ಮಡಿಕೇರಿ, ಜ.7 :ಪೂರ್ವಭಾವಿ ತಯಾರಿಗಳಿಲ್ಲದೆ ಐನೂರು ಹಾಗೂ ಸಾವಿರ ರೂ. ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿರುವ ಕೇಂದ್ರ ಸರಕಾರದ ಕ್ರಮದಿಂದ ಮಹಿಳೆಯರು ಸಾಕಷ್ಟು ಕಷ್ಟ-ನಷ್ಟಗಳನ್ನು ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿರುವ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕ ಜ.9 ರಂದು “ತಮಟೆ ಬಾರಿಸುವ” ಮೂಲಕ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಪತ್ರಿಕಾ ಹೇಳಿಕೆ ನೀಡಿರುವ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಎಸ್.ಡಿ.ಕುಮುದಾ ಧರ್ಮಪ್ಪ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿಯನ್ನು ಬಲವಂತವಾಗಿ ಹೇರಿದ್ದಾರೆ ಎಂದು ಆರೋಪಿಸಿದ್ದಾರೆ. 2016 ನ.8 ರಂದು ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದ ನಂತರ ಜನರ ಬದುಕು ದುಸ್ತರವಾಗಿದೆ. ಆರಂಭದಲ್ಲಿ ಭ್ರಷ್ಟಾಚಾರ ನಿರ್ಮೂಲನೆ, ಕಪ್ಪು ಹಣ, ಖೋಟಾ ನೋಟು ದಂಧೆ ಹಾಗೂ ಭಯೋತ್ಪಾದನೆಯ ನಿಯಂತ್ರಣಕ್ಕಾಗಿ ಈ ಕ್ರಮ ಎಂದು ಹೇಳಿಕೊಂಡ ಕೇಂದ್ರ ಸರಕಾರ ನಂತರ 50 ದಿನಗಳ ಗಡುವನ್ನು ಕೇಳಿಕೊಂಡಿತ್ತು. ಆದರೆ ಇಲ್ಲಿಯವರೆಗೂ ಆರ್ಥಿಕ ಪರಿಸ್ಥಿತಿ ಸುಧಾರಿಸದೇ ಇರುವದರಿಂದ ಮಹಿಳೆಯರು ಆತಂಕಕ್ಕೀಡಾಗಿದ್ದಾರೆ.

ಈ ಹಿನ್ನೆಲೆ ತಾ. 9 ರಂದು ಮಡಿಕೇರಿ ಮಾರುಕಟ್ಟೆ ಬಳಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ತಮಟೆ ಬಾರಿಸುವ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ ಎಂದು ಕುಮುದಾ ಧರ್ಮಪ್ಪ ಹೇಳಿದ್ದಾರೆ.

ಪ್ರತಿಭಟನೆಯಲ್ಲಿ ಬೂತ್, ವಲಯ, ಬ್ಲಾಕ್ ಹಾಗೂ ಜಿಲ್ಲಾ ಕಾಂಗ್ರೆಸ್‍ನ ಎಲ್ಲಾ ಮುಖಂಡರು, ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು ಪಾಲ್ಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.