ಮಡಿಕೇರಿ, ನ. 7: ಕಾನೂನು ಅರಿವು ಜಾಗೃತಿ ಕಾರ್ಯಕ್ರಮದ ಅಂಗವಾಗಿ ‘ಮನೆ-ಮನೆ ಭೇಟಿ’ ಕಾರ್ಯಕ್ರಮ ಬುಧವಾರ ಮತ್ತು ಗುರುವಾರದಂದು ಜಿಲ್ಲೆಯಾದ್ಯಂತ ಯಶಸ್ವಿಯಾಗಿ ನಡೆಸಲಾಯಿತು.

ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಮನೆ-ಮನೆಗೆ ಭೇಟಿ ನೀಡಿ ಕಾನೂನಿನ ಬಗ್ಗೆ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲೆ ಯಾದ್ಯಂತ ಅರೆಕಾಲಿಕ ಕಾನೂನು ಸ್ವಯಂ ಸೇವಕರು, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸ್ವಸಹಾಯ ಸಂಘದವರು, ವಕೀಲರು, ಓ.ಡಿ.ಪಿ. ಸಂಸ್ಥೆ ಯವರು ಮತ್ತು ಕ್ರಿಯಾಶೀಲ ಅಭಿವೃದ್ಧಿ ಸಂಸ್ಥೆಯವರು ಮನೆ-ಮನೆಗೆ ಭೇಟಿ ನೀಡಿ ಕರಪತ್ರಗಳನ್ನು ಮನೆಗಳಿಗೆ ಹಂಚಿ ಮನೆಯವರ ವಿವರ ಮತ್ತು ಸಮಸ್ಯೆಗಳ ಬಗ್ಗೆ ನಿಗದಿತ ನಮೂನೆಯಲ್ಲಿ ಪಡೆದು ಕೊಂಡರು.

ಕಾರ್ಯಕ್ರಮದಲ್ಲಿ ವಿಶೇಷವಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಮೋಹನ್ ಪ್ರಭು ಮೂರ್ನಾಡಿನ ಐಕೋಳ ವೆಂಕಟೇಶ್ವರ ಕಾಲೋನಿ ಮತ್ತು ಮೂರ್ನಾಡು ಪಟ್ಟಣಗಳಲ್ಲಿ ಸ್ವತಃ ಕರಪತ್ರ ಹಂಚಿ, ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಇರುವ ಸರಕಾರದ ಸವಲತ್ತುಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಕಾನೂನು ಸೇವಾ ಪ್ರಾಧಿಕಾರದ ಜಯಪ್ಪ ಇತರರು ಇದ್ದರು.