ಕುಶಾಲನಗರ, ಆ. 1 : ಕಳೆದ ಬಾರಿಯಿಂದ ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದ ಕುಶಾಲನಗರ ಪಟ್ಟಣ ಪಂಚಾಯತಿ ಆಡಳಿತ ಮಂಡಳಿ ಈ ಬಾರಿ ಕಾರ್ಯಕ್ರಮದ ಉಸ್ತುವಾರಿ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ಸ್ವಾತಂತ್ರ್ಯೋತ್ಸವ ಸಮಾರಂಭದ ಪೂರ್ವ ತಯಾರಿ ನೆನೆಗುದಿಗೆ ಬಿದ್ದಿದೆ.
ಕಳೆದ 2000ನೇ ಸಾಲಿನಿಂದ ಕುಶಾಲನಗರದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಸಾಮೂಹಿಕವಾಗಿ ಆಯೋಜಿಸ ಲಾಗುತ್ತಿದ್ದ ಅದ್ಧೂರಿ ರಾಷ್ಟ್ರೀಯ ಹಬ್ಬಗಳ ಸಮಾರಂಭವನ್ನು ಕುಶಾಲನಗರ ಪಟ್ಟಣ ಪಂಚಾಯತಿ ಕಳೆದ ಒಂದು ವರ್ಷದ ಅವಧಿಯಿಂದ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ನಿರ್ಣಯ ಕೈಗೊಂಡಿತ್ತು. ಈ ಪ್ರಕಾರ ಬಜೆಟ್‍ನಲ್ಲಿ ರಾಷ್ಟ್ರೀಯ ಹಬ್ಬ ಆಚರಣೆಗೆಂದು 4 ಲಕ್ಷ ರೂಗಳ ಅನುದಾನವನ್ನು ಮೀಸಲಿರಿಸಿತ್ತು. ಪಂಚಾಯತಿ ಆಡಳಿತ ಮಂಡಳಿಯ ಉಸ್ತುವಾರಿಯಲ್ಲಿ 2015ರಲ್ಲಿ ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವ ಸಮಾರಂಭಗಳು ನಡೆದಿವೆ.
ಇದಕ್ಕೂ ಮುನ್ನ ಕುಶಾಲನಗರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ 2000 ಇಸವಿಯಿಂದ 15 ವರ್ಷಗಳ ಕಾಲ ಸ್ಥಳೀಯ ಸಂಘ-ಸಂಸ್ಥೆಗಳ ನೆರವಿನೊಂದಿಗೆ ನಡೆಸಿಕೊಂಡು ಬರಲಾಗುತ್ತಿತ್ತು. ಸ್ಥಳೀಯ ಡಿವೈಎಸ್‍ಪಿ ಗೌರವ ಅಧ್ಯಕ್ಷತೆಯಲ್ಲಿ ಚೇಂಬರ್ ಆಫ್ ಕಾಮರ್ಸ್ ಮತ್ತು ಕಾರ್ಯನಿರತ ಪರ್ತಕರ್ತರ ಸಂಘದ ನೇತೃತ್ವದಲ್ಲಿ 75ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಸ್ವಯಂ ಪ್ರೇರಿತರಾಗಿ ರಾಷ್ಟ್ರೀಯ ಹಬ್ಬ ಆಚರಣೆ ಮಾಡುವ ಮೂಲಕ ಸ್ಥಳೀಯ ಸಾವಿರಾರು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಐಕ್ಯತೆಯ ಬಗ್ಗೆ ಮಾಹಿತಿ ಒದಗಿಸುವ ಕಾರ್ಯದಲ್ಲಿ ತೊಡಗಿಕೊಂಡಿತು.
ಈ ಸಮಿತಿಯನ್ನು ವರ್ಷದ ಹಿಂದೆ ಏಕಾಏಕಿ ವಿಸರ್ಜನೆ ಮಾಡುವದರೊಂದಿಗೆ ಪಟ್ಟಣ ಪಂಚಾಯತಿ ಮೂಲಕ ಕಾರ್ಯಕ್ರಮಗಳು ನಡೆಯಲಾರಂಭಿಸಿತು. ಈ ನಡುವೆ ಕಳೆದ 2016ರ ಜನವರಿ ತಿಂಗಳಲ್ಲಿ ಪಟ್ಟಣ ಪಂಚಾಯತಿ ಆಡಳಿತದ ಮೇಲೆ ಕಾರ್ಯಕ್ರಮ ಬಗ್ಗೆ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಿರುವ ಹಿನ್ನೆಲೆಯಲ್ಲಿ ಇದೀಗ ಪಟ್ಟಣ ಪಂಚಾಯತಿ ಆಡಳಿತ ಕಾರ್ಯಕ್ರಮವನ್ನು ಸಾರ್ವಜನಿಕವಾಗಿ ನಡೆಸಲು ಹಿಂದೇಟು ಹಾಕಿದೆ ಎಂದು ತಿಳಿದು ಬಂದಿದೆ. ಪಟ್ಟಣ ಪಂಚಾಯತಿ ಆಡಳಿತ ತಮ್ಮ ಶಾಲೆಯಲ್ಲಿ ಕಾನೂನು ಬಾಹಿರವಾಗಿ ರಾಷ್ಟ್ರೀಯ ಹಬ್ಬ ಕಾರ್ಯಕ್ರಮ ನಡೆಸುತ್ತಿರುವ ಬಗ್ಗೆ ದೂರು ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಕಳೆದ ಬಾರಿ ನಡೆದ 2 ಕಾರ್ಯಕ್ರಮಗಳ ವೆಚ್ಚವನ್ನು ಪಂಚಾಯತಿ ಅಧಿಕಾರಿಗಳಿಂದ
ಭರಿಸುವಂತೆ ಮೇಲಧಿಕಾರಿಗಳಿಂದ ಸೂಚನೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿಯ ಕಾರ್ಯಕ್ರಮವನ್ನು ಪಂಚಾಯತಿ ವೆಚ್ಚದಲ್ಲಿ ನಡೆಸಲು ಅಸಾಧ್ಯ ಎನ್ನುತ್ತಾರೆ ಕುಶಾಲನಗರ ಪಟ್ಟಣ ಪಂಚಾಯತಿಯ ಈಗಿನ ಮುಖ್ಯಾಧಿಕಾರಿ ಶ್ರೀಧರ್. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಈ ಬಾರಿ ಪಂಚಾಯತಿ ಆಡಳಿತದ ನೇತೃತ್ವದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆಯನ್ನು ಸಾಮೂಹಿಕವಾಗಿ ಆಯೋಜಿಸಲು ಅಸಾಧ್ಯ ಎಂದು ಕೈಚೆಲ್ಲಿರುವ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಎಂ.ಎಂ ಚರಣ್ ಈ ಹಿಂದಿನ ಸಮಿತಿ ಮೂಲಕ ಆಯೋಜಿಸುವಂತೆ ಮನವಿ ಮಾಡಿರುವದಾಗಿ ತಿಳಿದುಬಂದಿದೆ. ಕುಶಾಲನಗರ ಸುತ್ತಮುತ್ತಲಿನ 25 ಶಾಲಾ ಕಾಲೇಜು ಸೇರಿದಂತೆ 75ಕ್ಕೂ ಹೆಚ್ಚು ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಕುಶಾಲನಗರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮೂಲಕ ಕಳೆದ 14 ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ನಡೆದು ಬರುತ್ತಿದ್ದ ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ಇದೀಗ ಗೊಂದಲ ಮೂಡಿರುವ ಬಗ್ಗೆ ಸ್ಥಳೀಯ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಂಘ-ಸಂಸ್ಥೆಗಳ ಪ್ರಮುಖರು ಬೇಸರ ವ್ಯಕ್ತಪಡಿಸುತ್ತಿರುವದು ಕಂಡು ಬಂದಿದೆ. ತಕ್ಷಣ ಕುಶಾಲನಗರ ಪಟ್ಟಣ ಪಂಚಾಯತಿ ಆಡಳಿತ ಮಂಡಳಿ ಈ ಬಗ್ಗೆ ನಿರ್ಧಾರ ಕೈಗೊಂಡು ಗೊಂದಲ ನಿವಾರಣೆ ಮಾಡಬೇಕಾಗಿದೆ ಎನ್ನುವದು ಸಾರ್ವಜನಿಕರ ಆಗ್ರಹವಾಗಿದೆ. -ಸಿಂಚು