ಸಿದ್ದಾಪುರ, ಜು. 30: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವೀರಾಜಪೇಟೆ ಹಾಗೂ ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ವೀರಾಜಪೇಟೆ ಆತ್ಮಯೋಜನೆ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ಅಮ್ಮತ್ತಿ ವಲಯ ಇವರ ಸಂಯುಕ್ತ ಅಶ್ರಯದಲ್ಲಿ. ಡಾ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಅಮ್ಮತ್ತಿ ಬಂಡಾಡಿ ರಸ್ತೆಯ ಸುನೀಲ್ ಕುಮಾರ್ ನಿವಾಸದಲ್ಲಿ ಕೃಷಿ ವಿಚಾರ ಸಂಕಿರಣ ಮತ್ತು ಭತ್ತದ ಕೃಷಿಯಲ್ಲಿ ಯಾಂತ್ರಿಕೃತ ನಾಟಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಕುರಿತು ಪ್ರಗತಿಪರ ಕೃಷಿಕ ಎಸ್.ಸಿ. ತಿಮ್ಮಯ್ಯ ನಲ್ಲೂರು ಮಾತನಾಡಿ, ಈ ಯಂತ್ರದ ಮೂಲಕ ನಾಟಿ ಮಾಡುವದು ರೈತರಿಗೆ ತುಂಬಾ ಅನುಕೂಲ ಹಾಗೂ ಆರ್ಥಿಕವಾಗಿ ಲಾಭದಾಯಕ. ಇತ್ತೀಚಿನ ದಿನಗಳಲ್ಲಿ ಕಾರ್ಮಿಕರ ಸಮಸ್ಯೆಯಿಂದ ಬಳಲುತ್ತಿರುವ ರೈತರಿಗೆ ಈ ಯಂತ್ರದಿಂದ ನಾಟಿ ಮಾಡುವದು ಆದಾಯಕರ ಎಂದು ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ವೀರಾಜಪೇಟೆ ತಾಲೂಕು ಯೋಜನಾಧಿಕಾರಿ ಬಿ. ವಸಂತ ಮಾತನಾಡಿ, ರೈತರಿಗೆ ಸೌಲಭ್ಯ ದೊಂದಿಗೆ ಯಂತ್ರದೊಂದಿಗೆ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರಾಜ್ಯ ಸರಕಾರದ ಕೃಷಿ ಯಂತ್ರಧಾರೆ ಮೂಲಕ ರಾಜ್ಯದ ಒಟ್ಟು 164 ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವದಾಗಿ ತಿಳಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಅಮ್ಮತ್ತಿ ರೈತ ಸಂಘದ ಅಧ್ಯಕ್ಷ ಕೆ.ಯು. ಗಣಪತಿ ನೆರವೇರಿಸಿದರು.

ಅಧ್ಯಕ್ಷತೆಯನ್ನು ಕಾರ್ಮಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಎನ್. ಸುನೀತಾ ವಹಿಸಿದ್ದು, ವೀರಾಜಪೇಟೆ ಸಹಾಯಕ ಕೃಷಿ ನಿರ್ದೇಶಕರು ಕೃಷಿ ಇಲಾಖೆಯ ರೀನಾ, ವೀರಾಜಪೇಟೆ ಜಿಲ್ಲಾ ಪಂಚಾಯಿತಿ ಸದಸ್ಯ ಸಶಿ ಸುಬ್ರಮಣಿ, ಸುನೀಲ್ ಕುಮಾರ್ ಸೇರಿದಂತೆ ಒಕ್ಕೂಟದ ಅಧ್ಯಕ್ಷರು ಮತ್ತಿತರರು ಹಾಜರಿದ್ದರು.