ಗೋಣಿಕೊಪ್ಪಲು, ಜ. 3: ನೂತನ ವರ್ಷಾಚರಣೆಯನ್ನು ಇಲ್ಲಿನ ಕಾವೇರಿ ಹಿಲ್ಸ್ ಬಡಾವಣೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾವೇರಿ ಸಂಘದ ವತಿಯಿಂದ ಬಡಾವಣೆಯಲ್ಲಿ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ನಿವಾಸಿಗಳು ಭಾಗವಹಿಸಿ ಪ್ರತಿಭಾ ಪ್ರದರ್ಶನ ನೀಡಿದರು. ಸುಮಾರು 30 ಕ್ಕೂ ಹೆಚ್ಚು ನೃತ್ಯಗಳು, ಹಾಸ್ಯ ನಾಟಕ, ಹಾಡುಗಳು ಕಾರ್ಯಕ್ರಮದಲ್ಲಿ ಉತ್ತಮವಾಗಿ ಮೂಡಿಬಂತು.

ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯಮಂತ್ರಿ ಪದಕ ವಿಜೇತ ದಕ್ಷ, ಪ್ರಮಾಣಿಕ ಪೊಲೀಸ್ ಅಧಿಕಾರಿ ಪಿ.ಕೆ. ರಾಜು, ಸ್ವಾತಂತ್ರ್ಯ ಹೋರಾಟಗಾರ ಬುಟ್ಟಿಯಂಡ ಅಪ್ಪಾಜಿ, ಕಾವೇರಿ ದಸರಾ ಸಮಿತಿ ಸ್ಥಾಪಕ ಸದಸ್ಯ ಕೆ. ರಾಮಾಚರ್, ನಾಟಿ ವೈದ್ಯ ಮುಕ್ಕಾಟ್ಟೀರ ಮಾದಪ್ಪ, ಮಾಜಿ ತಾ.ಪಂ. ಸದಸ್ಯೆ ಹಬೀಬುನ್ನಿಸಾ, ರಾಜ್ಯಮಟ್ಟದ ಕ್ರೀಡಾಪಟುಗಳಾದ ವಿವಿನ್ ಮತ್ತು ರಕ್ಷಿತಾ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವೃತ್ತ ನಿರೀಕ್ಷಕ ಪಿ.ಕೆ. ರಾಜು, ಸ್ಥಳೀಯರ ಬಾಂಧವ್ಯ ವೃದ್ಧಿಗೆ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ. ಪ್ರತಿಭಾನ್ವಿತರನ್ನು ಗುರುತಿಸಿ ಸನ್ಮಾನಿಸುತ್ತಿರುವದು ಉತ್ತಮ ಕಾರ್ಯವಾಗಿದ್ದು, ಸಮಾಜಕ್ಕೆ ಸಮಿತಿಯ ಕಾರ್ಯ ಅನುಕರಣೀಯ ಎಂದು ಶ್ಲಾಘಿಸಿದರು.

ಕಾವೇರಿ ಸಂಘದ ಅಧ್ಯಕ್ಷ ತಿರುನೆಲ್ಲಿಮಾಡ ಜೀವನ್ ಮಾತನಾಡಿ, ಸ್ಥಳೀಯರು ಮತ್ತು ದಾನಿಗಳ ಸಹಕಾರದಿಂದ ಕಳೆದ 10 ವರ್ಷಗಳಿಂದ ಹೊಸ ವರ್ಷಾಚರಣೆ ಆಚರಿಸುತ್ತಿದ್ದು, ಸ್ಥಳೀಯರ ಬಾಂಧವ್ಯ ವೃದ್ಧಿಗೆ ಈ ಕಾರ್ಯಕ್ರಮ ಉಪಯೋಗವಾಗಿದೆ ಎಂದರು.

ಸ್ಥಳೀಯ ನಿವಾಸಿ ರಾಜು ಅವರ ಪ್ರಾಯೋಜಕತ್ವದಲ್ಲಿ ಸಿಡಿಮದ್ದಿನ ಪ್ರದರ್ಶನ ಮತ್ತು ಸ್ಥಳಿಯ ಗ್ರಾ.ಪಂ. ಸದಸ್ಯೆ ಧನಲಕ್ಷ್ಮಿ ಅವರ ಪ್ರಯೋಜಕತ್ವದಲ್ಲಿ ಸುಮಾರು 15 ಕೆ.ಜಿಯ ಕೇಕ್ ಕತ್ತರಿಸಲಾಯಿತು.

ಹೊಸ ವರ್ಷ ಸಂಭ್ರಮ ಹಿನ್ನೆಲೆ ಇತ್ತೀಚೆಗೆ ದಿ. ಬಲ್ಲಡಿಚಂಡ ಪೊನ್ನಪ್ಪ ಸ್ಮರಣಾರ್ಥ ನಡೆದ ಹೊನಲು ಬೆಳಕಿನ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯರಾದ ಚೇಂದಿರ ಪ್ರಭಾವತಿ, ಜಮ್ಮಡ ಸೋಮಣ್ಣ, ಶಾಹಿನ್, ಸುಲೇಖಾ, ಯಾಸ್ಮಿನ್, ಸಂಘದ ಕಾರ್ಯದರ್ಶಿ, ರಫೀಕ್, ಉಪಾಧ್ಯಕ್ಷ ಎಂ.ಎಂ ಥಾಮಸ್, ನಿರ್ದೇಶಕರುಗಳಾದ ವರ್ಗೀಸ್, ರಾಜು, ಧನಲಕ್ಷ್ಮಿ, ಲ್ಯಾನ್ಸಿ ಡಿಸೋಜ, ಪ್ರಜೇಶ್, ಹರೀಶ್, ಪ್ರಶಾಂತ್ ಇದ್ದರು.

ಶಂಶೀರಾ ಪ್ರಾರ್ಥಿಸಿ, ಸಂಘದ ಗೌರವಾಧ್ಯಕ್ಷ ಶಾಂತೆಯಂಡ ಮಾಚಯ್ಯ ಸ್ವಾಗತಿಸಿ, ಖಜಾಂಚಿ ಚೋನಿರ ಸತ್ಯ ವಂದಿಸಿ, ತನ್ವೀರ್ ಮತ್ತು ಟೀನಾ ಮಾಚಯ್ಯ ಕಾರ್ಯಕ್ರಮ ನಿರೂಪಿಸಿದರು.