಿ ತೋಟಕ್ಕೆ ನುಗ್ಗಿ ಬೇಲಿಯನ್ನು ತುಂಡರಿಸಿ ಹಾಕಿದಲ್ಲದೇ ಕಾಫಿ ಗಿಡಗಳನ್ನುü ತುಳಿದು ನಾಶಗೊಳಿಸಿದೆ. ಇದರಿಂದಾಗಿ ಸುಮಾರು ರೂ. 50000 ದಷ್ಟು ನಷ್ಟ ಸಂಭವಿಸಿದೆ ಎಂದು ತೋಟದ ಮಾಲೀಕರಾದ ಟಿ.ಕೆ.ಭಾನುಮತಿ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಕೆಲವು ತಿಂಗಳುಗಳಿಂದ ಸುಂಟಿಕೊಪ್ಪ ಸುತ್ತಮುತ್ತಲಿನ ತೋಟಗಳಲ್ಲಿ ಕಾಡಾನೆಗಳು ನಿರಂತರವಾಗಿ ಫಸಲನ್ನು ನಷ್ಟ ಪಡಿಸುತ್ತಿದ್ದು, ರೈತರು ಕಂಗಾಲಾಗಿದ್ದಲ್ಲದೆ ಕಾಡಾನೆಗಳನ್ನು ಹಿಡಿಯಬೇಕೆಂದು ಅರಣ್ಯ ಇಲಾಖೆಗೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಯಾವದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.