ಸೋಮವಾರಪೇಟೆ, ಸೆ. 28: ಕಾವೇರಿ ನದಿ ಯಾರ ಸ್ವತ್ತಲ್ಲ, ಅದರ ಪಾಡಿಗೆ ಅದು ಹರಿಯುತ್ತಿದೆ. ಆದರೂ ಅದರ ನೀರು ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪಾಂಡಿಚೇರಿ ರಾಜ್ಯಗಳಿಗೆ ಹಂಚಿಕೆಯಾಗಬೇಕು. ಆದರೆ ತಮಿಳುನಾಡು ಸರ್ಕಾರ ತಮ್ಮದೇ ಸ್ವತ್ತೆಂಬಂತೆ ವರ್ತಿಸುತ್ತಿರುವದು ಸರಿಯಾದ ನಿರ್ಧಾರವಲ್ಲ ಎಂದು ಹಿರಿಯ ಸಾಹಿತಿ ಕೆ.ಕೆ. ಗಂಗಾಧರ್ ಅಭಿಪ್ರಾಯಪಟ್ಟರು.

ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಸಾಹಿತ್ಯ ಘಟಕದ ಆಶ್ರಯದಲ್ಲಿ ಇಲ್ಲಿನ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕವಿಗೋಷ್ಠಿಯಲ್ಲಿ ಕವಯತ್ರಿ ಶರ್ಮಿಳಾ ರಮೇಶ್ ಮಂಡಿಸಿದ “ಕಾವೇರಿ ಯಾರ ಸ್ವತ್ತು’’ ಎಂಬ ಕವನದ ಕುರಿತು ತಮ್ಮ ಅಭಿಪ್ರಾಯವ್ಯಕ್ತಪಡಿಸಿದ ಗಂಗಾಧರ್, ಕಾವೇರಿ ಕೇವಲ ತಮಿಳುನಾಡಿನ ಸ್ವತ್ತೆಂದು ಅಲ್ಲಿನವರು ಭಾವಿಸಿರುವದು ಸರಿಯಲ್ಲ ಎಂದರು.

ತಾಲೂಕಿನಲ್ಲಿ ಉತ್ತಮ ಸಾಹಿತಿಗಳಿರುವದು ಶ್ಲಾಘನೀಯ, ಪ್ರತಿಭೆಗಳು ನಗರ ಪ್ರದೇಶಕ್ಕಿಂತ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿದೆ. ಆದರೆ ಸೂಕ್ತ ವೇದಿಕೆಯಿಲ್ಲದೇ ಪ್ರತಿಭಾನ್ವಿತರು ಎಲೆಮರೆಯ ಕಾಯಿಯಂತಾಗಿದ್ದಾರೆ ಎಂದರು. ಕಳೆದ 35 ವರ್ಷಗಳಲ್ಲಿ ಮಲಯಾಳಂ, ಇಂಗ್ಲೀಷ್, ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ನೂರಾರು ಕೃತಿಗಳನ್ನು ತಾವು ಭಾಷಾಂತರಿಸಿದ್ದು, ಕನ್ನಡದಿಂದ ಇಂಗ್ಲೀಷ್‍ಗೆ ಅನುವಾದ ಆರಂಭಿಸಿದ್ದು ಸೋಮವಾರಪೇಟೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಎಂದು ನೆನಪಿಸಿಕೊಂಡರು.

ಕವಿಗೋಷ್ಠಿಯಲ್ಲಿ ಎಲಿಜಬೆತ್ ಲೋಬೊ ಅವರ “ದಾರ ಕಡಿದ ಗಾಳಿಪಟ’, ರಮ್ಯ ಮೂರ್ನಾಡು ಮಂಡಿಸಿದ “ಫ್ರೇಮ್ ಕಟ್ಟಿಸ ಬೇಕಾಗಿದೆ’, ನ.ಲ.ವಿಜಯ ಅವರ “ಕಾಗೆಯೊಂದು ಮುಖ್ಯಮಂತ್ರಿಗಳ ಕಾರಿನ ಮೇಲೆ ಕೂತು ಬಿಡಲಿ’, ಹಂಚೇಟ್ಟಿರ ಫ್ಯಾನ್ಸಿ ಮುತ್ತಣ್ಣ ಅವರ “ಮೂಕ ವೇದನೆ’, ಪುಟ್ಟಣ್ಣ ಆಚಾರ್ಯ ಅವರ “ಬೇಗುದಿ’, ರಾಣಿ ರವೀಂದ್ರ ಅವರ “ಕತ್ತಲಲ್ಲಿ ಕಾಡಿದ ಮೌನ’, ಜಲಾ ಕಾಳಪ್ಪ ಅವರ “ಹುತಾತ್ಮರೇ ಮತ್ತೊಮ್ಮೆ ಹುಟ್ಟಿ ಬನ್ನಿ’, ಅಂಗವಿಕಲೆ ಎಸ್.ಕೆ. ಈಶ್ವರಿ ಅವರ “ಸಾಗರದಲ್ಲಿ ಬದುಕು’, ರುಬಿನಾ ಅವರ “ಮರಣ ಮಾತನಾಡಿದಾಗ’ ಸೇರಿದಂತೆ ಹಲವು ಕವನಗಳು ಗಮನಸೆಳೆದವು. ಕಾರ್ಯಕ್ರಮವನ್ನು ಶಿಕ್ಷಕಿ ಕಾಂಚನಾ ನಿರೂಪಿಸಿದರು.