ಕೂಡಿಗೆ, ಸೆ. 20: ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕೂಡಿಗೆ ಸದ್ಗುರು ಅಪ್ಪಯ್ಯಸ್ವಾಮಿ ಪ್ರೌಢಶಾಲೆ ಆಶ್ರಯದಲ್ಲಿ 2016-17ನೇ ಸಾಲಿನ ಸೋಮವಾರ ಪೇಟೆ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ-ಬಾಲಕಿಯರ ಕ್ರೀಡಾಕೂಟ ಕೂಡಿಗೆ ಸದ್ಗುರು ಅಪ್ಪಯ್ಯಸ್ವಾಮಿ ಪ್ರೌಢಶಾಲೆ ಯಲ್ಲಿ ನಡೆಯಿತು. ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ಕೊಡಗು ಚಿಕ್ಕ ಜಿಲ್ಲೆಯಾದರೂ ರಾಷ್ಟ್ರೀಯ, ಅಂತರ ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ಸೃಷ್ಟಿ ಮಾಡಿದ ಜನ್ಮಭೂಮಿ. ಇಂತಹ ಜಿಲ್ಲೆಯ ಕ್ರೀಡಾಪಟುಗಳು ಮಾದರಿ ವ್ಯಕ್ತಿಗಳಾಗಿ ನಮ್ಮ ಇಂದಿನ ಕ್ರೀಡಾಪಟುಗಳಿಗೆ ಸ್ಫೂರ್ತಿದಾಯಕರಾಗ ಬೇಕಿದೆ. ಕ್ರೀಡಾ ಕ್ಷೇತ್ರದಲ್ಲಿ ಸೋಲು-ಗೆಲುವುಗಳು ಸ್ವಾಭಾವಿಕ. ಆದರೆ ಸ್ಪರ್ಧೆಯಲ್ಲಿ ಪಾಲ್ಗೊಂಡು ತಮ್ಮ ಸಾಮಥ್ರ್ಯವನ್ನು ಮೆರೆಯ ಬೇಕಾಗಿದೆ ಎಂದು ಹೇಳಿದರು.

ಸಮಾರಂಭವನ್ನು ಉದ್ಘಾಟಿಸಿದ ಬಸವನಹಳ್ಳಿ ಲ್ಯಾಂಪ್ ಸೊಸೈಟಿ ಅಧ್ಯಕ್ಷ ಎಸ್.ಎನ್. ರಾಜಾರಾವ್ ಮಾತನಾಡಿ, ತೀರ್ಪುಗಾರರು ಕೊಡುವ ತೀರ್ಮಾನವನ್ನು ಕ್ರೀಡಾಪಟುಗಳು ಶಿರಸಾವಹಿಸಬೇಕು. ಸೋಲು-ಗೆಲುವುಗಳು ಇಲ್ಲಿ ಮುಖ್ಯವಲ್ಲ. ಶಿಕ್ಷಕರನ್ನು ವಿದ್ಯಾರ್ಥಿಗಳು ಗೌರವಿಸಬೇಕು. ಕ್ರೀಡಾರ್ಥಿಗಳನ್ನು ಸಿದ್ಧಗೊಳಿಸುವಲ್ಲಿ ಅವರ ಪಾತ್ರ ಬಹು ಮುಖ್ಯ. ರಾಜ್ಯ ಮಟ್ಟಕ್ಕೆ, ಅಂತರರಾಜ್ಯ ಮಟ್ಟಕ್ಕೆ ಕೊಂಡೊಯ್ಯುವ ಶಕ್ತಿ ಕೇವಲ ಶಿಕ್ಷಕರಿಂದ ಮಾತ್ರ ಸಾಧ್ಯ. ಈ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರೊಂದಿಗೆ ಕೈಜೋಡಿಸಬೇಕು ಎಂದರು. ಸಮಾರಂಭವನ್ನು ಉದ್ದೇಶಿಸಿ ಕೂಡಿಗೆ ಶಿಕ್ಷಕ ತರಬೇತಿ ಸಂಸ್ಥೆಯ ಪ್ರಾಂಶುಪಾಲ ದೊಡ್ಡಮಲ್ಲಪ್ಪ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಂತ್ ವಹಿಸಿದ್ದರು.

ಕ್ರೀಡಾ ಜ್ಯೋತಿಯನ್ನು ಕೂಡಿಗೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ಹಸ್ತಾಂತರಿಸಿದರು. ದೈಹಿಕ ಶಿಕ್ಷಕ ವೆಂಕಟೇಶ್ ಪ್ರತಿಜ್ಞಾ ವಚನ ಬೋಧಿಸಿದರು. ಆಡಳಿತ ಮಂಡಳಿ ಸದಸ್ಯ ಬಿ.ಪಿ. ಅಪ್ಪಣ್ಣ, ಜಿ.ಪಂ. ಸದಸ್ಯೆ ಮಂಜುಳಾ, ಬಿಇಓ ಮಲ್ಲೇಸ್ವಾಮಿ, ಮೂಕಾಂಬಿಕಾ ಶಾಲಾ ಮುಖ್ಯಸ್ಥ ಗೋಪಾಲ್, ಜಿಲ್ಲಾ ದೈಹಿಕ ಶಿಕ್ಷಕ ಸಂಘದ ಪದಾಧಿಕಾರಿ ಕಾವೇರಮ್ಮ, ಕ್ರೀಡಾಶಾಲೆಯ ಮುಖ್ಯೋಪಾಧ್ಯಾಯಿನಿ ಕುಂತಿ ಬೋಪಯ್ಯ, ಶಿಕ್ಷಕರಾದ ಊ.ರಾ. ನಾಗೇಶ್, ಮೈನಾ ವೆಂಕಟ್‍ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ರೀಡಾಕೂಟದಲ್ಲಿ ಪ್ರೌಢಶಾಲೆಯ ನಾಲ್ಕು ವಲಯಗಳು, ಪ್ರಾಥಮಿಕ ಶಾಲೆಯ ಒಂಭತ್ತು ವಲಯಗಳ ಸುಮಾರು 250 ಕ್ರೀಡಾ ಪಟುಗಳು (ಬಾಲಕ-ಬಾಲಕಿಯರು) ವಾಲಿಬಾಲ್, ಕಬಡ್ಡಿ ಮತ್ತು ಥ್ರೋಬಾಲ್ ಪಂದ್ಯಾಟಗಳಲ್ಲಿ ಭಾಗವಹಿಸಿದ್ದರು.