ಪೊನ್ನಂಪೇಟೆ, ಜೂ. 17: ಕಾನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅವ್ಯವಹಾರ ನಡೆದಿದೆ ಎಂಬ ಜಿ.ಪಂ. ಸದಸ್ಯ ಬಿ.ಎನ್. ಪ್ರಥ್ಯು ಅವರ ಆರೋಪ ಸತ್ಯಕ್ಕೆ ದೂರವಾದದ್ದು. ಆರೋಗ್ಯ ಕೇಂದ್ರದಲ್ಲಿ ಯಾವದೇ ಅವ್ಯವಹಾರ ನಡೆದಿಲ್ಲ ಎಂದು ಕಾನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ರಕ್ಷಾ ಸಮಿತಿಯ ಅಧ್ಯಕ್ಷರೂ ಆಗಿರುವ ಕಾನೂರು ಗ್ರಾ.ಪಂ. ಅಧ್ಯಕ್ಷೆ ಡಿ.ಸಿ. ಲತಾ ಕುಮಾರಿ ಸ್ಪಷ್ಟಪಡಿಸಿದ್ದಾರೆ.

‘ಕಾನೂರು ಆರೋಗ್ಯ ಕೇಂದ್ರದ ದುರವಸ್ಥೆ: ಅವ್ಯವಹಾರ’ ಎಂಬ ಶಿರೋನಾಮೆಯಡಿ ತಾ. 15 ರ ‘ಶಕಿ’್ತಯಲ್ಲಿ ಪ್ರಕಟಗೊಂಡ ಸುದ್ದಿಗೆ ಲಿಖಿತ ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟೀಕರಣ ನೀಡಿರುವ ಅವರು, ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ಸಂಬಂಧಿಸಿದಂತೆ ಬಿ.ಎನ್. ಪ್ರಥ್ಯು ಮಾಡಿದ ಆರೋಪದಲ್ಲಿ ಯಾವದೇ ಉರುಳಿಲ್ಲ ಎಂದಿದ್ದಾರೆ.

ಬಿ.ಎನ್. ಪ್ರಥ್ಯು ಅವರು ಆರೋಪಿಸಿರುವ ಆಸ್ಪತ್ರೆಯ ಅರಿವು ಯೋಜನೆಯ ಅನುದಾನದ ರೂ. 3 ಲಕ್ಷದ ಅವ್ಯವಹಾರದ ಬಗ್ಗೆ ತಮಗೆ ಮಾಹಿತಿ ಇಲ್ಲ. 2015 ರ ಜುಲೈ 1ರಿಂದ ತಾವು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದು, ಕಳೆದ ಜುಲೈ 1 ರಿಂದ ಯಾವದೇ ಅವ್ಯವಹಾರ ನಡೆದಿಲ್ಲ. ಇದಕ್ಕೂ ಮೊದಲು ಅವ್ಯವಹಾರ ನಡೆದಿದ್ದರೆ ಅದಕ್ಕೆ ತಾವು ಜವಾಬ್ದಾರರಲ್ಲ ಎಂದು ಹೇಳಿರುವ ಲತಾ ಕುಮಾರಿ ಅವರು, ರಕ್ಷಾ ಸಮಿತಿಯ ಖರ್ಚು ವೆಚ್ಚಗಳು ಅತ್ಯಂತ ಪಾರದರ್ಶಕವಾಗಿದ್ದು, ಹಣ ದುರುಪಯೋಗಕ್ಕೆ ಅವಕಾಶ ನೀಡಿಲ್ಲ ಎಂದು ಹೇಳಿದ್ದಾರೆ. ಪ್ರಥ್ಯು ಅವರು ಆರೋಪಿಸಿದಂತೆ ಸಭೆ ನಡೆಸದೆ ಇಷ್ಟ ಬಂದಂತೆ ಬಳಸಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಕಾನೂರು ಆರೋಗ್ಯ ಕೇಂದ್ರ ಮೊದಲು ಪ್ರಾಥಮಿಕ ಆರೋಗ್ಯ ಘಟಕವಾಗಿತ್ತು. 2008 ರಿಂದ ಇದು ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿತು. ಇಲ್ಲಿ ಯಾವದೇ ದಾದಿಯರ ಹುದ್ದೆ ಇಲ್ಲ. ಕೇವಲ ಆರು ಮಂದಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಉಳಿದೆಲ್ಲಾ ಹುದ್ದೆಗಳು ಖಾಲಿಯಿವೆ. ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 11 ಉಪಕೇಂದ್ರಗಳು ಒಳಪಟ್ಟಿವೆ. ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಕ್ಷೇತ್ರಕ್ಕೆ ತೆರಳಿ ಕಾರ್ಯ ನಿರ್ವಹಿಸಬೇಕಿದೆ. ಇವರು ಪ್ರತಿ ದಿನ ಕಾನೂರು ಕೇಂದ್ರಕ್ಕೆ ಬರುವ ಅಗತ್ಯವಿರುವದಿಲ್ಲ ಎಂದು ವಿವರಣೆ ನೀಡಿದ್ದಾರೆ. ಈ ಕೇಂದ್ರ ದಿನದ 24 ಗಂಟೆಯಲ್ಲಿ ಕಾರ್ಯನಿರ್ವಹಿಸುವ ಆರೋಗ್ಯ ಕೇಂದ್ರವಲ್ಲ. ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ಬಳಿಕ ಮಧ್ಯಾಹ್ನ 2 ರಿಂದ ಸಂಜೆ 4.30 ರವರೆಗೆ ಮಾತ್ರ ಕಾರ್ಯನಿರ್ವಹಿಸುವ ಆರೋಗ್ಯ ಕೇಂದ್ರವಾಗಿದೆ. ಇದು ಸ್ಥಳೀಯ ಸಾವಿರಾರು ಜನರಿಗೆ ಆರೋಗ್ಯ ಸೇವೆಯನ್ನು ಒದಗಿಸುತ್ತಾ ಬಂದಿದೆ. ವಾಸ್ತವ ಹೀಗಿರುವಾಗ ಜಿ.ಪಂ. ಸದಸ್ಯ ಬಿ.ಎನ್ ಪ್ರಥ್ಯು ಮಾಹಿತಿ ಪಡೆಯದೆ ಆರೋಪಿಸಿ ರುವದು ಸರಿಯಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಕಾನೂರು ಆರೋಗ್ಯ ಕೇಂದ್ರದಲ್ಲಿ ಒಂದು ವೈದ್ಯಾಧಿಕಾರಿಗಳ ಹುದ್ದೆ ಮಾತ್ರವಿದೆ. ಇದೀಗ ಡಾ. ರಾಸ್ಯ ಅವರು ಖಾಯಂ ವೈದ್ಯಾಧಿಕಾರಿ ಯಾಗಿ ಕಾರ್ಯನಿರ್ವಹಿಸುತ್ತಿದ್ದು, ಉನ್ನತ ವ್ಯಾಸಂಗಕ್ಕಾಗಿ ದೀರ್ಘ ರಜೆಯಲ್ಲಿ ತೆರಳಲು ಬಯಸಿದ್ದರು. ಆದರೆ ಇದೀಗ ಅವರು ಕರ್ತವ್ಯಕ್ಕೆ ಮರಳಿದ್ದಾರೆ. ಸಮೀಪದ ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು ಇಲ್ಲದ ಕಾರಣ ಕಾನೂರಿನ ವೈದ್ಯಾಧಿಕಾರಿಗಳು ಬಾಳೆಲೆಗೆ ವಾರಕ್ಕೆ 3 ದಿನ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದಾರೆ. ಜನತೆಗೆ ಆದಷ್ಟು ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.