ಕೂಡಿಗೆ, ಅ. 21: ಇಲ್ಲಿಗೆ ಸಮೀಪದ ಕೂಡುಮಂಗಳೂರು ಗ್ರಾಮ ಪಂಚಾಯಿತಿಯ 2015-16ನೇ ಸಾಲಿನ ಜಮಾಬಂದಿ ಕಾರ್ಯಕ್ರಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ಅಧ್ಯಕ್ಷತೆಯಲ್ಲಿ ನಡೆಯಿತು.

ಗ್ರಾ.ಪಂ. ವತಿಯಿಂದ ಕಳೆದ ಸಾಲಿನಲ್ಲಿ ರೂ. 2,97,412 ಲಕ್ಷ ಅನುದಾನವನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಚಿಕ್ಕತ್ತೂರು ಸ.ಹಿ.ಪ್ರಾ. ಶಾಲೆಯ ತಡೆಗೋಡೆ ನಿರ್ಮಾಣಕ್ಕೆ ವಿನಿಯೋಗಿಸಿರುವದು ಸರಿಯಾದ ಕ್ರಮವಲ್ಲ ಎಂದು ಗ್ರಾಮಸ್ಥರಾದ ನಾಗೇಂದ್ರ ಹೇಳಿದರು. ಅದಕ್ಕೆ ಸೂಕ್ತ ಕಾರಣವನ್ನು ನೀಡಿದ ಅವರು ಶಾಲೆಗಳಿಗೆ ಸರ್ವ ಶಿಕ್ಷಣ ಅಭಿಯಾನದಡಿಯಲ್ಲಿ ತಡೆಗೋಡೆ, ಅಕ್ಷರ ದಾಸೋಹ ಕೊಠಡಿ ಹಾಗೂ ಸುಣ್ಣ-ಬಣ್ಣಕ್ಕೆ ನೇರವಾಗಿ ಹಣ ನೀಡುವದರಿಂದ, ಗ್ರಾಮ ಪಂಚಾಯಿತಿಯು ಶಿಕ್ಷಣ ಸಂಸ್ಥೆಗಳಿಗೆ ನೀಡುವ ಹಣವನ್ನು ಕುಡಿಯುವ ನೀರಿಗಾಗಿ ಬೋರ್‍ವೆಲ್ ಕೊರೆಸುವ ವ್ಯವಸ್ಥೆಗೆ ವಿನಿಯೋಗಿಸಬಹುದು ಎಂದು ಸಲಹೆ ನೀಡಿದರು.

ಸಭೆಯಲ್ಲಿ 2015-16ನೇ ಸಾಲಿನಲ್ಲಿ ವಿವಿಧ ಕಾಮಗಾರಿಗಳಿಗೆ ಹಣ ಖರ್ಚಾದ ಮಾಹಿತಿಗಳನ್ನು ಮಂಡಿಸಿ, ಇದರ ಬಗ್ಗೆ ಚರ್ಚಿಸ ಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೂಡಿಗೆ ಜಿ.ಪಂ. ಸದಸ್ಯೆ ಕೆ.ಆರ್. ಮಂಜುಳಾ ಆಗಮಿಸಿದ್ದರು. ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಆಯಿಷಾ, ನೋಡಲ್ ಅಧಿಕಾರಿಯಾಗಿ ಆಗಮಿಸಿದ್ದ ತಾಲೂಕು ಪಂಚಾಯಿತಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕ ಸುನೀಲ್ ಕುಮಾರ್ ಪಾಲ್ಗೊಂಡಿದ್ದರು.

ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯ ಗಣೇಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ.ವಿ. ಸಣ್ಣಪ್ಪ ಇದ್ದರು. ಸಭೆಯಲ್ಲಿ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.