ಕುಶಾಲನಗರ. ಸೆ, 14: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವದನ್ನು ಖಂಡಿಸಿ ಕರ್ನಾಟಕ ಕಾವಲು ಪಡೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಕುಶಾಲನಗರದಲ್ಲಿ ಬೈಕ್ ಜಾಥಾ ನಡೆಯಿತು. ಕೊಪ್ಪ ಗೇಟ್ ಕಾವೇರಿ ಪ್ರತಿಮೆ ಬಳಿಯಿಂದ ಆರಂಭವಾದ ಬೈಕ್ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸರ್ಕಾರದ ನಿಲುವಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿತು. ಕುಶಾಲನಗರ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಸೇರಿದ ಸಂಘಟನೆಯ ಕಾರ್ಯಕರ್ತರು, ಸ್ವಲ್ಪ ಕಾಲ ರಸ್ತೆ ತಡೆ ನಡೆಸಿ ತಮಿಳುನಾಡು ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ವಿರುದ್ಧ ಘೋಷಣೆಗಳನ್ನು ಕೂಗಿದರು.

ಹಾರಂಗಿ ಯೋಜನಾ ಕಚೇರಿಗೆ ತೆರಳಿದ ಕಾರ್ಯಕರ್ತರು, ಕೂಡಲೇ ತಮಿಳುನಾಡಿಗೆ ಬಿಟ್ಟಿರುವ ನೀರನ್ನು ನಿಲ್ಲಿಸುವಂತೆ ಒತ್ತಾಯಿಸಿ ಅಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಎಂ. ಕೃಷ್ಣ, ಕಾವೇರಿಯ ತವರು ಕೊಡಗಿನಲ್ಲೂ ಈ ಬಾರಿ ವಾಡಿಕೆಯ ಮಳೆ ಆಗದೆ ನೀರಿನ ಕೊರತೆ ಉಂಟಾಗಿದೆ. ನದಿ ಹರಿವಿನಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಪರಿಸ್ಥಿತಿ ಹೀಗಿದ್ದರೂ ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ ನೀರು ಹರಿಸಿರುವ ಸರ್ಕಾರದ ನಡೆ ಸರಿಯಲ್ಲ ಎಂದರು.

ಸಂಘಟನೆಯ ಪದಾಧಿಕಾರಿ ಗಳಾದ ಸಲೀಂ ಹೆಚ್.ಎಸ್., ಚಕ್ರವರ್ತಿ, ಸತ್ಯವೇಲು, ಶಿವಶಕ್ತಿ, ಶಶಿಧರ್, ಹರೀಶ್, ಗಿರೀಶ್, ಮಂಜು, ಆಕಾಶ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.