ಕೂಡಿಗೆ, ಅ. 20: ಕೊಡಗು ಅರಣ್ಯ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ತೆರವಾಗಿರುವ ಬಿಆರ್‍ಎಫ್‍ಓ (ಫಾರೆಸ್ಟ್) ನೇಮಕ ಆಯ್ಕೆ ಪ್ರಕ್ರಿಯೆಯು ಇಂದು ಕೂಡಿಗೆಯ ಸರಕಾರಿ ಕ್ರೀಡಾ ಶಾಲೆಯ ಕ್ರೀಡಾಂಗಣದಲ್ಲಿ ನಡೆಯಿತು.ಆಯ್ಕೆ ಪ್ರಕ್ರಿಯೆಯಲ್ಲಿ 18 ಅಭ್ಯರ್ಥಿಗಳು ಪಾಲ್ಗೊಂಡಿದ್ದರು. 7 ಮಹಿಳಾ ಅಭ್ಯರ್ಥಿಗಳು ಹಾಗೂ 11 ಪುರುಷ ಅಭ್ಯರ್ಥಿಗಳು ಇದ್ದರು.

20 ಕಿ.ಮೀ. ನಡೆದು ನಾಲ್ಕು ಗಂಟೆಗಳ ಅಂತರದಲ್ಲಿ ಹೊರಟ ಸ್ಥಳವನ್ನು ಸೇರಲು ಪುರುಷ ಅಭ್ಯರ್ಥಿಗಳಿಗೆ ನಿಗದಿಯಾಗಿತ್ತು. ಇದೇ ಮಾದರಿಯಲ್ಲಿ ಮಹಿಳಾ ಅಭ್ಯರ್ಥಿಗಳು 4 ಗಂಟೆಯ ಅವಧಿಯಲ್ಲಿ 16 ಕಿ.ಮೀ. ನಡಿಗೆಯನ್ನು ನಿಗದಿಪಡಿಸಲಾಗಿತ್ತು. 18 ಅಭ್ಯರ್ಥಿಗಳೂ ಈ ಅವಧಿಯನ್ನು ಪೂರ್ಣಗೊಳಿಸಿದ್ದಾರೆ.

ಅಭ್ಯರ್ಥಿಗಳು ಕೊಡಗು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಆಯ್ಕೆ ಪ್ರಕ್ರಿಯೆಯ ಸಂದರ್ಭ ಕೊಡಗು ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ ಏಡುಕೊಂಡಲ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಡಿಕೇರಿ ವಿಭಾಗದ ನಾಗರಾಜು, ಫಿಲಿಪ್ ಆಂಟೋನಿ, ಸೀಮಾ, ಚಿಣ್ಣಪ್ಪ, ಕುಶಾಲನಗರ ವಲಯ ಅರಣ್ಯಾಧಿಕಾರಿ ನೆಹರು ಸೇರಿದಂತೆ ಇಲಾಖೆಯ ವಿವಿಧ ವೃತ್ತಗಳ ಅಧಿಕಾರಿಗಳು, ಸಿಬ್ಬಂದಿ ವರ್ಗ ಇದ್ದರು.

ಇದೇ ಮಾದರಿಯಲ್ಲಿ ತಾ. 24 ರಂದು ಕೂಡಿಗೆ ಕ್ರೀಡಾಶಾಲೆಯ ಕ್ರೀಡಾಂಗಣದಲ್ಲಿ ಅರಣ್ಯ ಇಲಾಖೆಯ ವತಿಯಿಂದ 72 ಗಾರ್ಡ್‍ಗಳ (ಅರಣ್ಯ ರಕ್ಷಕ) ಆಯ್ಕೆ ನೇಮಕ ಪ್ರಕ್ರಿಯೆ ನಡೆಯಲಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.