ಶನಿವಾರಸಂತೆ, ಜೂ. 4: ಸ್ಥಳೀಯ ವಿಶ್ವಕರ್ಮ ಸಮಾಜದ ವತಿಯಿಂದ ಗುಡುಗಳಲೆ ಜಾತ್ರಾ ಮೈದಾನದಲ್ಲಿರುವ ಕಾಳಿಕಾಂಬದೇವಿ ದೇವಾಲಯದಲ್ಲಿ ಕಾಳಿಕಾಂಬದೇವಿ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಉಪನಯನ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು.
ಬೆಳಿಗ್ಗೆ ಅರೆಮಾದನಹಳ್ಳಿಯ ಸಜ್ಞಾನ ಪ್ರಭು ಪೀಠದ ವಿಶ್ವಕರ್ಮ ಜಗದ್ಗುರು ಶಿವಸುಜ್ಞಾನತೀರ್ಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಮಹಾಗಣಪತಿ ಪೂಜೆ, ನವಗ್ರಹಾ ರಾಧಾನಾ, ಅಗ್ನಿ ಪ್ರತಿಷ್ಠಾಪನಾ, ದುರ್ಗ, ಚಾಲಹೋಮ, ಚಾಲಕರ್ಮ, ಶುದ್ಧಿ ಮಾತೃ ಸಹಭೋಜನ ಹಾಗೂ ಯಜ್ಞೋಪವೀತ ಪೂಜೆ ನಡೆಯಿತು.
ಮೈಸೂರಿನ ದಯಾನಂದ ಶರ್ಮ ಹಾಗೂ ಸಂಗಡಿಗರ ಪ್ರಧಾನ ಪೌರೋಹಿತ್ಯದಲ್ಲಿ ಬ್ರಹ್ಮೋಪದೇಶ ನಡೆದು, ಸ್ವಾಮೀಜಿ ಮತ್ತು ಕಾರ್ಯಕಾರಿ ಮಂಡಳಿ ಸದಸ್ಯರಿಂದ ಪೂರ್ಣಾಹುತಿ, ಮಹಾಮಂಗಳಾರತಿ ನೆರವೇರಿತು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಮಧ್ಯಾಹ್ನದ ಬಳಿಕ ಜಗದ್ಗುರು ಶಿವಸುಜ್ಞಾನತೀರ್ಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಕಲ್ಲುಮಠದ ಮಹಾಂತ ಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಶಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಮನೆಹಳ್ಳಿ ತಪೋವನದ ಮಹಾಂತ ಸ್ವಾಮೀಜಿ ಸಮ್ಮುಖದಲ್ಲಿ ಆಶೀರ್ವಚನ ಕಾರ್ಯಕ್ರಮ ನಡೆಯಿತು.
ಬೆಂಗಳೂರಿನ ರಾಜ್ಯ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀನಿವಾಸಾಚಾರ್, ಬಸವೇಶ್ವರ ದೇವಾಲಯ ಅಧ್ಯಕ್ಷ ಡಿ.ಬಿ. ಧರ್ಮಪ್ಪ, ತಾಲೂಕು ಪಂಚಾಯಿತಿ ಸದಸ್ಯ ಹೆಚ್.ಬಿ. ಕುಶಾಲಪ್ಪ, ಗ್ರಾ.ಪಂ. ಅಧ್ಯಕ್ಷ ಹೆಚ್.ಎನ್. ಸಂದೀಪ್ ಮಾತನಾಡಿದರು.
ವಿಶ್ವಕರ್ಮ ಸಮಾಜದ ಉಪಾಧ್ಯಕ್ಷ ಸಹದೇವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾ.ಪಂ. ಸದಸ್ಯ ಹೆಚ್.ಎಸ್. ಸೋಮಶೇಖರ್, ವಿಶ್ವಕರ್ಮ ಸಮಾಜದ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಕೆ.ಎಲ್. ಲಕ್ಷ್ಮಣಾಚಾರ್, ಕಾರ್ಯದರ್ಶಿ ಬಿ.ಬಿ. ನಾಗರಾಜ್, ನಿರ್ದೇಶಕ ಬಿ.ಕೆ. ಸುಬ್ರಹ್ಮಣ್ಯಾಚಾರ್ ಉಪಸ್ಥಿತರಿದ್ದರು.