ಕೂಡಿಗೆ, ಸೆ. 22: ಸುಪ್ರೀಂ ಕೋರ್ಟ್ ಆದೇಶದನ್ವಯ ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವದರಿಂದ ಕರ್ನಾಟಕದ ರೈತರಿಗೆ ಕೃಷಿಯಲ್ಲಿ ಉಂಟಾಗಿರುವ ನಷ್ಟಕ್ಕೆ ಸರ್ಕಾರವೇ ಪರಿಹಾರ ಕೊಡಬೇಕು ಎಂದು ಆಗ್ರಹಿಸಿ ತೊರೆನೂರು ಗ್ರಾಮ ಮಂಚಾಯಿತಿ ವ್ಯಾಪ್ತಿಯ ಚಿಕ್ಕಅಳುವಾರ ಗ್ರಾಮ ದಲ್ಲಿರುವ ಮಂಗಳೂರು ವಿಶ್ವ ವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಕೇಂದ್ರದ ಬಳಿ ಜಮಾಯಿಸಿದ ನಾನೂರಕ್ಕೂ ಅಧಿಕ ವಿದ್ಯಾರ್ಥಿಗಳು ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತಾ ಮುಖ್ಯ ಗೇಟ್‍ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಈ ವೇಳೆ ಮಾತನಾಡಿದ ವಿದ್ಯಾರ್ಥಿ ಮುಖಂಡ ಶರತ್ ಕುಮಾರ್, ಕಾವೇರಿ ಕಣಿವೆಯ ಎಲ್ಲಾ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸಿ ಜಲಾಶಯಗಳು ಬರಿದಾದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನು ಒಂದು ಹನಿ ನೀರು ಕೂಡ ಹರಿಸುವದಿಲ್ಲ ಎಂದಿದ್ದಾರೆ. ಅಣೆಕಟ್ಟೆಗಳಲ್ಲಿ ನೀರು ಇದ್ದರೆ ತಾನೇ ಹರಿಸುವದಕ್ಕೆ? ಈ ನಿರ್ಧಾರವನ್ನು 20 ದಿನಗಳ ಹಿಂದೆಯೇ ತೆಗೆದುಕೊಂಡಿದ್ದರೆ ನಮ್ಮ ರಾಜ್ಯದ ರೈತರಿಗಾದರೂ ಅನುಕೂಲ ಆಗುತ್ತಿತ್ತು ಎಂದರು.

ಸಂಶೋಧನಾ ವಿದ್ಯಾರ್ಥಿನಿ ಮೇಘನಾ ಮಾತನಾಡಿ, ಕೊಡಗು, ಹಾಸನ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳ ಬಹುತೇಕ ರೈತರು ಕಾವೇರಿ ಮತ್ತು ಅದರ ಉಪನದಿಗಳನ್ನೇ ನಂಬಿಕೊಂಡು ಬದುಕುತ್ತಿದ್ದಾರೆ. ಆದರೆ ಸುಪ್ರೀಂಕೋರ್ಟ್‍ನ ಇತ್ತೀಚಿನ ತೀರ್ಪುಗಳು ಈ ಭಾಗದ ರೈತರಿಗೆ ಮರ್ಮಾಘಾತ ನೀಡಿದೆ ಎಂದರು.

ವಿದ್ಯಾರ್ಥಿ ನಾಯಕರಾದ ಮಣಿಕಂಠ, ಗಣೇಶ್, ಸಂತೋಷ್ ಕುಮಾರ್, ಮಂಜುನಾಥ್, ಮಮತಾ, ಸಿಂಧು, ಅರ್ಪಿತಾ, ಹಿತೇಶ್, ಗುರುಪ್ರಸಾದ್ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.