ಶ್ರೀಮಂಗಲ, ಡಿ. 24: ಗಡಿ ಪ್ರದೇಶ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ ಬರಗಾಲದಿಂದ ಕಾಫಿ ಫಸಲು ನಷ್ಟವಾಗಿದೆ. ಇನ್ನೊಂದೆಡೆ ಬರಗಾಲಕ್ಕೆ ತುತ್ತಾಗಿ ಕುಡಿಯುವ ನೀರಿಗೆ ತೊಂದರೆ ಉಂಟಾಗಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಡಳಿತ ವಿಶೇಷ ಗಮನಹರಿಸಬೇಕೆಂದು ಗ್ರಾ.ಪಂ. ಅಧ್ಯಕ್ಷ ಬುಟ್ಟಿಯಂಡ ತಂಬಿ ನಾಣಯ್ಯ ಮನವಿ ಮಾಡಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬರಗಾಲದ ಹಿನ್ನೆಲೆಯಲ್ಲಿ ಕಾಫಿ ತೋಟಕ್ಕೆ ಬಹುತೇಕ ಜನರು ಕೃತಕವಾಗಿ ನೀರು ಒದಗಿಸಲು ಸಾಧ್ಯವಾಗಿಲ್ಲ. ಮಳೆ ಆಶ್ರಯಿತ ಕಾಫಿ ತೋಟಗಳಲ್ಲಿ ಕಳೆದ ಬೇಸಿಗೆಯಲ್ಲಿ ಸಕಾಲಕ್ಕೆ ಮಳೆ ದೊರೆಯದೆ ಹಾಗೂ ಬಿಸಿಲಿನ ತಾಪಕ್ಕೆ ಕಾಫಿ ಫಸಲು ನಷ್ಟಗೊಂಡಿದೆ. ಮಳೆ ಆಶ್ರಯಿತ ತೋಟಗಳಲ್ಲಿ ಏಕರೆಗೆÉ 2 ಚೀಲ ಕಾಫಿ ಸಹ ಆಗುವದಿಲ್ಲ. ಆದ್ದರಿಂದ ಕಾಫಿ ಬೆಳೆಯನ್ನೇ ಜೀವನಾಶ್ರಯ ಮಾಡಿಕೊಂಡಿರುವ ಬೆಳೆಗಾರರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಮುಂದಿನ ಜೀವನದ ಬಗ್ಗೆ ಚಿಂತಾಕ್ರಾಂತ ರಾಗಿದ್ದಾರೆ. ಆದ್ದರಿಂದ ಕಾಫಿ ಬೆಳೆಗಾರರಿಗೆ ಸರಕಾರ ವಿಶೇಷ ಪ್ಯಾಕೇಜ್ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

ಸರಕಾರ ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡಬೇಕು. ಕನಿಷ್ಟ 5 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡಬೇಕು. ಕಾಫಿ ಹಾಗೂ ಭತ್ತದ ಬೆಳೆಗೆ ಫಸಲಿನ ಮೇಲೆ ಸಾಲ ನೀಡುವ ಬದಲು ಆ ಜಾಗದ ಮೌಲ್ಯದ ಮೇಲೆ ಬ್ಯಾಂಕ್‍ಗಳು ಸಾಲ ನೀಡುವಂತಾಗಬೇಕು. ಹೀಗಾದಾಗ ಮಾತ್ರ ರೈತ ಹಾಗೂ ಬೆಳೆಗಾರ ಅಭಿವೃದ್ದಿ ಸಾಧಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟಿರುವ ಅವರು ಶಾಸಕ, ಸಂಸದರ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರದ ಗಮನ ಸೆಳೆಯುವದಾಗಿ ತಿಳಿಸಿದರು.

ಕೊಂಗಣ ನದಿ ತಿರುವು ಯೋಜನೆಗೆ ವಿರೋಧ: ಬಿ.ಶೆಟ್ಟಿಗೇರಿ ಕೊಂಗಣ ನದಿಗೆ ಅಣೆಕಟ್ಟು ನಿರ್ಮಿಸಿ ಕೊಲ್ಲಿತೋಡು ಮೂಲಕ ಲಕ್ಷ್ಮಣತೀರ್ಥ ನದಿಗೆ ನೀರು ಹರಿಸುವ ನದಿ ತಿರುವು ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ಅವರು, ಸ್ಥಳೀಯರಿಗೆ ನೀರು ಬಳಸಿಕೊಳ್ಳುವ ಮೊದಲ ಪ್ರಾಶಸ್ತ್ಯ ನೀಡದೆ ಹುಣಸೂರು, ಮೈಸೂರು ಜನರ ಹಿತಾಸಕ್ತಿಗಾಗಿ ಕೊಡಗು ಜಿಲ್ಲೆಗೆ ತೊಂದರೆಯಾಗುವ ಈ ಯೋಜನೆ ಮಾಡಿದರೆ ರಾಜಕೀಯ ರಹಿತವಾಗಿ ಹೋರಾಟ ನಡೆಸಲಾಗುವದು. ಜನಪ್ರತಿನಿಧಿಗಳು, ಸ್ಥಳೀಯ ಜನರನ್ನು ಕತ್ತಲೆಯಲ್ಲಿಟ್ಟು ಈ ಯೋಜನೆ ರೂಪಿಸಿದರೆ ತೀವ್ರ ತರದ ಹೋರಾಟ ನಡೆಸಲಾಗುವದು ಎಂದು ಎಚ್ಚರಿಸಿದರು.