ಶ್ರೀಮಂಗಲ, ಆ. 29: ಕಾಫಿ ಬೆಳೆಗಾರರ ಎಲ್ಲಾ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಚರ್ಚಿಸಿ ಕೇಂದ್ರ ಸರಕಾರದ ಕಾಫಿ ಕಾಯ್ದೆ 2016 ರ ತಿದ್ದುಪಡಿಗೆ ಸೂಕ್ತ ಆಕ್ಷೇಪಣೆ ಸಲ್ಲಿಸಬೇಕಾಗಿದೆ. ಈಗಾಗಲೇ ಕೇಂದ್ರ ವಾಣಿಜ್ಯ ಸಚಿವಾಲಯದ ಪ್ಲಾಂಟೇಶನ್ ನಿರ್ದೇಶಕಿ ಅನಿತಾ ಕರ್ಣ್ ಅವರನ್ನು ಸಂಪರ್ಕಿಸಿದ್ದು, ಈ ನಿಟ್ಟಿನಲ್ಲಿ ಕಾಫಿ ಬೆಳೆಗಾರರ ಅಹವಾಲುಗಳನ್ನು ಸ್ವೀಕರಿಸಲಿದ್ದು, ಶೀಘ್ರದಲ್ಲಿ ಕಳುಹಿಸಿಕೊಟ್ಟರೆ ಅವುಗಳನ್ನು ವಾಣಿಜ್ಯ ಸಚಿವಾಲಯ ಪರಿಶೀಲಿಸುತ್ತದೆ ಎಂದು ಭರವಸೆ ನೀಡಿದ್ದಾರೆ. ಹಾಗೆಯೇ ಕಾಫಿ ಮಂಡಳಿಯ ಉಸ್ತುವಾರಿ ಅಧ್ಯಕ್ಷರಾಗಿರುವ ಡಾ ಷಣ್ಮುಗಂ ಸುಂದರಮ್ ಅವರನ್ನು ಈ ಬಗ್ಗೆ ಸಂಪರ್ಕಿಸಿದ್ದು, ಆಕ್ಷೇಪಣೆ ಸಲಹೆ ಸೂಚನೆಗಳನ್ನು ಇವರಿಗೆ ಸಲ್ಲಿಸಲು ಅವಕಾಶವಿದೆ. ಅಧ್ಯಕ್ಷರು ವಾಣಿಜ್ಯ ಸಚಿವಾಲಯಕ್ಕೆ ಮುಂದಿನ ಕ್ರಮಕ್ಕಾಗಿ ಕಳುಹಿಸಿ ಕೊಡಲಿದ್ದಾರೆ ಎಂದು ಭಾರತೀಯ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷೆ ಆದೇಂಗಡ ತಾರಾ ಅಯ್ಯಮ್ಮ ತಿಳಿಸಿದ್ದಾರೆ.

ಕಾಫಿ ಕಾಯ್ದೆ 2016 ರ ಬಗ್ಗೆ ಬೆಳೆಗಾರರು ಗೊಂದಲ ಹಾಗೂ ಆತಂಕದಲ್ಲಿರುವ ಬಗ್ಗೆ ತಾರಾ ಅಯ್ಯಮ್ಮ ಅವರನ್ನು ಪ್ರತಿಕ್ರಿಯೆ ಬಯಸಿದಾಗ ಈ ಬಗ್ಗೆ ವಿವರಿಸಿದರು.

(ಮೊದಲ ಪುಟದಿಂದ) ಈಗಾಗಲೇ ಕರ್ನಾಟಕ ಬೆಳೆಗಾರರ ಒಕ್ಕೂಟದ(ಕೆ.ಜಿ.ಎಫ್) ಕನಾಟಕ ಪ್ಲಾಂಟರ್ಸ್ ಅಸೋಸಿಯೇಷನ್(ಕೆ.ಪಿ.ಎ) ಹಾಗೂ ಯುನೈಟೆಡ್ ಪ್ಲಾಂಟರ್ಸ್ ಅಸೋಸಿಯೇಷನ್(ಉಪಾಸಿ) ಗಳು ಆಕ್ಷೇಪಣೆಗಳನ್ನು ಸಲ್ಲಿಸಿರುವ ಬಗ್ಗೆ ತಿಳಿದು ಬಂದಿದೆ ಎಂದು ಹೇಳಿದರು.

ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರನ್ನು ಜಿಲ್ಲಾ ಬೆಳೆಗಾರ ಒಕ್ಕೂಟದ ನಿಯೋಗ ಭೇಟಿ ಮಾಡಿದಾಗ ಕಾಫಿ ಕಾಯ್ದೆಯಲ್ಲಿ ಬೆಳೆಗಾರರಿಗೆ ತೊಂದರೆಯಾಗುವ ಅಂಶಗಳನ್ನು ಕೈ ಬಿಡಲು ಕೇಂದ್ರ ವಾಣಿಜ್ಯ ಸಚಿವರ ಗಮನ ಸೆಳೆಯುವದಾಗಿ ಭರವಸೆ ನೀಡಿರುವದನ್ನು ಸ್ವಾಗತಿಸಿದ ತಾರಾ ಅಯ್ಯಮ್ಮ ಅವರು, ಕಾಫಿ ಕಾಯ್ದೆ-2016 ರಲ್ಲಿ ಬೆಳೆಗಾರರೊಬ್ಬರಿಗೆ ಅಧ್ಯಕ್ಷ ಸ್ಥಾನ ನೀಡುವದು ಸ್ವಾಗತಾರ್ಹವಾಗಿದೆ. ಆದರೆ ಕಾಫಿ ಮಂಡಳಿ ಅಧಿಕಾರಿಗಳು ಬೆಳೆಗಾರರ ತೋಟಗಳಿಗೆ ಪೂರ್ವಾನುಮತಿ ಇಲ್ಲದೆ ಪ್ರವೇಶಿಸಿ ಪರಿಶೀಲಿಸಲು ಅಧಿಕಾರ ನೀಡುವದನ್ನು ಕೈ ಬಿಡಬೇಕು. ಕಾಫಿ ಕ್ಷೇತ್ರಕ್ಕೆ ನಿಯಂತ್ರಣವಿದ್ದರೆ ಮಾತ್ರ ಗುಣಮಟ್ಟ ಕಾಪಾಡಲು ಸಾಧ್ಯ. ಗುಣಮಟ್ಟಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಬೆಳೆಗಾರರು ನೀಡಬೇಕಾಗಿದೆ. ಗುಣಮಟ್ಟ ಕಳೆದು ಕೊಂಡರೆ ವಿಶ್ವಮಟ್ಟದಲ್ಲಿ ಗ್ರಾಹಕರನ್ನು ಕಳೆದುಕೊಳ್ಳುವ ಅಪಾಯವಿದೆ ಎಂದರು.

ಕಾಫಿ ತೋಟಗಳನ್ನು ಕಾಫಿ ಕಾಯ್ದೆಯಲ್ಲಿ ನೋಂದಾಯಿಸಿಕೊಳ್ಳಬೇಕಾಗಿರುವ ಉದ್ದೇಶ ಏಕೆ ಎನ್ನುವ ಬಗ್ಗೆ ಚಿಂತನೆ ಮಾಡಬೇಕಾಗಿದೆ. 1942 ರ ಕಾಫಿ ಕಾಯ್ದೆ ಪ್ರಕಾರ ಅಧ್ಯಕ್ಷರು ಸೇರಿ 33 ಸದಸ್ಯರನ್ನು ಕೇಂದ್ರ ಸರಕಾರ ನೇಮಕ ಮಾಡಲು ಅವಕಾಶವಿತ್ತು. ಇದರಲ್ಲಿ 10 ಬೆಳೆಗಾರ ಸದಸ್ಯರಿಗೆ ಅವಕಾಶ ಕಲ್ಪಿಸಲಾಗಿತ್ತು. 10 ಸದಸ್ಯರಲ್ಲಿ 7 ಸಣ್ಣ ಬೆಳೆಗಾರರು ಹಾಗೂ 3 ದೊಡ್ಡ ಬೆಳೆಗಾರರು ಸದಸ್ಯರಾಗಿ ನೇಮಕಗೊಳ್ಳುತ್ತಿದ್ದರು. ಇದರಿಂದ ಬೆಳೆಗಾರರ ಪರವಾಗಿ ಕಾಫಿ ಮಂಡಳಿಯಲ್ಲಿ ಧ್ವನಿ ಎತ್ತಲು, ಹಿತಾಸಕ್ತಿ ಕಾಪಾಡಲು ಈ ನೇಮಕ ಅತ್ಯಗತ್ಯವಾಗಿದೆ. ನೂತನ ಕಾಯ್ದೆಯ ತಿದ್ದುಪಡಿಯಲ್ಲಿ ಇದನ್ನು ಹಾಗೆಯೇ ಮುಂದುವರೆಸುವದು ಹಾಗೂ ಕಾಫಿ ಮಂಡಳಿ ಸದಸ್ಯರಿಗೆ ಕನಿಷ್ಟ 3 ವರ್ಷ (ಹಿಂದಿನ ಹಾಗೆ) ಅವಧಿ ಇದ್ದರೆ ಸೂಕ್ತ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ಭಾರತದಲ್ಲಿ 4.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಮುಖ್ಯವಾಗಿ ಕರ್ನಾಟಕ ಶೇ.55.44, ಕೇರಳ ಶೇ. 20.47, ತಮಿಳುನಾಡು ಶೇ. 7.5 ಹಾಗೂ ಅಸಾಂಪ್ರದಾಯಿಕ ಕಾಫಿ ಬೆಳೆಯುವ ಪ್ರದೇಶಗಳಾಧ ಒಡಿಸಾ, ಆಂಧ್ರ್ರಪ್ರದೇಶ, ಈಶಾನ್ಯ ರಾಜ್ಯಗಳಲ್ಲಿ ಶೇ 17 ಬೆಳೆಯಲಾಗುತ್ತಿದೆ. 1950-51 ರಲ್ಲಿ 92,523 ಹೆಕ್ಟೇರ್‍ನಲ್ಲಿ ಬೆಳೆಸಲಾಗುತ್ತಿದೆ ಎಂದು ತಾರಾ ಅಯ್ಯಮ್ಮ ಪ್ರಶ್ನೆಯೊಂದಕ್ಕೆ ವಿವರಣೆ ನೀಡಿದರು.

ದೇಶದಲ್ಲಿ ಅಂದಾಜು 3 ಲಕ್ಷ ಕಾಫಿ ಬೆಳೆಗಾರರಿದ್ದು, ಶೇ. 98.5 ರಷ್ಟು 10 ಏಕರೆಗಿಂತ ಕಡಿಮೆ ವಿಸ್ತೀರ್ಣದಲ್ಲಿ ಕಾಫಿ ಬೆಳೆಯುವ ಸಣ್ಣ ಬೆಳೆಗಾರ ಒಟ್ಟು ಕಾಫಿ ಬೆಳೆಯುವ ಶೇ. 75 ಪ್ರದೇಶ ಸಣ್ಣ ಬೆಳೆಗಾರರ ಪಾಲಾಗಿದ್ದು, ಇದರಲ್ಲಿ ಶೇ. 70 ರಷ್ಟು ಕಾಫಿ ಉತ್ಪಾದಿಸುತ್ತ್ತಾರೆ. ಉಳಿದ ಶೇ 15 ರಷ್ಟು ಬೆಳೆಗಾರರು 10 ಹೆಕ್ಟೇರ್‍ಗಿಂತ ಹೆಚ್ಚಿನ ವಿಸ್ತೀರ್ಣ ಹೊಂದಿರುವ ಮಧ್ಯಮ, ದೊಡ್ಡ ಹಾಗೂ ಕಂಪೆನಿ ತೋಟಗಳಿದ್ದು, ಇವರುಗಳು ಕಾಫಿ ಬೆಳೆಯುವ ಉಳಿದ ಶೇ.25 ಪಾಲು ಹೊಂದಿದ್ದಾರೆ. ಇದರಲ್ಲಿ ದೇಶದ ಶೇ. 30 ಕಾಫಿ ಉತ್ಪಾದಿಸುತ್ತಾರೆ ಎಂದು ತಾರಾ ಅಯ್ಯಮ್ಮ ವಿವರಿಸಿದರು.

ವಿಶ್ವದಲ್ಲಿ ಭಾರತ ಕಾಫಿ ಉತ್ಪ್ಪಾದನೆಯಲ್ಲಿ 6ನೇ ಸ್ಥಾನದಲ್ಲಿದೆ. ಬ್ರೆಜಿಲ್, ವಿಯೆಟ್ನಾಂ, ಕೊಲಂಬಿಯಾ, ಇಂಡೋನೇಶಿಯಾ, ಇಥಿಯೋಪಿಯಾ ಅನುಕ್ರಮವಾಗಿ ಮೊದಲ 5 ನೇ ಸ್ಥಾನದಲ್ಲಿದೆ. ಭಾರತ ರೋಬಸ್ಟಾ ಶೇ. 70, ಅರಬಿ ಶೇ. 30 ರಷ್ಟು ಉತ್ಪಾದಿಸುತ್ತಿದೆ. ಭಾರತದ ಒಟ್ಟು ಕಾಫಿ ಉತ್ಪಾದನೆಯಲ್ಲಿ ಶೇ. 71 ರಷ್ಟು ಕರ್ನಾಟಕ ರಾಜ್ಯ, ನಂತರದಲ್ಲಿ ಕೇರಳ ಶೇ. 24.60, ತಮಿಳುನಾಡು ಶೇ. 4 ರಷ್ಟು ಉತ್ಪಾದಿಸುತ್ತಿವೆ. ಎಂದರು. ಭಾರತ 3 ಲಕ್ಷ 31 ಸಾವಿರ ಮೆಟ್ರಿಕ್ ಟನ್ ಕಾಫಿ ಉತ್ಪಾದನೆಯಲ್ಲಿ ಶೇ. 70 ರಷ್ಟು ರಫ್ತು ಮಾಡುತ್ತಿದ್ದು, ಶೇ. 30 ರಷ್ಟು ಆಂತರಿಕ ಬಳಕೆ ಮಾಡುತ್ತಿದೆ ಎಂದರು.

ಭಾರತದ ರೋಬಸ್ಟಾ ಗುಣಮಟ್ಟದ ಸಾಂಪ್ರದಾಯಿಕ ಕಾಫಿ ಉತ್ಪಾದನೆಗೆ ಉತ್ತಮ ಬ್ಲೆಂಡಿಂಗ್‍ಗಾಗಿ ಯುರೋಪಿಯನ್ ಒಕ್ಕೂಟ, ಯು.ಎಸ್.ಎ, ಕೆನೆಡಾ, ಜಪಾನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ದೇಶಗಳಲ್ಲಿ ಉತ್ತಮ ಬೇಡಿಕೆ ಇದೆ. 1942 ರ ಕಾಫಿ ಕಾಯ್ದೆ ಬ್ರಿಟಿಷರ ಆಡಳಿತದಲ್ಲಿ ಜಾರಿಗೆ ತರಲಾಗಿತ್ತು. 1992-93 ರಲ್ಲಿ ಕಾಫಿ ಮಂಡಳಿಯಿಂದ ಮುಕ್ತ ಮಾರುಕಟ್ಟಿಗೆ ಎಫೆಸ್ಕ್ಯೂ (ಫ್ರೀಸೇಲ್ ಕೋಟಾ) ಬಂದ ನಂತರ ಬೆಳೆಗಾರರಿಗೆ ಹೆಚ್ಚಿನ ಪ್ರಯೋಜನವಾಗಿದೆ ಎಂದರು.

ಕಾಫಿ ಮಂಡಳಿಯು ಬೆಳೆಗಾರರು ಹಾಗೂ ಸರಕಾರದ ನಡುವೆ ಸಂಪರ್ಕ ಕೊಂಡಿಯಂತೆ ಕೆಲಸ ಮಾಡುತ್ತಿದೆ. ಕಾಫಿ ಬೆಳೆಗಾರರು ಇದ್ದರೆ ಮಾತ್ರ ಕಾಫಿ ಉದ್ಯಮ ಮಂಡಳಿ ಇರುತ್ತದೆ. ಬೆಳೆಗಾರರ ಹಿತ ಕಾಪಾಡುವದು ಕಾಯ್ದೆಯ ಉದ್ದೇಶವಿರಬೇಕು. ಬೆಳೆಗಾರರಿಗೆ ಪೂರಕವಾಗಿರದಿದ್ದರೆ ಕಾಯ್ದೆಗೆ ಬೆಂಬಲ ನೀಡಲಾಗುವದು. ಆದರೆ ಬೆಳೆಗಾರರಿಗೆ ಮಾರಕವಾಗುವ ಅಂಶಗಳಿದ್ದರೆ ಅದಕ್ಕೆ ಬೆಂಬಲವಿಲ್ಲ್ಲವೆಂದು ಸ್ಪಷ್ಟಪಡಿಸಿದರು.

ಉತ್ಪಾದನಾ ವೆಚ್ಚ ಹೆಚ್ಚಳ, ಹವಾಮಾನ ವೈಪರೀತ್ಯದಿಂದ ಕಾಫಿ ಬೆಳೆಗಾರರು ಸಂಕಷದಲ್ಲಿದ್ದಾರೆ. ಮುಂದಿನ ಭವಿಷ್ಯ ಗೊತ್ತಿಲ್ಲದಂತಾಗಿದೆ. ದೃತಿಗೆಡದೇ ಸವಾಲುಗಳನ್ನು ಎದುರಿಸುತ್ತಲೇ ಗುಣಮಟ್ಟದ ಕಾಫಿ ಉತ್ಪಾದಿಸಬೇಕಾಗಿದೆ. ಸವಾಲುಗಳಿಗೆ ಎದೆಗುಂದದೇ ಅಥವಾ ಪಲಾಯನದಂತೆ ತೋಟ ಪರಭಾರೆ ಮಾಡದೇ ಪರಿಸರ ಸ್ನೇಹಿಯಾದ ಸಾಂಪ್ರದಾಯಿಕವಾದ ಕಾಫಿ ಉತ್ಪಾದನೆ ಮಾಡಬೇಕಾಗಿದೆ. 4900 ಕೋಟಿ ವಿದೇಶಿ ವಿನಿಮಯ ಗಳಿಸುವ ಕಾಫಿಯನ್ನು ಲಾಭದಾಯಕವಾಗಿ ಗುಣಮಟ್ಟದಲ್ಲಿ ಬೆಳೆಸಬೇಕಾಗಿದೆ ಎಂದು ಕಿವಿಮಾತು ಹೇಳಿದರು.

12ನೇ ಪಂಚವಾರ್ಷಿಕ ಯೋಜನೆಯಲ್ಲಿ ಕಾಫಿ ಅಭಿವೃದ್ಧಿಗಾಗಿ ಬೆಳೆಗಾರರ ಕಾಫಿ ಕಣ, ಕೆರೆ, ಯಾಂತ್ರೀಕರಣ, ಪಂಪ್‍ಸೆಟ್, ಗೋದಾಮು ಇತ್ಯಾದಿಗಳಿಗೆ ಸಹಾಯಧನ ಕಳೆದ 8 ತಿಂಗಳಿನಿಂದ ಬಿಡುಗಡೆಯಾಗುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಲಾಗಿ 2015-16 ರಲ್ಲಿ ಸಹಾಯ ಧನಕ್ಕೆ ರೂ. 67 ಕೋಟಿ ಪ್ರಸ್ತಾವನೆ ಸಲ್ಲಿಸಲಾಯಿತು. ಸರಕಾರ 40 ಕೋಟಿ ಬಿಡುಗಡೆ ಮಾಡಿತ್ತು. ಈ ಸಾಲಿನಲ್ಲಿ 27 ಕೋಟಿ ಬಾಕಿ ಉಳಿಯಿತು. 2016-17 ರಲ್ಲಿ 40 ಬಿಡುಗಡೆ ಮಾಡಿದೆ. ಇದರಲ್ಲಿ 2015-16 ರ ಸಾಲಿನಲ್ಲಿ ಬಾಕಿ ಉಳಿಸಿಕೊಂಡ ರೂ. 27 ಕೋಟಿ ನೀಡಲಾಗಿದೆ. ಉಳಿದ 14 ಕೋಟಿ ಸಹಾಯ ಧನ ನೀಡಲು ಹಣ ಬಿಡುಗಡೆಯಾಗಬೇಕಾಗಿದೆ. ಹಂತ ಹಂತವಾಗಿ ಈ ಹಣ ಸರಕಾರದಿಂದ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈ ಬಗ್ಗೆ ಕಾಫಿ ಬೆಳೆಯುವ ಕ್ಷೇತ್ರದ ಸಂಸದರು - ಸರಕಾರದ ಮೇಲೆ ಒತ್ತ್ತಾಯ ಮಾಡುವ ಅಗತ್ಯತೆ ಇದೆ ಎಂದರು. (ನೂತನ ಕಾಫಿ ಕಾಯ್ದೆ 2016 ಇದರ ಬಗ್ಗೆ ಆಕ್ಷೇಪಣೆ- ಸಲಹೆ ಸೂಚನೆಗಳನ್ನು ಬೆಳೆಗಾರರು ಅಥವಾ ಬೆಳೆಗಾರರ ಸಂಘ - ಸಂಸ್ಥೆಗಳು ಕೇಂದ್ರ ವಾಣಿಜ್ಯ ಸಚಿವಾಲಯದ ಪ್ಲಾಂಟೇಷನ್ ನಿರ್ದೇಶಕಿ ಅನಿತಾ ಕರ್ಣ ಅವರಿಗೆ ಚಿಟಿiಣಚಿ.ಞಚಿಡಿಟಿ@ಟಿiಛಿ.ಛಿom ಗೆ ಕಳುಹಿಸಬಹುದು. ಬೆಳೆಗಾರರ ಅಹವಾಲುಗಳನ್ನು ಇವರು ಸ್ವೀಕರಿಸಲಿದ್ದು, ಅವುಗಳನ್ನು ವಾಣಿಜ್ಯ ಸಚಿವಾಲಯ ಪರಿಶೀಲಿಸುತ್ತದೆ.)