ವೀರಾಜಪೇಟೆ, ಸೆ. 29: ಕೇರಳದ ಇರಿಟ್ಟಿ, ಮಟ್ಟನೂರು, ಕೂಟುಪೊಳೆ ಸೇರಿದಂತೆ ವಿವಿಧೆಡೆಗಳಿಂದ ಕೊಡಗಿಗೆ ಅನಧಿಕೃತವಾಗಿ ಮರಳು, ಕೆತ್ತು ಕಲ್ಲು ಇಟ್ಟಿಗೆ (ಕೆಂಪು ಇಟ್ಟಿಗೆ), ಜಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದು, ಇದಕ್ಕೆ ಗಡಿ ಭಾಗದಲ್ಲಿ ಪೊಲೀಸ್ ಇಲಾಖೆ ಪರೋಕ್ಷವಾಗಿ ಬೆಂಬಲಿಸುತ್ತಿರುವದಾಗಿ ಮಡಿಕೇರಿ ತಾಲೂಕಿನ ಮಾನವ ಹಕ್ಕುಗಳ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಅಧ್ಯಕ್ಷ ಜಿನ್ನು ನಾಣಯ್ಯ ದೂರಿದ್ದಾರೆ.

ದಕ್ಷಿಣ ಕೊಡಗಿನಲ್ಲಿ ಮರಳಿನ ಅಭಾವ ತೀವ್ರವಾಗಿರುವ ಹಿನ್ನೆಲೆ ಕೇರಳದ ಕೃತಕ ಮರಳಿಗೆ (ಎಂ.ಸ್ಯಾಂಡ್) ಬೇಡಿಕೆ ಹೆಚ್ಚುತ್ತಿರುವದನ್ನು ಕೆಲವು ಪೊಲೀಸ್ ಅಧಿಕಾರಿ ಸದ್ಬಳಕೆ ಮಾಡಿಕೊಂಡು ಅನಧಿಕೃತ ಸಂಪಾದನೆಯಲ್ಲಿ ತೊಡಗಿದ್ದಾರೆ.

ಕೊಡಗು-ಕೇರಳ ಗಡಿ ಪ್ರದೇಶವಾದ ಪೆರುಂಬಾಡಿ ಚೆಕ್ ಪೋಸ್ಟ್‍ನಲ್ಲಿ ವಾಣಿಜ್ಯ ಮಾರಾಟ ತೆರಿಗೆ ಕಚೇರಿ ಇದ್ದರೂ ಇದಕ್ಕೆ ತೆರಿಗೆ ಸಂಗ್ರಹಿಸುತ್ತಿಲ್ಲ. ಇದರಿಂದ ಸರಕಾರಕ್ಕಾಗಲಿ, ಕೊಡಗಿನ ಜನತೆಗಾಗಲಿ ಯಾವದೇ ಪ್ರಯೋಜನವಾಗುತ್ತಿಲ್ಲ. ಸರಕಾರಕ್ಕೆ ತೆರಿಗೆ ಸಂದಾಯ ಆಗುತ್ತಿಲ್ಲ. ಕೇರಳದ ವ್ಯಾಪಾರಸ್ಥರು ಇದರಿಂದ ಲಾಭ ಪಡೆಯುತ್ತಿದ್ದಾರೆ. ಪ್ರತಿ ದಿನ 50 ರಿಂದ 100 ಲಾರಿಗಳಷ್ಟು ಮರಳು, ಇಟ್ಟಿಗೆ, ಜಲ್ಲಿ ಸಾಗಾಟ ವಾಗುತ್ತಿದೆ ಎಂದು ಜಿನ್ನು ನಾಣಯ್ಯ ಆರೋಪಿಸಿದ್ದಾರೆ.

ಕಾರ್ಮಿಕ ಹಾಗೂ ಲಾರಿ ಮಾಲೀಕರ ಸಂಘಟನೆ ಸರಕಾರ ಮರಳು ಸರಬರಾಜಿಗೆ ಸಂಬಂಧಿಸಿದಂತೆ ರಾಜ್ಯದಾದ್ಯಂತ ಏಕರೂಪ ನೀತಿಯನ್ನು ಜಾರಿಗೊಳಿಸಿ ಪ್ರತಿಯೊಬ್ಬರಿಗೂ ಮುಕ್ತವಾಗಿ ನ್ಯಾಯ ಸಮ್ಮತವಾದ ಬೆಲೆಯಲ್ಲಿ ಮರಳು ಸಿಗುವಂತೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿರುವದನ್ನು ಬೆಂಬಲಿಸುವದಾಗಿ ಜಿನ್ನು ನಾಣಯ್ಯ ತಿಳಿಸಿದ್ದಾರೆ.